ಸಂಸತ್ ಅಧಿವೇಶನಕ್ಕೆ ತೆರಳುತ್ತಿದ್ದ ಸಂಸದ ರಾಜೀವ್ ರೈ ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಿಮಾನ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಅವರು, ಸಂಚಾರ ಪೊಲೀಸರ ನಿರ್ಲಕ್ಷ್ಯ ಮತ್ತು ಕೆಟ್ಟ ಸಂಚಾರ ನಿರ್ವಹಣೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಡಿ.01): ದೆಹಲಿಯಲ್ಲಿ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಸಂಸದ ರಾಜೀವ್ ರೈ ಅವರು, ಬೆಂಗಳೂರಿನ ಸಂಚಾರ ನಿರ್ವಹಣೆ ಮತ್ತು ಸಂಚಾರ ಪೊಲೀಸರ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಚಾರ ಪೊಲೀಸರು ಕರೆ ಸ್ವೀಕರಿಸುತ್ತಿಲ್ಲ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಮಾನ ತಪ್ಪಿಸಿಕೊಂಡ ಸಂಸದರಿಂದ ಟೀಕೆ
ಸಂಸದ ರಾಜೀವ್ ರೈ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮುಖ್ಯಮಂತ್ರಿ (@CMofKarnataka), ಬೆಂಗಳೂರು ಪೊಲೀಸ್ ಕಮಿಷನರ್ (@CPBlr) ಮತ್ತು ಜಂಟಿ ಸಂಚಾರ ಆಯುಕ್ತರನ್ನು (@Jointcptraffic) ಟ್ಯಾಗ್ ಮಾಡಿ, ಸಂಚಾರ ದಟ್ಟಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳೇ ಹೀಗೆ ಹೇಳುವುದಕ್ಕೆ ಕ್ಷಮಿಸಿ, ಆದರೆ ನಿಮ್ಮಲ್ಲಿ ಅತ್ಯಂತ ಕೆಟ್ಟ ಸಂಚಾರ ನಿರ್ವಹಣೆ ಮತ್ತು ಅತ್ಯಂತ ಬೇಜವಾಬ್ದಾರಿ, ನಿಷ್ಪ್ರಯೋಜಕ ಸಂಚಾರ ಪೊಲೀಸರು ಇದ್ದಾರೆ' ಎಂದು ಖಾರವಾಗಿ ಬರೆದಿದ್ದಾರೆ.
ಪ್ರಮುಖ ಆರೋಪಗಳು:
- ಸಂಚಾರ ಪೊಲೀಸರು ಕರೆಗಳನ್ನು ಸ್ವೀಕರಿಸುತ್ತಿಲ್ಲ. ಕರೆ ಮಾಡಲು ಪ್ರಯತ್ನಿಸಿದ ಕರೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.
- ಕಳೆದ ಒಂದು ಗಂಟೆಯಿಂದ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಅದೇ ಸ್ಥಳದಲ್ಲಿ ಸಿಲುಕಿದ್ದೇವೆ, ವಿಮಾನವನ್ನು ತಪ್ಪಿಸಿಕೊಳ್ಳಲಿದ್ದೇವೆ. ನಾಳೆ ನಾನು ಸಂಸತ್ ಅಧಿವೇಶನಕ್ಕೆ ಹಾಜರಾಗಬೇಕು' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
- ಈ ಸ್ಥಳದಲ್ಲಿ ಒಬ್ಬ ಸಂಚಾರ ಪೊಲೀಸ್ ಸಹ ಇರಲಿಲ್ಲ
- ಈ ದಕ್ಷತೆಯಿಲ್ಲದ ಅಧಿಕಾರಿಗಳು ಈ ಸುಂದರ ನಗರದ ಹೆಸರು ಮತ್ತು ಕೀರ್ತಿಯನ್ನು ಹಾಳುಮಾಡಲು ಸಾಕು.
- ಬೆಂಗಳೂರು ನಗರ ಸಂಚಾರವು 'ಅತ್ಯಂತ ಅಪಖ್ಯಾತಿಯ ಸಂಚಾರ' ಎಂಬ ಖ್ಯಾತಿಯನ್ನು ಗಳಿಸಿರುವುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಟೀಕಿಸಿದ್ದಾರೆ.
ಸಂಸದರ ಪ್ರತಿಕ್ರಿಯೆಗೆ ಆಕ್ಷೇಪ ಮತ್ತು ವಾಗ್ವಾದ
ಸಂಸದರ ಈ ಟ್ವೀಟ್‌ಗೆ ಗಿರೀಶ್ ಕೆ.ಎಸ್. ಎಂಬ ಬಳಕೆದಾರರು ಪ್ರತಿಕ್ರಿಯಿಸಿ, 'ನೀವು ಕರ್ನಾಟಕವನ್ನು ಬಿಟ್ಟು ನಿಮಗೆ ಬೇಕಾದಲ್ಲೆಲ್ಲಾ ಹೋಗಬಹುದು. ಬೇಜವಾಬ್ದಾರಿ ವ್ಯಕ್ತಿಯಂತೆ ಮಾತನಾಡಬೇಡಿ. ಹೇಳೋದು ಏನಾದ್ರೂ ಇದ್ರೆ ಕನ್ನಡದಲ್ಲಿ ಹೇಳಿ' ಎಂದು ಕನ್ನಡದಲ್ಲಿ ಕಾಮೆಂಟ್ ಮಾಡಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಂಸದ ರಾಜೀವ್ ರೈ ಅವರು, 'ಸುಮ್ಮನಿರಿ (Just shut up).. ಸಮಸ್ಯೆಯನ್ನು ಹೇಳಿದರೆ ಭಾಷೆಯನ್ನು ಮಧ್ಯದಲ್ಲಿ ತೂರಿಸಿ ಮಾತನಾಡುವ ಧೈರ್ಯ ಮಾಡಬೇಡಿ...' ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನ ಸಂಚಾರ ಸಮಸ್ಯೆಯ ಕುರಿತು ಸಂಸದರ ಆಕ್ರೋಶವು ನಗರದ ಮೂಲಸೌಕರ್ಯ ನಿರ್ವಹಣೆಯ ಲೋಪಗಳ ಕಡೆಗೆ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಸಂಚಾರ ಪೊಲೀಸರ ಕಾರ್ಯವೈಖರಿ ಮತ್ತು ಕರ್ತವ್ಯ ನಿರ್ಲಕ್ಷ್ಯದ ಆರೋಪಗಳ ಕುರಿತು ಗೃಹ ಸಚಿವಾಲಯ ಮತ್ತು ಬೆಂಗಳೂರು ಪೊಲೀಸ್ ಇಲಾಖೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.


