ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಮೆಕ್ಕೆಜೋಳ ನೀತಿಯನ್ನು ಟೀಕಿಸಿದ ಅವರು, ಮಂಗನ ಕಾಯಿಲೆಗೆ ಲಸಿಕೆ ಅಭಿವೃದ್ಧಿ, ಬಾಣಂತಿ ಸಾವು ಪ್ರಕರಣ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ (ಜ.30): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಆಂತರಿಕ ಸಂಘರ್ಷದ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಶಿವಮೊಗ್ಗದಲ್ಲಿ ತಳ್ಳಿಹಾಕಿದ್ದಾರೆ. ರಾಜ್ಯ ಸರ್ಕಾರದ ಪರಿಸ್ಥಿತಿ ಉತ್ತಮವಾಗಿದ್ದು, ಅಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮೆಕ್ಕೆಜೋಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ:
ರೈತರ ಸಮಸ್ಯೆಗಳ ಕುರಿತು ಮಾತನಾಡಿದ ಸಚಿವರು, ಕಬ್ಬು ಬೆಳೆಗಾರರ ವಿಷಯದಲ್ಲಿ ರಾಜ್ಯ ಸರ್ಕಾರ ಸ್ಪಂದಿಸಿದೆ. ಆದರೆ, ಮೆಕ್ಕೆಜೋಳ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯನ್ನು ತೀವ್ರವಾಗಿ ಟೀಕಿಸಿದರು. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ, ಪಡಿತರ ವ್ಯವಸ್ಥೆ ನೀಡಿದರೆ ಮಾತ್ರ ಖರೀದಿಸುವುದಾಗಿ ಹೇಳಿ ನಿಷ್ಕ್ರಿಯೆ ತೋರಿದೆ. ಕೇಂದ್ರ ಸಚಿವ ಪ್ರಹಲ್ಲಾದ್ ಜೋಶಿ ಅವರು ಪ್ರಧಾನಿ ಮೋದಿ ಬಂದಾಗ ಮೆಕ್ಕೆಜೋಳದ ವಿಷಯವನ್ನು ಏಕೆ ಹೇಳಲಿಲ್ಲ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರವು ಪ್ರತಿಯೊಂದು ವಿಷಯಕ್ಕೂ ಸ್ಪಂದಿಸುತ್ತಿದ್ದು, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಮತ್ತು ಅತಿ ಹೆಚ್ಚು ತೆರಿಗೆ ಹಾಗೂ ಬಂಡವಾಳ ಹೂಡಿಕೆ ಮಾಡುವ ರಾಜ್ಯ ಎಂದು ಹೆಸರು ಪಡೆದಿದೆ ಎಂದು ತಿಳಿಸಿದರು.
ಹೆಚ್‌ಡಿಕೆ ಹೇಳಿಕೆಗೆ ತಿರುಗೇಟು
ಕೆಲ ಇಲಾಖೆಗಳಲ್ಲಿ 10% ಪ್ರಗತಿ ಕೂಡ ಆಗಿಲ್ಲ ಎಂಬ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಗುಂಡೂರಾವ್ ತಿರುಗೇಟು ನೀಡಿದ ಸಚಿವರು, ಎಚ್‌ಡಿ ಕುಮಾರಸ್ವಾಮಿ ಅವರಿಗೆ ಎಷ್ಟು ಮಾಹಿತಿ ಇದೆಯೋ ಗೊತ್ತಿಲ್ಲ. ಅವರು ಯಾವಾಗಲೂ ಅರ್ಧಂಬರ್ಧ ವಿಷಯ ಇಟ್ಟುಕೊಂಡು ಮಾತನಾಡುತ್ತಾರೆ. ನಾನು ಬಿಚ್ಚುತ್ತೇನೆ, ತೋರಿಸುತ್ತೇನೆ ಎಂದು ಇದುವರೆಗೂ ಏನು ಬಿಚ್ಚಿದ್ದಾರೆ, ಏನು ತೋರಿಸಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.
ಮಂಗನ ಕಾಯಿಲೆ ಲಸಿಕೆ ಅಭಿವೃದ್ಧಿ
ರಾಜ್ಯದ ಆರೋಗ್ಯ ಕ್ಷೇತ್ರದ ಕುರಿತು ಪ್ರಗತಿ ಮಾಹಿತಿ ನೀಡಿದ ಸಚಿವರು, ಮಂಗನ ಕಾಯಿಲೆಗೆ (KFD) ಲಸಿಕೆ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು. ಲಸಿಕೆಗಾಗಿ ಐಸಿಎಂಆರ್(ICMR) ಜೊತೆ ಚರ್ಚೆ ನಡೆಸಲಾಗಿದೆ ಮತ್ತು ಈಗಾಗಲೇ ಟ್ರಯಲ್ ಆರಂಭವಾಗಿದೆ. ಲಸಿಕೆಯ ಗುಣಮಟ್ಟ ಪರೀಕ್ಷೆಯಾಗಿದೆ. ಪ್ರಸ್ತುತ ಫೇಸ್-1 ಟ್ರಯಲ್ ಆಗಬೇಕಿದೆ. ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ, ನಂತರ ಮನುಷ್ಯರ ಮೇಲೆ ಪ್ರಯೋಗ ನಡೆದು ಲಸಿಕೆ ಸಿದ್ಧವಾಗಲಿದೆ ಎಂದರು. ಇದೇ ವೇಳೆ ಡೆಂಗ್ಯೂ ನಿಯಂತ್ರಣ ವಿಚಾರವಾಗಿ ಮಾತನಾಡಿದ ಸಚಿವರು, ಈ ಬಾರಿ ಮುಂಜಾಗ್ರತಾ ಕ್ರಮಗಳ ಫಲವಾಗಿ ಡೆಂಗ್ಯೂ ಪ್ರಕರಣಗಳು ಶೇ. 80ರಷ್ಟು ಇಳಿಕೆ ಕಂಡಿವೆ ಎಂದರು.
ಬಾಣಂತಿ ಸಾವು ಪ್ರಕರಣ ನಿಯಂತ್ರಣಕ್ಕೆ ಕ್ರಮ
ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣಗಳ ಕುರಿತು ಮಾತನಾಡಿದ ಅವರು, ಈ ಬಗ್ಗೆ ಆಡಿಟ್ ಮಾಡಿಸುತ್ತೇವೆ. ತಪ್ಪು ನಡೆದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ 57-58% ಇರುವ ಬಾಣಂತಿ ಸಾವಿನ ಪ್ರಕರಣವನ್ನು 20% ಕಡಿತ ಮಾಡುವ ಪ್ರಯತ್ನ ನಡೆದಿದೆ. ಸ್ತ್ರೀರೋಗ ತಜ್ಞರು ಮತ್ತು ಅರಿವಳಿಕೆ ತಜ್ಞರು ಸೇರಿದಂತೆ 24 ಗಂಟೆಗಳ ಕಾಲ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಿಎಂ ಕುರ್ಚಿಗಾಗಿ ಯಾವುದೇ ಗೊಂದಲವಿಲ್ಲ
ಕಾಂಗ್ರೆಸ್‌ನಲ್ಲಿ ಪ್ರತಿಯೊಂದು ಗೌರವಯುತವಾಗಿ ನಡೆಯುವಂತಹ ವಾತಾವರಣವಿದೆ. ಮುಖ್ಯಮಂತ್ರಿ ಸ್ಥಾನದ ಚರ್ಚೆ ಹೈಕಮಾಂಡ್ ಮಟ್ಟದಲ್ಲಿದೆ. ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ಸ್ವತಃ ಸಿಎಂ ಕೂಡ ಹೇಳಿದ್ದಾರೆ. ತಾವೆಲ್ಲ ಹುಡುಕುತ್ತಿದ್ದೀರಾ ಅಂತಹ ಗೊಂದಲ ಯಾವುದೇ ನಡೆದಿಲ್ಲಎಂದು ಪುನರುಚ್ಚರಿಸಿದರು.
ಸಿದ್ದರಾಮಯ್ಯನವರಂತಹ ಮುತ್ಸದ್ದಿ ನಾಯಕನನ್ನು ರಾಜ್ಯ ಎಂದು ಕಂಡಿಲ್ಲ. ಬಿಜೆಪಿ ಸರ್ಕಾರದಲ್ಲಿ ಪರಿಸ್ಥಿತಿ ಬಂದಾಗ ಮುಖ್ಯಮಂತ್ರಿಗಳು ಯಾವ ರೀತಿ ನಡೆದುಕೊಂಡರು, ಹೋಟೆಲ್‌ಗಳಲ್ಲಿ ಹೇಗೆ ಸೇರುತ್ತಿದ್ದರು, ಸಿಎಂ ಅನ್ನು ಹೇಗೆ ತೆಗೆದು ಹಾಕಿದ್ದಾರೆ ಎಲ್ಲವನ್ನು ನೀವು ನೋಡಿದ್ದೀರಾ ಎಂದು ಬಿಜೆಪಿ ಅವಧಿಯನ್ನು ನೆನಪಿಸಿದರು.


