DK Shivakumar Bigg Boss Kannada 12: ಬಿಗ್‌ಬಾಸ್ ಕಾರ್ಯಕ್ರಮ ಮತ್ತು ಜಾಲಿವುಡ್ ಸ್ಟುಡಿಯೋ ಪ್ರಕರಣದಲ್ಲಿ ಏಕಾಏಕಿ ಕ್ರಮ ಕೈಗೊಂಡಿದ್ದಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್‌ಪಿಗೆ ತಾನು ಬೈದಿರುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದು ತನ್ನ ವಿರುದ್ಧದ ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದರು
ಬೆಂಗಳೂರು (ಅ.9): ‘ಬಿಗ್‌ಬಾಸ್ ಕಾರ್ಯಕ್ರಮ, ಜಾಲಿವುಡ್ ಸ್ಟುಡಿಯೋ ಪ್ರಕರಣದ ವಿಚಾರದಲ್ಲಿ ಏಕಾಏಕಿ ಯಾಕೆ ಕ್ರಮ ಕೈಗೊಂಡಿರಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಬೈದಿದ್ದೇನೆ. ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದೇನೆ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ದೊಡ್ಡ ರಾಜಕೀಯ ಷಡ್ಯಂತ್ರ ರೂಪಿಸಲು ಯತ್ನಿಸುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ನಾನೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬೈದಿದ್ದೇನೆ. ಸರಿಪಡಿಸಿಕೊಳ್ಳಲು ಅವರಿಗೆ ಅವಕಾಶ ನೀಡಿ, ಈ ರೀತಿ ಮಾಡಬೇಡಿ ಎಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಜಾಲಿವುಡ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದೇ ನಾನು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ ಎಂದರು.
ಕಿಚ್ಚ ಸುದೀಪ್ ವಿರುದ್ಧದ ಸೇಡಿಗೆ ಈ ರೀತಿ ಮಾಡಿದ್ದೀರಿ ಎಂಬ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ರಾಜಕೀಯವಾಗಿ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ. ಆತ ನಮ್ಮ ಹುಡುಗ (ಸುದೀಪ್) ಆ ಹೆಣ್ಣು ಮಗಳು (ಸುದೀಪ್ ಪತ್ನಿ) ಕೂಡ ನಮ್ಮ ಮನೆಗೆ ಬಂದಿದ್ದರು. ಯಾರೋ ಕೆಲವರಿಗೆ ಹೇಳಿ ಈ ರೀತಿಯ ಷಡ್ಯಂತ್ರ ಮಾಡಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: 2 ವರ್ಷ ಹಳೆ ನೋಟಿಸ್‌ಗೂ ಪ್ರತಿಕ್ರಿಯೆ ಇಲ್ಲ, ನಿಯಮ ಪಾಲಿಸದ್ದಕ್ಕೆ ಜಾಲಿವುಡ್‌ಗೆ ಬೀಗ!
ಯುವಕರ ಉದ್ಯೋಗದ ಪ್ರಶ್ನೆ ಇದೆ. ಖಾಸಗಿಯವರು ಬಂಡವಾಳ ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದೋ ಅದಕ್ಕೆ ಅವಕಾಶ ನೀಡಿ. ಏಕಾಏಕಿ ಕ್ರಮ ಕೈಗೊಳ್ಳಬೇಡಿ ಎಂದು ಸೂಚಿಸಿದ್ದೇನೆ. ಇದು ಕೇವಲ ಬಿಗ್ ಬಾಸ್ ಅಲ್ಲ, ಎಲ್ಲಾ ಮನರಂಜನಾ ಕಾರ್ಯಕ್ರಮಗಳಿಗೂ ಅನ್ವಯ ಎಂದು ಹೇಳಿದರು.
- ಪ್ರಕರಣದಲ್ಲಿ ಎಸ್ಪಿ, ಡಿಸಿಗೆ ಬೈದಿದ್ದೇನೆ: ಡಿಸಿಎಂ
- ನನ್ನ ಮೇಲೆ ದೊಡ್ಡ ರಾಜಕೀಯ ಷಡ್ಯಂತ್ರಕ್ಕೆ ಯತ್ನ
- ಜಾಲಿವುಡ್ ಉದ್ಘಾಟಿಸಿದ್ದೇ ನಾನು: ಶಿವಕುಮಾರ್
