ಧರ್ಮಸ್ಥಳ ಸೌಜನ್ಯ ಪ್ರಕರಣ ಮರು ತನಿಖೆಗೆ ಶಾಸಕ ಪೂಂಜಾ ಮನವಿ, ಸಿಎಂ ಸಿದ್ದರಾಮಯ್ಯಗೆ ಪತ್ರ!
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ಮರು ತನಿಖೆ ನಡೆಸಲು ಆಗ್ರಹಿಸಿ ಶಾಸಕ ಹರೀಶ್ ಪೂಂಜಾ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಪೂಂಜಾ, ತಪ್ಪತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಬೆಳ್ತಂಗಡಿ(ಜು.22): ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದ 11 ವರ್ಷಗಳು ಉರುಳಿಸಿದೆ. ಆದರೆ ತಪ್ಪಿತಸ್ಥರು ಇದುವರೆಗೂ ಸಿಕ್ಕಿಲ್ಲ. ಅಮಾಯಕ ಹೆಣ್ಣುಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಸೌಜನ್ಯ ಕುಟುಂಬಸ್ಥರು, ಸಂಘಟನೆಗಳು ಹೋರಾಟ ಮಾಡುತ್ತಲೇ ಇದೆ. ಇತ್ತೀಚೆಗೆ ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಸೌಜನ್ಯ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಈ ಬೆಳವಣಿಗೆ ಹಿನ್ನಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸೌಜನ್ಯ ಪ್ರಕರಣನ್ನು ಮರು ತನಿಖೆ ನಡೆಸಿ ಅಪರಾಧಿಗಳನ್ನು ಕಾನೂನು ಚೌಕಟ್ಟಿನೊಳಗೆ ಶಿಕ್ಷಿ ವಿಧಿಸಲು ಆಗ್ರಹಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಅಕ್ಟೋಬರ್ 9, 2012ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಕಾಲೇಜಿನ ವಿದ್ಯಾರ್ಥಿನ ಕುಮಾರಿ ಸೌಜನ್ಯ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದಳು. ಈ ಕುರಿತು ಹಲವು ಇಲಾಖೆಗಳಿಂದ ತನಿಖೆ ನಡೆದಿತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. 2013ರಿಂದ 2023ರ ವರೆಗೆ ಸಿಬಿಐ ತನಿಖೆ ನಡೆಸಿತ್ತು. ಇತ್ತೀಚೆಗೆ ಶಂಕಿತ ಆರೋಪಿಯನ್ನು ನ್ಯಾಯಾಲಯ ದೋಷ ಮುಕ್ತಗೊಳಿಸಿತ್ತು.
ಧರ್ಮಸ್ಥಳ ಸೌಜನ್ಯ ಪ್ರಕರಣ ತೀರ್ಪಿನ ಬಳಿಕ ಕೊನೆಗೂ ಮೌನ ಮುರಿದ ವೀರೇಂದ್ರ ಹೆಗ್ಗಡೆ!
ಈ ತನಿಖೆಯಲ್ಲಿ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತಂದು ಶಿಕ್ಷೆ ನೀಡಲು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂಬ ನೋವು ಬೆಳ್ತಂಗಡಿ ಜನರಲ್ಲಿ ಮಡುಗಟ್ಟಿದೆ. ನಾಗರೀಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರವು ಕುಮಾರಿ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಈ ಮೂಲಕ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಶಾಸಕ ಹರಿಶ್ ಪೂಂಜಾ ಪತ್ರದ ಮೂಲಕ ಆಗ್ರಹಿಸಿದ್ದಾರೆ.
2012ರ ಅಕ್ಟೋಬರ್ 9ರಂದು ವಿದ್ಯಾರ್ಥಿನಿ ಸೌಜನ್ಯ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಆರೋಪಿಗಳು ಹತ್ಯೆ ಮಾಡಿದ್ದರು. ಪ್ರತಿಭಟನೆಗಳು ತೀವ್ರಗೊಂಡ ಕೆಲವು ದಿನಗಳ ಬಳಿಕ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆಯೂ ಸಾಕಷ್ಟುಅನುಮಾನಗಳು ವ್ಯಕ್ತವಾದಾಗ ನಂತರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಬಳಿಕ ತನಿಖೆಯನ್ನು ಸರ್ಕಾರವು ಸಿಬಿಐ ಹಸ್ತಾಂತರಿಸಲಾಗಿತ್ತು. 2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿತ್ತು. ಆರು ವರ್ಷಗಳ ಕಾಲ ಸಂತೋಷ್‌ರಾವ್ ಜೈಲಿನಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ. ಸಂತೋಷ್ ರಾವ್‌ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು ಎಂದು ವಕೀಲರು ವಾದಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಲಯವು ಆರೋಪಿ ನಿರ್ದೋಷಿ ಎಂದು ತೀರ್ಪು ನೀಡಿದೆ.
ಸಿನಿಮಾ ಆಗುತ್ತಿದೆ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ - ಕೊಲೆ ಪ್ರಕರಣ, ಹೆಸರು ನೋಂದಣಿ!
ಈಗಾಗಲೇ ಹಲವು ಸಂಘ ಸಂಸ್ಥೆಗಳು ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಹೋರಾಟ ನಡೆಸಿದೆ. ಆಂದೋಲನಗಳನ್ನು ಕೈಗೊಂಡಿದೆ. 2013ರಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದರು. ಆದರೆ ಸಿಬಿಐ ತನಿಖೆಯಲ್ಲಿ ತಪ್ಪತಸ್ಥರು ಯಾರು ಅನ್ನೋದು ಪತ್ತೆಯಾಗಿಲ್ಲ. ಇದೀಗ ಸಿದ್ದರಾಮಯ್ಯ ಮೇಲೆ ಮತ್ತೆ ಒತ್ತಡಗಳು ಕೇಳಿಬರುತ್ತಿದೆ.