ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ದರಾಮಪ್ಪ ವಡ್ಡರ್ ಅವರ ಆತ್ಮಹತ್ಯೆ ಪ್ರಕರಣವು ಹಿರಿಯ ಪೊಲೀಸ್ ಅಧಿಕಾರಿಯತ್ತ ಬೆರಳು ಮಾಡಿದೆ. ಡಿಜಿಪಿ ಅಲೋಕ್ ಕುಮಾರ್ ಅವರ ಮಾನಸಿಕ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತರ ಕುಟುಂಬ ಆರೋಪಿಸಿದ್ದು, ಅವರ ವಿರುದ್ಧ ದೂರು ದಾಖಲಿಸಲು ಸಜ್ಜಾಗಿದೆ. ಅಮಾನತುಗೊಂಡಿದ್ದ ಸಿದ್ದರಾಮಪ್ಪ, ನಿರಂತರ ಕಿರುಕುಳದಿಂದ ನೊಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪತ್ನಿ ದೂರಿದ್ದಾರೆ.

ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ದರಾಮಪ್ಪ ವಡ್ಡರ್ ಅವರ ಆತ್ಮ*ಹತ್ಯೆ ಪ್ರಕರಣವು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಭಾರೀ ಆರೋಪ ಕೇಳಿಬಂದಿದೆ. ಜೈಲರ್ ಸಿದ್ದರಾಮಪ್ಪ ಅವರ ಸಾವಿಗೆ ರಾಜ್ಯ ಕಾರಾಗೃಹ ಇಲಾಖೆಯ ಡಿಜಿಪಿ (DGP) ಅಲೋಕ್ ಕುಮಾರ್ ಅವರ ಮಾನಸಿಕ ಕಿರುಕುಳವೇ ನೇರ ಕಾರಣ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಡಿಜಿಪಿ ವಿರುದ್ಧವೇ ಪ್ರಕರಣ ದಾಖಲಿಸಲು ಪತ್ನಿ ಹಾಗೂ ಕುಟುಂಬ ಸಜ್ಜಾಗಿದೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಸಿದ್ದರಾಮಪ್ಪ ಅಮಾನತುಗೊಂಡಿದ್ದರು. ಬಳಿಕ ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವರು ಇನ್ನೇನು ಮೈಸೂರಿಗೆ ಹೋಗಿ ವರದಿ ಮಾಡಿಕೊಳ್ಳಬೇಕಿತ್ತು, ಅಷ್ಟರಲ್ಲಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪವೇನು?

ಜೈಲರ್ ಸಿದ್ದರಾಮಪ್ಪ ಅವರ ನಿಗೂಢ ಆತ್ಮ*ಹತ್ಯೆಗೆ ಸಂಬಂಧಿಸಿದಂತೆ ಅವರ ಪತ್ನಿ ಲಕ್ಷ್ಮಿ ಅವರು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಇಲಾಖಾ ವಿಚಾರಣೆಯ ನೆಪದಲ್ಲಿ ಕಳೆದ ಎರಡು ತಿಂಗಳ ಹಿಂದೆ ಪತಿ ಸಿದ್ದರಾಮಪ್ಪ ಅವರನ್ನು ಸೇವೆಯಿಂದ ಅಮಾನತು (Suspend) ಮಾಡಲಾಗಿತ್ತು. ಇಲಾಖೆಯ ಈ ಕ್ರಮದಿಂದ ಅವರು ತೀವ್ರವಾಗಿ ನೊಂದಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂಬುದು ಕುಟುಂಬದ ವಾದ. ಜೂನ್ 12 ರಂದು ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಇರುವ ಕಾರಾಗೃಹ ಸಿಬ್ಬಂದಿ ವಸತಿಗೃಹದ ಮನೆಯಲ್ಲಿ ಸಿದ್ದರಾಮಪ್ಪ ಶವವಾಗಿ ಪತ್ತೆಯಾಗಿದ್ದರು. ಇಂದು ವೈದ್ಯರು ಶವಪರೀಕ್ಷೆ (Post-mortem) ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಕಿರುಕುಳದ ದೂರು ನೀಡಲು ಸಿದ್ಧತೆ

ಪ್ರಕರಣ ಇಲ್ಲಿಗೇ ಮುಗಿಯದೆ, ಜೈಲರ್ ಸಿದ್ದರಾಮಪ್ಪ ಅವರ ಸಾವಿಗೆ ಇಲಾಖೆಯ ಉನ್ನತಾಧಿಕಾರಿಯ ಕಿರುಕುಳವೇ ಕಾರಣ ಎಂದು ಮೃತರ ಪತ್ನಿ ಲಕ್ಷ್ಮಿ ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಮಾನಸಿಕ ಕಿರುಕುಳ (Mental Harassment) ನೀಡಿದ ಆರೋಪದಡಿ ಧಾರವಾಡ ಉಪನಗರ ಪೊಲೀಸ್ ಠಾಣೆ ದೂರು ದಾಖಲಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.

ಮೂರು ಬಾರಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಿಂದನೆ ಆರೋಪ

ನನ್ನ ಪತಿಗೆ ಡಿಜಿಪಿ ಅಲೋಕ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದ್ದಾರೆ. ಇಲಾಖೆಯ ಅಧಿಕೃತ ವಿಡಿಯೋ ಕಾನ್ಫರೆನ್ಸ್ (Video Conference) ಸಭೆಗಳಲ್ಲಿ ಕನಿಷ್ಠ ಮೂರು ಬಾರಿ ನನ್ನ ಪತಿಯನ್ನು ಎಲ್ಲರೆದುರು ಏಕವಚನದಲ್ಲಿ ನಿಂದಿಸಲಾಗಿದೆ. ಶ್ರೀ ಶ್ರೀ ಸಿದ್ದರಾಮಪ್ಪ, ನಿನಗೆ ಯಾವ ಶಿಕ್ಷೆ ಕೊಡಬೇಕು ಹೇಳು? ಎಂದು ಮೀಟಿಂಗ್‌ನಲ್ಲಿ ಇತರ ಅಧಿಕಾರಿಗಳ ಸಮ್ಮುಖದಲ್ಲೇ ಅವಮಾನಿಸಿದ್ದರು. ಈ ನಿರಂತರ ಕಿರುಕುಳ ಹಾಗೂ ಅಮಾನತಿನಿಂದಾಗಿ ನನ್ನ ಪತಿ ಮಾನಸಿಕವಾಗಿ ಸಂಪೂರ್ಣವಾಗಿ ಕುಸಿದುಹೋಗಿದ್ದರು ಎಂದು ಪತ್ನಿ ಲಕ್ಷ್ಮಿ ಕಣ್ಣೀರಿಡುತ್ತಾ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.

ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟದ ಎಚ್ಚರಿಕೆ

ತಮ್ಮ ಪತಿಯ ಸಾವಿಗೆ ಕಾರಣರಾದ ಡಿಜಿಪಿ ಅಲೋಕ್ ಕುಮಾರ್ ಅವರ ವಿರುದ್ಧ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ತಮಗೆ ನ್ಯಾಯ ಸಿಗಬೇಕು ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ. ಈ ಘಟನೆಯು ಇಡೀ ಪೊಲೀಸ್ ಹಾಗೂ ಕಾರಾಗೃಹ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಉನ್ನತಾಧಿಕಾರಿಗಳ ನಡೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.