ಬಿಜೆಪಿಯು ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯ, ದೇಶದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೂಲ್ಕಿ (ನ.30): ಬಿಜೆಪಿಯು ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯ, ದೇಶದಲ್ಲಿ ಅಧಿಕಾರ ಹಿಡಿಯುತ್ತೇವೆ. ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಜಿಎಸ್‌ಟಿ ಜಾರಿಗೆ ತಂದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾತ್ರ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಅನುಷ್ಠಾನಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಗುರುಪುರ ಕೈಕಂಬದ ಪೊಳಲಿ ಕ್ರಾಸ್ ನ ಜಯಲಕ್ಷ್ಮೀ ಸಂಕೀರ್ಣದ ಬಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ನಡೆದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಅವರ ಪದಗ್ರಹಣ ಸಮಾರಂಭ ಹಾಗೂ ನೂತನ ಬ್ಲಾಕ್ ಕಾಂಗ್ರೆಸ್ ಕಚೇರಿಯ ಉದ್ಘಾಟನಾ ಸಮಾರಂಭವನ್ನುಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ 12 ಸಾವಿರಕ್ಕೂ ಹೆಚ್ಚಿನ ಹಕ್ಕು ಪತ್ರ ನೀಡಿದ್ದು . 9/11ಸಂಬಂಧ ಸಮಸ್ಯೆ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರ ಪರಿಹರಿಸಲಾಗುವುದು. ಬಿಜೆಪಿ ಹಿಂದುತ್ವ ಅಜೆಂಡಾ ಬಿಟ್ಟು ಧರ್ಮವನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ಗುರುಪುರ ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದು. ರಮಾನಾಥ ರೈ 4 ಬಾರಿ ಗೆಲ್ಲಿಸಿದ ಪ್ರದೇಶ. ಗುರುಪುರ, ಕೈಕಂಬದಲ್ಲಿ ಕಾಂಗ್ರೆಸ್ ನ ಹಿಂದಿನ ಗತ ವೈಭವ ಮೆರೆಯಲಿದೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ವರೆಗೆ ನಾವು ಕಾರ್ಯಕರ್ತರು ವಿರಮಿಸುವುದಿಲ್ಲ. ಜಿಲ್ಲೆಯಲ್ಲಿ ಆರೋಗ್ಯ ಕ್ರಾಂತಿಯಾಗುತ್ತಿದ್ದು ಅಶಾಂತಿಯಲ್ಲಿದ್ದ ಜಿಲ್ಲೆಯಲ್ಲಿ ಶಾಂತಿ ಮರು ಸ್ಥಾಪಿಸಿದ ಕಾರ್ಯ ರಾಜ್ಯ ಸರ್ಕಾರದಿಂದ ಆಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಗುರುಪುರ ಬ್ಲಾಕ್ ನ ನೂತನ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಪಕ್ಷದ ನಾಯಕ ಸುಧೀರ್ ಮರೋಳಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕಂಬಳಿ ಅವರು ಗುರುಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪದ್ಮನಾಭ ಕೋಟ್ಯಾನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕಂಬಳಿ, ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು.
ಪಕ್ಷ ಸೇರ್ಪಡೆ
ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಪ್ರಮುಖ ಮುಖಂಡರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.


