- Home
- News
- State
- ಆಗಸ್ಟ್ 15: ನಾಳೆ ವಿಧಾನಸೌಧದಲ್ಲಿ ನಡೆಯುವ ಫ್ರೀಡಂ ಹಬ್ಬಕ್ಕೆ ಹೋಗಬೇಕಾ? ನಿಮಗೆ ಪ್ರವೇಶ ಸಿಗಬೇಕು ಅಂದ್ರೆ ಈ ವಿಷಯ ತಿಳ್ಕೊಳ್ಳಿ!
ಆಗಸ್ಟ್ 15: ನಾಳೆ ವಿಧಾನಸೌಧದಲ್ಲಿ ನಡೆಯುವ ಫ್ರೀಡಂ ಹಬ್ಬಕ್ಕೆ ಹೋಗಬೇಕಾ? ನಿಮಗೆ ಪ್ರವೇಶ ಸಿಗಬೇಕು ಅಂದ್ರೆ ಈ ವಿಷಯ ತಿಳ್ಕೊಳ್ಳಿ!
ಆಗಸ್ಟ್ 15 ನಾಳೆ ಸ್ವಾತಂತ್ರ್ಯ ದಿನಾಚರಣೆ. ವಿಧಾನಸೌಧ ಎದುರು ನಡೆಯಲಿರುವ ವರ್ಣರಂಜಿತ ಫ್ರೀಡಂ ಹಬ್ಬ ನಡೆಯಲಿದೆ. ಕಾರ್ಯಕ್ರಮದ ಸಮಯ, ಮಾರ್ಗ, ರಿಜಿಸ್ಟ್ರೇಷನ್ ಕುರಿತು ಮಾಹಿತಿ ಇಲ್ಲಿದೆ.

freedom Habba 2026
ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ ದಿನದಂದು ವಿಧಾನಸೌಧದ ಎದುರು ನಡೆಯುವ ವರ್ಣರಂಜಿತ ಫ್ರೀಡಂ ಹಬ್ಬದ ಸಿದ್ಧತೆ ಪೂರ್ಣಗೊಂಡಿದ್ದು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಫ್ರೀಡಂ ಪರೇಡ್, ಸಂಗೀತ ರಸಸಂಜೆ ಎಂಬ 3 ವಿಭಾಗಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಡಿಸಿಪಿ, ಎಸಿಪಿ ಸೇರಿದಂತೆ 3000 ಪೊಲೀಸರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ವಿಧಾನಸೌಧದ ಸುತ್ತ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಜೊತೆಗೆ ಸೆಕ್ಟರ್ ಪದ್ಧತಿಯಲ್ಲಿ ಪೊಲೀಸರು ಭದ್ರತೆ ವಹಿಸಲಾಗುವುದು ಎಂದು ಜಿಬಿಎ ಆಯುಕ್ತ ಮಹೇಶ್ವರರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಬೆಳಿಗ್ಗೆ 12ರಿಂದ ರಾತ್ರಿ 10ಗಂಟೆವರೆಗೆ ನಡೆಯುವ ಕಾರ್ಯಕ್ರಮಗಳು
ಆ.15ರಂದು ಬೆಳಿಗ್ಗೆ 12ರಿಂದ ರಾತ್ರಿ 10ಗಂಟೆವರೆಗೆ ನಡೆಯುವ ಕಾರ್ಯಕ್ರಮಗಳು 3 ವಿಭಾಗಗಳಲ್ಲಿ ನಡೆಯಲಿವೆ. 12ರಿಂದ 3ಗಂಟೆವರೆಗೆ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, 3 ಗಂಟೆಯಿಂದ 5.30ರವರೆಗೆ ಅಂಬೇಡ್ಕರ್ ರಸ್ತೆಯಲ್ಲಿ ಫ್ರೀಡಂ ಪರೇಡ್, ಎಂ.ಡಿ.ಪಲ್ಲವಿ, ಸಂಜಿತ್ ಹೆಗ್ಡೆ, ರಘು ದೀಕ್ಷಿತ್ ಸೇರಿದಂತೆ 20 ಮಂದಿ ಕಲಾವಿದರಿಂದ ಬೃಹತ್ ವೇದಿಕೆಯಲ್ಲಿ ಸಂಜೆ 5.30ರಿಂದ ರಾತ್ರಿ 10ರವರೆಗೆ ಸಂಗೀತ ರಸಸಂಜೆ, ನೃತ್ಯ ಹಾಗೂ ವಿವಿಧ ರಾಜ್ಯಗಳ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಿಧಾನಸೌಧ ಹಾಗೂ ಹೈಕೋರ್ಟ್ ಮಧ್ಯದ ಅಂಬೇಡ್ಕರ್ ರಸ್ತೆಯಲ್ಲಿ ಗೋಪಾಲಗೌಡ ಸರ್ಕಲ್ ನಿಂದ ತಿಮ್ಮಯ್ಯ ವೃತ್ತದವರೆಗೆ ಫ್ರೀಡಂ ಪರೇಡ್ ನಡೆಯಲಿದೆ. ಪರೇಡ್ ನಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವ 15ತಂಡಗಳು, ವಿವಿಧ ರಾಜ್ಯಗಳ 10 ಕಲಾತಂಡಗಳು ತಮ್ಮ ಕಲೆಗಳನ್ನು ಪ್ರದರ್ಶಿಸಲಿವೆ.
ಸೌಧದಲ್ಲಿ ಗೈಡ್ ಪ್ರವಾಸ:
ಮಕ್ಕಳಿಗಾಗಿ ಏರ್ಪಡಿಸಿರುವ ವಿಧಾನಸೌಧ ಪ್ರವಾಸದಲ್ಲಿ 25 ಜನರ ತಂಡದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಮುನ್ನಡೆಸಲಿವೆ. ವಿಧಾನಸೌಧದ ಗ್ಯಾಲರಿ, ಸಭಾಧ್ಯಕ್ಷರ ಕೊಠಡಿಗಳು, ಶಾಸಕರು ಕುಳಿತುಕೊಳ್ಳುವ ಆಸನಗಳ ವಿವರಗಳನ್ನು ಗೈಡ್‌ಗಳು ವಿವರಿಸಲಿದ್ದಾರೆ. ಅಂದು ಗಾಂಧಿ ಪ್ರತಿಮೆ ಬಳಿ ಸ್ವಾತಂತ್ರ್ಯಹೋರಾಟಕ್ಕೆ ಹಿರಿಯರು ಮಾಡಿದ ತ್ಯಾಗ ಸ್ಮರಿಸುವ ಘಟನಾವಳಿಯ ಫ್ರೀಡಂ ವಾಲ್ ವಿಶೇಷ ಆಕರ್ಷಣೆಯಾಗಿದ್ದು, ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಘಟನಾವಳಿಗಳು ಇರಲಿವೆ. ಆಹಾರ ಮೇಳಗಳ ಸ್ಟಾಲ್‌ಗಳೂ ಇರಲಿವೆ.
ಕ್ಯೂ ಆರ್ ಕೋಡ್ ಕಡ್ಡಾಯ
ಮೇಲಿನ ಎಲ್ಲಾ ಕಾರ್ಯಕ್ರಮಗಳಿಗೂ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು. 12 ವರ್ಷದೊಳಗಿನ ಮಕ್ಕಳಿಗೆ ಕ್ಯೂ ಆರ್ ಕೋಡ್ ಅಗತ್ಯವಿಲ್ಲ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೋಂದಣಿ ಕಡ್ಡಾಯ. ಕಾರ್ಯಕ್ರಮಕ್ಕೆ ಆಗಮಿಸುವವರು ಸರ್ಕಾರ ನೀಡಿರುವ ಗುರುತಿನ ಚೀಟಿ ತರುವುದು ಕಡ್ಡಾಯ. ಈಗಾಗಲೇ 18 ಸಾವಿರ ಮಂದಿ ನೋಂದಣಿ ಮಾಡಿದ್ದು, ಆ.14ರಂದು ನೋಂದಣಿ ನಡೆಯಲಿದೆ. ಕ್ಯೂ ಆರ್ ಕೋಡ್‌ನಲ್ಲಿ ನೋಂದಣಿಯಾದವರ ಮೊಬೈಲ್‌ಗಳಿಗೆ ಎಲ್ಲೆಲ್ಲಿ ಯಾವ ಕಾರ್ಯಕ್ರಮಗಳು ನಡೆಯಲಿವೆ ಎಂಬುದರ ಬಗ್ಗೆ ಸಂದೇಶ ಕಳುಹಿಸಲಾಗುವುದು. ಮಹಿಳೆಯರು, ಮಕ್ಕಳ ಭದ್ರತೆಗೆ ವಿಶೇಷ ಗಮನ ವಹಿಸಲಾಗುವುದು. ಇದಲ್ಲದೆ ಅಗ್ನಿಶಾಮಕದಳದ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಫ್ರೀಡಂ ಹಬ್ಬಕ್ಕೆ ಬರುವವರು ಈ ಮಾರ್ಗದತ್ತ ಗಮನಿಸಿ
ವಿಧಾನಸೌಧಕ್ಕೆ ಪ್ರವೇಶ ಮಾಡುವವರು ಜಿಪಿಒ (ತಿಮ್ಮಯ್ಯ ವೃತ್ತ), ಕೆ.ಆರ್.ವೃತ್ತ, ಕಬ್ಬನ್ ಪಾರ್ಕ್ ಕಡೆಗಳಿಂದ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ತಲಾ 6 ಗೇಟ್‌ಗಳಂತೆ 3 ಕಡೆಗಳಿಂದ ಒಟ್ಟು 18 ಪ್ರವೇಶ ದ್ವಾರಗಳನ್ನು ನಿರ್ಮಾಣ ಮಾಡಲಿದ್ದು, ಅವುಗಳ ಮೂಲಕವೇ ಸಾರ್ವಜನಿಕರು ಪ್ರವೇಶಿಸಲು ಅವಕಾಶವಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ 11ಗಂಟೆಯಿಂದ ಅಂಬೇಡ್ಕರ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈಗಾಗಲೇ ಬಿಎಂಟಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನಗರದ ಎಲ್ಲ ಪ್ರದೇಶಗಳಿಂದ ವಿಧಾನಸೌಧಕ್ಕೆ ಬಸ್ ಸಂಚಾರ ಕಲ್ಪಿಸಲಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಬಸ್‌ನಲ್ಲಿ ಆಗಮಿಸಿದರೆ ಸಂಚಾರದಟ್ಟಣೆ ಕಡಿಮೆಯಾಗಲಿದೆ ಎಂದು ಆಯುಕ್ತರು ತಿಳಿಸಿದರು.
ರಾತ್ರಿ ಮದ್ದು, ಪಟಾಕಿ ಸಿಡಿತ
ವಿಧಾನಸೌಧದ 4 ಕಡೆಗಳಲ್ಲಿ ರಾತ್ರಿ ಮದ್ದು, ಪಟಾಕಿ ಸಿಡಿಸಲು ಸ್ಥಳ ಗುರುತಿಸಿ ಸಂಬಂಧಿಸಿದ ಇಲಾಖೆಗಳಿಂದ ಎನ್‌ಒಸಿ ಪಡೆಯಲು ಮನವಿ ಕೊಡಲಾಗಿದೆ. ಎನ್ಒಸಿ ಇನ್ನೂ ದೊರೆತಿಲ್ಲ. ವಿಧಾನಸೌಧದ ಯಾವ ಕಡೆಗಳಲ್ಲಿ ಅನುಮತಿ ದೊರೆಯುತ್ತದೆಯೋ ಆ ಸ್ಥಳದಲ್ಲಿ ಮದ್ದು, ಪಟಾಕಿ ಸಿಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ವಿಧಾನಸೌಧ ಮೆಟ್ರೋ ನಿಲ್ದಾಣ ಬಂದ್
ಫ್ರೀಡಂ ಹಬ್ಬ ಆಯೋಜನೆ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣವನ್ನು ಬೆಳಗ್ಗೆ 10ರಿಂದ ರಾತ್ರಿ 9.30ರವರೆಗೆ ಪ್ರವೇಶ ಮತ್ತು ನಿರ್ಗಮನ ಸೇರಿ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ರಾತ್ರಿ 9.30ರ ನಂತರ ಜನರು ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ಬಾಗಿಲುಗಳನ್ನು ತೆಗೆಯಲಾಗುತ್ತದೆ. ಆದರೆ, ಪ್ರಯಾಣಿಕರು ವಿಧಾನಸೌಧ ನಿಲ್ದಾಣದಲ್ಲಿ ಇಳಿದು ಹೊರ ಬರಲು 10 ಗಂಟೆಯ ನಂತರ ಮಾತ್ರ ಅವಕಾಶ ನೀಡಲಾಗುತ್ತದೆ. ನಿಲ್ದಾಣ ಬಂದ್ ಆಗಿರುವ ಅವಧಿಯಲ್ಲಿ ಪ್ರಯಾಣಿಕರು ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣ ಅಥವಾ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣವನ್ನು ಬಳಸಬಹುದಾಗಿದೆ. ಅಂದು ರಾತ್ರಿ ಪ್ರಯಾಣಿಕರ ದಟ್ಟಣೆ ಮತ್ತು ಅಗತ್ಯತೆ ಅನುಸಾರ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ವಯಂ ಸೇವಕರಿಂದ ಅಗತ್ಯ ನೆರವು ಪಡೆಯಿರಿ
ಫ್ರೀಡಂ ಹಬ್ಬದಲ್ಲಿ ನಿಗದಿತ ಟಿ-ಶರ್ಟ್‌ಗಳ ಮೂಲಕ ಗುರುತಿಸಬಹುದಾದ May I Help You? ಸ್ವಯಂಸೇವಕರು ಕಾರ್ಯಕ್ರಮದ ಸ್ಥಳದ ಎಲ್ಲ ಕಡೆ ಸಂದರ್ಶಕರಿಗೆ ಅಗತ್ಯ ನೆರವು ನೀಡಲಿದ್ದಾರೆ. ನಗರದ 4 ವಿವಿಧ ದಿಕ್ಕುಗಳಲ್ಲಿ 4 ಆಂಬ್ಯುಲೆನ್ಸ್‌ಗಳನ್ನು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬ ಮಾಹಿತಿಯೂ ಅವರಿಗೆ ಲಭ್ಯವಿರಲಿದೆ. ರಾಣಿ ಚೆನ್ನಮ್ಮ ದಳದ ಸಹಯೋಗದೊಂದಿಗೆ ಮಹಿಳಾ ಸಹಾಯ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ಶಿಶುಗಳಿಗೆ ಹಾಲುಣಿಸುವ ಕೊಠಡಿ, ವಿಶ್ರಾಂತಿ ವ್ಯವಸ್ಥೆ ಹಾಗೂ ಸ್ಯಾನಿಟರಿ ಸೌಲಭ್ಯಗಳು ಲಭ್ಯವಿರಲಿವೆ. ಪ್ರತಿಯೊಂದು ಚಟುವಟಿಕೆಗೆ ಪೊಲೀಸ್, ಜಿಬಿಎ, ಆಯೋಜಕರು ಹಾಗೂ ಈವೆಂಟ್ ಪ್ರತಿನಿಧಿಗಳು ಸೇರಿದಂತೆ ತಲಾ 4 ಪ್ರತಿನಿಧಿಗಳನ್ನು ನಿಯೋಜಿಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

