ಲಂಚ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಆರೋಪಿಯಿಂದ ವಶಪಡಿಸಿಕೊಂಡ 'ಟ್ರ್ಯಾಪ್ ಹಣ'ವನ್ನು ವಿಚಾರಣೆ ಮುಗಿಯುವವರೆಗೆ ಕಾಯದೆ, ರಾಜ್ಯದ ಬೊಕ್ಕಸದಿಂದ ದೂರುದಾರನಿಗೆ ಶೀಘ್ರವೇ ಹಿಂದಿರುಗಿಸಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು (ಆ.14): ಲಂಚ ಪ್ರಕರಣಗಳಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಯಿಂದ ವಶಪಡಿಸಿಕೊಂಡ ‘ಟ್ರ್ಯಾಪ್ ಹಣ’ವನ್ನು ವಿಚಾರಣೆ ತೀರ್ಮಾನ ಆಗುವವರೆಗೆ ವಿಚಾರಣಾ ಕೋರ್ಟ್ ವಶದಲ್ಲೇ ಉಳಿಸಿಕೊಳ್ಳಬಾರದು ಹಾಗೂ ಪ್ರಕರಣ ಇತ್ಯರ್ಥಕ್ಕೆ ಕಾಯದೇ ರಾಜ್ಯದ ಬೊಕ್ಕಸದಿಂದ ದೂರುದಾರನಿಗೆ ಹಣವನ್ನು ಶೀಘ್ರವೇ ಹಿಂದಿರುಗಿಸಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಲಂಚ ಪ್ರಕರಣವೊಂದರಲ್ಲಿ ಟ್ರ್ಯಾಪ್ ಮಾಡಿದ ಸಂದರ್ಭದಲ್ಲಿ ತಮ್ಮಿಂದ ವಶಪಡಿಸಿಕೊಂಡ ₹80 ಸಾವಿರ ‘ಟ್ರ್ಯಾಪ್’ ಹಣವನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡಲು ಸಿಬಿಐಗೆ ನಿರ್ದೇಶಿಸಬೇಕು ಎಂದು ಕೋರಿ ಬಳ್ಳಾರಿಯ ಗುತ್ತಿಗೆದಾರ ಜಿ.ಈಶ್ವರಯ್ಯ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಕುರಿತಂತೆ ಆದೇಶಿಸಿದೆ.
ಅಲ್ಲದೆ, ಪ್ರಕರಣದ ಅರ್ಜಿದಾರರಿಗೆ ಹಣ ಬಿಡುಗಡೆ ಮಾಡುವ ವಿಚಾರವನ್ನು ಸಿಬಿಐ ವಿಶೇಷ ನ್ಯಾಯಾಲಯ ನಾಲ್ಕು ವಾರಗಳಲ್ಲಿ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದೆ.
ಭ್ರಷ್ಟಾಚಾರ ಕೃತ್ಯವನ್ನು ಪತ್ತೆಹಚ್ಚಲು ಪ್ರಕರಣದ ದೂರುದಾರರು ತಮ್ಮ ಸ್ವಂತ ಹಣ ಬಳಸುತ್ತಾರೆ. ಪ್ರಾಸಿಕ್ಯೂಷನ್ ಸಂಸ್ಥೆಯು ಅಪರಾಧವನ್ನು ಬಯಲಿಗೆಳೆಯುವ ಸಾಧನವಾಗಿ ಮಾತ್ರ ಆ ಹಣವನ್ನು ಬಳಸಿಕೊಳ್ಳುತ್ತದೆ. ಆದ್ದರಿಂದ, ಆ ನೋಟುಗಳು ಕ್ಷಣಕಾಲ ಸಾಕ್ಷ್ಯ ಸ್ವರೂಪವನ್ನು ಪಡೆದುಕೊಂಡ ಮಾತ್ರಕ್ಕೆ, ಅವುಗಳ ಮಾಲೀಕರಿಂದ ಸರ್ಕಾರಕ್ಕೆ ವರ್ಗಾವಣೆ ಆಗುವುದಿಲ್ಲ ಎಂಬುದನ್ನು ಮರೆಯಬಾರದು. ದೂರುದಾರರ ಹಣವನ್ನು ಅವರಿಗೆ ಶೀಘ್ರವೇ ಕೊಡಮಾಡುವುದರಿಂದ ಭ್ರಷ್ಟ ಸಾರ್ವಜನಿಕ ಸೇವಕರ ವಿರುದ್ಧ ದೂರು ನೀಡಲು ಪ್ರಾಮಾಣಿಕ ನಾಗರಿಕರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಹಾಗೆಯೇ, ದೂರುದಾರರು ತಮ್ಮ ಹಣವನ್ನು ಮರಳಿ ಪಡೆಯಲು ವರ್ಷಗಟ್ಟಲೆ ಕಾಯುವಂತೆ ಒತ್ತಾಯಿಸುವುದು ಶಿಕ್ಷೆಯನ್ನಾಗಿ ಪರಿವರ್ತಿಸಿದಂತಾಗುತ್ತದೆ. ದೂರುದಾರರು ಸೂಕ್ತ ಅರ್ಜಿಯನ್ನು ಸಲ್ಲಿಸುವ ಮೂಲಕ, ತಾನು ವ್ಯವಸ್ಥೆ ಮಾಡಿದ್ದ ‘ಟ್ರ್ಯಾಪ್ ಹಣ’ಕ್ಕೆ ಸಮಾನವಾದ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಬಹುದು. ಅಂತಹ ಅರ್ಜಿಯನ್ನು ಸಲ್ಲಿಸಿದಾಗ, ವಿಶೇಷ ನ್ಯಾಯಾಲಯ ಪರಿಶೀಲಿಸಿ ವಿಲೇವಾರಿ ಮಾಡಬೇಕು ಎಂದು ಎಂದು ನಿರ್ದೇಶಿಸಿದೆ.
ಪ್ರಕರಣದ ವಿವರ:
ಈಶ್ವರಯ್ಯ ಅವರು, ತಮ್ಮ ಜಿಎಸ್‌ಟಿ ಬಾಕಿ ಚುಕ್ತಾ ಮಾಡುವ ಸಂಬಂಧ ಬಳ್ಳಾರಿಯ ಕೇಂದ್ರ ತೆರಿಗೆ (ಜಿಎಸ್‌ಟಿ) ವಿಭಾಗದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಮಧುಸೂಧನ ಅವರನ್ನು ಸಂಪರ್ಕಿಸಿದ್ದರು. ಆಗ ಮಧುಸೂಧನ ಒಂದು ಲಕ್ಷಕ್ಕೆ ಬೇಡಿಕೆ ಇಟ್ಟು ನಂತರ ₹80 ಸಾವಿರಕ್ಕೆ ಒಪ್ಪಿದ್ದರು. ಲಂಚದ ಹಣ ಪಡೆಯುತ್ತಿದ್ದಾಗ ಮಧುಸೂಧನ ರೆಡ್ ಹ್ಯಾಂಡ್ ಆಗಿ ಸಿಬಿಐ ಬಲೆಗೆ ಬಿದ್ದಿದ್ದರು.
ಈ ಪ್ರಕರಣವು ವಿಚಾರಣಾ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದ ಕಾರಣಕ್ಕೆ ಈಶ್ವರಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿ, ಕಷ್ಟಪಟ್ಟು ದುಡಿದು ಸಂಪಾದಿಸಿದ ₹80 ಸಾವಿರ ತಮಗೆ ಇನ್ನೂ ಮರಳಿ ಕೈಸೇರಿಲ್ಲ. ನ್ಯಾಯಾಲಯದ ವಶದಲ್ಲಿಯೇ ಇದೆ. ಜಪ್ತಿ ಮಾಡಲಾದ ಟ್ರ್ಯಾಪ್ ಹಣವನ್ನು ಬಿಡುಗಡೆ ಮಾಡುವ ಕುರಿತಂತೆ ವಿಸ್ತೃತ ಕಾರ್ಯವಿಧಾನವನ್ನು ಒಳಗೊಂಡಿರುವ ಸಾಮಾನ್ಯ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೋರಿದ್ದರು.


