ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಅನುಮಾನಾಸ್ಪದ ಬೆಳವಣಿಗೆ ನಡೆದಿದ್ದು, ಉಪ್ಪು ಮತ್ತು ಅಳತೆ ಟೇಪನ್ನು ತೆಗೆದುಕೊಂಡು ಅರಣ್ಯದೊಳಗೆ ಕಾರ್ಮಿಕರು ತೆರಳಿದ್ದಾರೆ. ಇದರಿಂದ ಕಳೇಬರಹದ ಕೆಲವು ಮೂಳೆಗಳು ಸಿಕ್ಕ ಬಗ್ಗೆ ಮಾಹಿತಿ ಲಭ್ಯವಾಗಿದೆ

ಬೆಳ್ತಂಗಡಿ: ಧರ್ಮಸ್ಥಳ ಶವ ಹೂತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಅನುಮಾನಾಸ್ಪದ ಬೆಳವಣಿಗೆ ನಡೆದಿದೆ. ಪ್ರಕರಣದ ತನಿಖೆಯ ಭಾಗವಾಗಿ, ಒಂದು ಮೂಟೆ ಉಪ್ಪು ಮತ್ತು ಅಳತೆ ಟೇಪನ್ನು ತೆಗೆದುಕೊಂಡು ಅರಣ್ಯದೊಳಗೆ ಕಾರ್ಮಿಕರು ತೆರಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಹಿನ್ನಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಕಳೇಬರಹದ ಅವಶೇಷಗಳು ಸಿಕ್ಕಿದೆ ಎನ್ನಲಾಗುತ್ತಿದೆ. ಕೆಲವು ಮೂಳೆಗಳು ಸಿಕ್ಕ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಧಿಕೃತವಾಗಿ ಎಸ್ಐಟಿ ಮೂಲಗಳು ದೃಢಪಡಿಸಿಲ್ಲ. ಆದರೆ ಅಧಿಕಾರಿಗಳ ಚಲನವಲನಗಳನ್ನು ಗಮನಿಸಿದರೆ ಕಳೇಬರಹ ಸಿಕ್ಕಿರುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ 6 ನೇ ಸ್ಪಾಟ್ ನಲ್ಲಿ ಮೊದಲ ಕಳೆಬರ ಪತ್ತೆಯಾಗಿತ್ತು. ಇಂದು 11 ನೇ ಪಾಯಿಂಟ್‌ ಬಿಟ್ಟು ಕಾಡಿನ ಒಳಭಾಗದಲ್ಲಿ ಶೋಧ ನಡೆಯುತ್ತಿದೆ.

ಈ ಬಗ್ಗೆ ಎಸ್ಐಟಿ ಮೂಲಗಳಿಂದ ಈವರೆಗೆ ಈ ಮಾಹಿತಿಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಶವದ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗುತ್ತಿದ್ದು, ಬಂಗ್ಲಾಗುಡ್ಡ ಪ್ರದೇಶದಲ್ಲಿ ಮೂಳೆಗಳು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಊಟದ ವಿರಾಮ ತೆಗೆದುಕೊಳ್ಳದೆ ಉತ್ಖನನ ನಡೆಯುತ್ತಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಅರಣ್ಯ ಇಲಾಖೆ ತಂಡವು ಆಳತೆ ಟೇಪ್ ಹಿಡಿದುಕೊಂಡು ಕಾಡಿನೊಳಗೆ ಹೋಗಿದೆ. ಶಂಕಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದೆ. ಅದೇ ರೀತಿ ಪೊಲೀಸ್ ಸಿಬ್ಬಂದಿಯು ಗನ್‌ಗಳೊಂದಿಗೆ ಕಾಡಿನ ಒಳಭಾಗಕ್ಕೆ ತೆರಳಿದ್ದು, ಕಾಡಿನ ಒಳ ಪ್ರದೇಶಗಳಲ್ಲಿ ಉತ್ಖನನ ಕಾರ್ಯಚರಣೆ ನಡೆಸಿದ್ದಾರೆ. ಕಳೆದ 2.30 ಗಂಟೆಗಳ ಕಾಲ ಎಸ್ಐಟಿ ತಂಡವು ಕಾಡಿನೊಳಗೆ ಸುತ್ತಾಡಿ ಪರಿಶೀಲನೆ ನಡೆಸಿದರೂ, ಯಾವುದೇ ಅವಶೇಷಗಳು ಪತ್ತೆಯಾಗಿರಲಿಲ್ಲ.

ಕಾಡಿನೊಳಗೆ ಉತ್ಖನನದ ವೇಳೆ ಸಿಕ್ಕಿತಾ ಕೊಳೆತ ಮೃತದೇಹ?

ಪಾಯಿಂಟ್ ನಂಬರ್ 11 ಅಗೆಯದೇ ಅನಾಮಿಕನ ಜೊತೆಗೆ ಕಾಡಿನ ಒಳಭಾಗಕ್ಕೆ ತೆರಳಿದ್ದ ಎಸ್ಐಟಿ ಟೀಂ ಸಿಕ್ಕಿತಾ ಕೊಳೆತ ಮೃತದೇಹ ಎಂಬ ಪ್ರಶ್ನೆ ಎದ್ದಿದೆ. ನಾಲ್ಕೈದು ವರ್ಷಗಳ ಹಿಂದೆ ಸಾವನ್ನಪ್ಪಿದ ಮೃತದೇಹ ಪತ್ತೆಯಾಯ್ತಾ? ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ಯಾ? ಹೀಗೆ ಹಲವು ಪ್ರಶ್ನೆ ಎದ್ದಿದೆ. ಕಾರಣ ಕೆಲವೊಮ್ಮೆ DNA ಸಂರಕ್ಷಣೆಗೆ ಉಪ್ಪಿನ ಬಳಕೆ ಮಾಡಲಾಗುತ್ತದೆ. ಉಪ್ಪು ಶವದ ಭಾಗವನ್ನು ಒಣಗಿಸಿ DNA ಕ್ಷಯದಿಂದ ರಕ್ಷಿಸಬಹುದು. ಮೃತದೇಹದ ಮೂಳೆ ಅಥವಾ ದೇಹ ಭಾಗವನ್ನು ಉಪ್ಪಿನಲ್ಲಿ ಸಂಗ್ರಹಿಸಿ ನಂತರ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಟ್ರಾನ್ಸ್‌ಪೋರ್ಟ್ ಸಮಯದಲ್ಲೂ ಶವದ ಎಲುಬು ಅಥವಾ ದಂತ ಭಾಗ ಉಪ್ಪಿನೊಂದಿಗೆ ವಸ್ತ್ರದಲ್ಲಿ ಹಾಕುವುದು ತಾತ್ಕಾಲಿಕ ಸಂರಕ್ಷಣಾ ವಿಧಾನವಾಗಿದೆ. ಇದು ಫಂಗಸ್ ಅಥವಾ ಬ್ಯಾಕ್ಟೀರಿಯಾವನ್ನು ತಡೆಯುವಲ್ಲಿ ಹಾಗೂ DNA ಅಳಿಯದಂತೆ ಉಳಿಯಲು ಸಹಕಾರಿಯಾಗಿದೆ. ಸದ್ಯ ಕಾಡಿನ ಒಳಗೆ ಮೂರು ಮೂಟೆ ಉಪ್ಪು ಕಾರ್ಮಿಕರು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಮತ್ತಷ್ಟು ಕುತೂಹಲ ಹುಟ್ಟಿಸಿದ ಎಸ್ಐಟಿ ನಡೆ.

ಧರ್ಮಸ್ಥಳಕಾಡಿನಲ್ಲಿ 11ರಲ್ಲಿ ಸಮಾಧಿ ಅಗೆಯುವ ಕಾರ್ಯಾಚರಣೆ ಏಕಾಏಕಿ ಸ್ಥಗಿತಗೊಳಿಸಿ ಉತ್ಖನನ ಬದಲು ಕಾಡಿನ ಒಳ ಭಾಗಕ್ಕೆ ಅನಾಮಿಕ ದೂರುದಾರ ಮತ್ತು ಎಸ್‌ಐಟಿ ತಂಡ ಹೋಗಿದೆ. ಕೂಲಿಯಾಳುಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಕೂಡ ಕಾಡಿನ ಒಳಭಾಗಕ್ಕೆ ಹೋಗಿದ್ದು, ಉಪ್ಪು ಮತ್ತು ಅಳತೆ ಟೇಪ್ ತೆಗೆದುಕೊಂಡು ಹೋಗಲು ಮಾತ್ರ ಅಲ್ಲಿಂದ ಕೂಲಿಯಾಳುಗಳು ಮತ್ತು ಅಧಿಕಾರಿಗಳು ಒಮ್ಮೆ ಕಾಣಿಸಿಕೊಂಡಿದ್ದರು. ಹೀಗಾಗಿ ಮತ್ತೊಂದು ಅಸ್ಥಿಪಂಜರ ಸಿಕ್ಕಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಕೋರ್ಟ್ ಗೆ ಒಪ್ಪಿಸಿದ್ದ ಬುರುಡೆ ಸುಲಭದಲ್ಲೇ ಅನಾಮಿಕನಿಗೆ ಸಿಕ್ಕಿತ್ತು! ಈಗ್ಯಾಕೆ ಎಸ್‌ಐಟಿಗೆ ಸಿಕ್ತಿಲ್ಲ?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಸಂಚಲನಕಾರಿ ಪ್ರಕರಣ ಈಗ ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 11ರಂದು ಕೋರ್ಟ್‌ಗೆ ಒಪ್ಪಿಸಲಾದ ಮಾನವ ಅಸ್ಥಿಪಂಜರದ ಬುರುಡೆ ಸುಲಭದಲ್ಲೇ ಅನಾಮಿಕನಿಗೆ ಸಿಕ್ಕಿತ್ತು! ಆದರೆ ಈಗ ತನಿಖಾ ಅಧಿಕಾರಿಗಳಿಗೆ ಎಷ್ಟೇ ಹುಡುಕಿದರೂ ಅಸ್ಥಿಪಂಜರ ಸಿಕ್ಕುತ್ತಿಲ್ಲ ಎಂಬುದೊಂದು ಹೊಸ ತಿರುವು ನೀಡಿದೆ.

ಆ ದಿನ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಬುರುಡೆಗಳನ್ನು ಸುಲಭವಾಗಿ ಪತ್ತೆ ಹಚ್ಚಿದ್ದ ಅನಾಮಿಕ ವ್ಯಕ್ತಿ, ಇದೀಗ ಎಸ್ಐಟಿ ಅಧಿಕಾರಿಗಳೆದುರು ಅನುಮಾನಾಸ್ಪದ ನಡವಳಿಕೆಯನ್ನು ತೋರಿಸುತ್ತಿದ್ದಾನೆ. ಈಗ ಆತ ಗುರುತಿಸಿದ ಸ್ಥಳದಲ್ಲಿ ಎಷ್ಟು ಶೋಧಿಸಿದರೂ ಅಸ್ಥಿಪಂಜರಗಳು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಈಗ ಯಾವುದೇ ಸ್ಪಾಟ್ ಗಳಲ್ಲೂ ಬುರುಡೆ ಸಿಗುತ್ತಿಲ್ಲ ಯಾಕೆ? ಅನಾಮಿಕ ವ್ಯಕ್ತಿಗೆ ತಲೆ ಬುರುಡೆ ಸಿಕ್ಕಿದ್ದೆಲ್ಲಿ? ಬೇರೆ ಯಾರಾದರೂ ಅವರಿಗೆ ನೀಡಿದರೋ? ಎಂಬ ಅನುಮಾನಗಳು ಕಾಡುತ್ತಿವೆ.

ಈ ಬಗ್ಗೆ ಗಂಭೀರವಾಗಿ ಗಮನ ಹರಿಸಿದ ವಿಶೇಷ ತನಿಖಾ ತಂಡ (ಎಸ್ಐಟಿ), ಈಗ ಅನಾಮಿಕನನ್ನು ತೀವ್ರವಾಗಿ ವಿಚಾರಣೆ ಮಾಡುತ್ತಿದೆ. ಎಸ್ಐಟಿ ಈಗಾಗಲೇ ಅನಾಮಿಕ ವ್ಯಕ್ತಿ ಮಾರ್ಗದರ್ಶನದಂತೆ ತೋರಿಸಿದ್ದ ಸ್ಥಳಗಳಲ್ಲಿ ಮಹಜರು ನಡೆಸಿದರೂ, ಯಾವುದೇ ಹೊಸ ಅಸ್ಥಿಪಂಜರ ಪತ್ತೆಯಾಗಿಲ್ಲ. ಅದರಿಂದ, ಈ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ಪಾತ್ರದ ಕುರಿತು ಮತ್ತಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಪ್ರಕರಣ ತೀವ್ರತೆ ಪಡೆಯಲು ಬುರುಡೆ ತಂದನಾ ಎಂಬ ಅನುಮಾನ ಮೂಡಿದೆ. ಆವತ್ತು ತಂದು ಕೊಟ್ಟ ಬುರುಡೆಯ ಸ್ಥಳ ಈಗಾಗಲೇ ಮಹಜರು ಮಾಡಿರುವ ಎಸ್ಐಟಿಗೆ ಏನೂ ಸಿಕ್ಕಿಲ್ಲ. ಪ್ರಸ್ತುತ ತನಿಖೆ ಮುಂದುವರೆದಿದ್ದು, ಶೀಘ್ರದಲ್ಲೇ ಸತ್ಯ ಬಯಲಿಗೆ ಬರಲಿದೆ ಎಂಬ ನಂಬಿಕೆ ಅಧಿಕಾರಿಗಳಿಗಿದೆ.