ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ದೂರು ನೀಡಿದ ವ್ಯಕ್ತಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಎಸ್‌ಐಟಿ ತನಿಖಾ ತಂಡದ ಇನ್ಸ್‌ಪೆಕ್ಟರ್ ಒಬ್ಬರು ದೂರು ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ದೂರುದಾರರು ವಕೀಲರ ಮೂಲಕ ತಿಳಿಸಿದ್ದಾರೆ.
ದಕ್ಷಿಣ ಕನ್ನಡ (ಆ.02): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ದೂರು ನೀಡಲಾಗಿರುವ ಅನಾಮಿಕ ವ್ಯಕ್ತಿಗೆ, ಈ ಕೇಸಿನಲ್ಲಿ ನಿಮಗೆ ಶಿಕ್ಷೆಯಾಗುತ್ತದೆ. ಕೂಡಲೇ ದೂರನ್ನು ವಾಪಸ್ ಪಡೆದುಕೊಳ್ಳುವಂತೆ ಎಸ್‌ಐಟಿ ತನಿಖಾ ತಂಡದ ಇನ್ಸ್‌ಪೆಕ್ಟರ್ ಒಬ್ಬರು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರುದಾರ ವಕೀಲರಿಗೆ ತಿಳಿಸಿದ್ದಾರೆ. ಆದರೆ, ಇದನ್ನು ಎಸ್‌ಐಟಿ ತಂಡದ ಅಧಿಕಾರಿಗಳು ನಿರಾಕರಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಶವಗಳನ್ನು ನಾನು ಕಾಡಿನಲ್ಲಿ ಹೂತಿದ್ದೇನೆ. ಅದರಲ್ಲಿ ಕೆಲವು ಶವಗಳ ಬಟ್ಟೆಗಳು ಅಸ್ತವ್ಯಸ್ತವಾಗಿದ್ದರೆ, ಕೆಲವು ಮಹಿಳಾ ಶವಗಳಿಗೆ ಒಳ ಉಡುಪು ಇರಲಿಲ್ಲ ಎಮದು ಆರೋಪ ಮಾಡಿದ್ದನು. ನಾನು ಶವ ಹೂಳಿದ ಸ್ಥಳಗಳನ್ನು ತೋರಿಸುವುದಾಗಿ ಅನಾಮಿಕ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದನು. ಇದರ ತನಿಖೆಗೆ ಸರ್ಕಾರದಿಂದ 24 ಜನರ ವಿಶೇಷ ತನಿಖಾ ತಂಡವೊಂದನ್ನು ರಚನೆ ಮಾಡಿದೆ. ಈ ಎಸ್‌ಐಟಿ ತಂಡವು ಕಳೆದೊಂದು ವಾರದಿಂದ ಅನಾಮಿಕ ದೂರುದಾರ ವ್ಯಕ್ತಿಯೊಂದಿಗೆ ಶವ ಹೂಳಿದ ಸ್ಥಳಗಳನ್ನು ಗುರುತು ಮಾಡಿ, ಸಮಾಧಿ ಅಗೆಯುವ ಕೆಲಸ ಮಾಡುತ್ತಿದೆ. ಈವರೆಗೆ ನಾಲ್ಕೈದು ದಿನದಲ್ಲಿ 13 ಸಮಾಧಿಗಳನ್ನು ಗುರುತಿಸಿ, 8 ಗುಂಡಿಗಳನ್ನು ಅಗೆಯಲಾಗಿದೆ. ಒಂದು ಸಮಾಧಿಯಲ್ಲಿ ಮಾತ್ರ ಮೂಳೆ ಲಭ್ಯವಾಗಿದೆ.
ಇದೀಗ ಎಸ್‌ಐಟಿ ತಂಡದಲ್ಲಿರುವ ಅಧಿಕಾರಿ (ಪೊಲೀಸ್ ಇನ್ಸ್‌ಪೆಕ್ಟರ್) ಈ ಕೇಸಿನಲ್ಲಿ ನಿನಗೆ ಶಿಕ್ಷೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ನೀನು ಕೊಟ್ಟಿರುವ ದೂರನ್ನು ವಾಪಸ್ ಪಡೆದುಕೊಳ್ಳುವಂತೆ ದೂರುದಾರನಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಪೊಲೀಸರ ಮುಂದೆ ವಕೀಲರ ಸಹಾಯದ ಮೂಲಕ ಬಂದಿರುವ ಅನಾಮಿಕ ವ್ಯಕ್ತಿ, ಈ ಕೇಸನ್ನು ವಾಪಸ್ ಪಡೆಯುವಂತೆ ಪೊಲೀಸರು ಒತ್ತಡ ಹಾಕುತ್ತಿದ್ದಾರೆ ಎಂದು ವಕೀಲರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ವಕೀಲರು ಎಸ್‌ಐಟಿ ತಂಡದ ಹಿರಿಯ ಅಧಿಕಾರಿಗಳಿಗೆ, ಈ ಬಗ್ಗೆ ಪ್ರಶ್ನೆ ಮಾಡಲಾಗಿದ್ದು, ಇದನ್ನು ಹಿರಿಯ ಅಧಿಕಾರಿಗಳು ಅಲ್ಲಗಳೆದಿದ್ದಾರೆ.

ಬೆದರಿಕೆ ಹಾಕಿ, ಹೇಳಿಕೆ ಪಡೆಯುವ ಕುತಂತ್ರ.?
ದೂರುದಾರ ವ್ಯಕ್ತಿಯ ಮಾಹಿತಿ ಪ್ರಕಾರ, ತನಿಖಾಧಿಕಾರಿಯು ತಮಗೆ ಮೇಲಿಂದ ಮೇಲೆ ಒತ್ತಡ ತಂದು, ದೂರನ್ನು ವಾಪಸ್ ಪಡೆಯುವಂತಹ ಹೇಳಿಕೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ತನಿಖೆಯ ನೈತಿಕತೆ ಮೇಲೆಯೇ ಹಲವು ಪ್ರಶ್ನೆಗಳು ಮೂಡಿವೆ. ಈ ಘಟನೆಯ ಕುರಿತು ದೂರುದಾರನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದ್ದು, ಈ ಕುರಿತಂತೆ ತನಿಖಾ ಅಧಿಕಾರಿಗಳ ಮೇಲೆ ತನಿಖೆ ನಡೆಸುವ ಸಾಧ್ಯತೆ ಮುಂದಿರುವಂತಿದೆ. ಈಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಗಳು, ಯಾವುದೇ ಅಧಿಕಾರಿಯು ತನಿಖಾ ಕರ್ತವ್ಯ ದೌರ್ಜನ್ಯ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತನ್ನ ಜೀವಕ್ಕೆ ಆತಂಕವಿದೆ ಎಂಬ ಶಂಕೆ
ದೂರುದಾರನು ತಮ್ಮ ಜೀವ ಭದ್ರತೆಗೆ ಕೂಡ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕೆಂಬ ಒತ್ತಡವೂ ಹೆಚ್ಚುತ್ತಿದೆ. ಧರ್ಮಸ್ಥಳದಲ್ಲಿ ನಡೆದ ನೂರಾರು ಶವಗಳನ್ನು ಕಾನೂನು ಬಾಹಿರವಾಗಿ ಹೂಳಿದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಇದೆಲ್ಲವೂ ನಡೆದಿರಲು ಸಾಧ್ಯವೇ ಎಂಬ ಅನುಮಾನಗಳು ದಟ್ಟವಾಗುತ್ತಿವೆ. ಇನ್ನು ಶವಗಳನ್ನು ಹೂಳಲಾಗಿದೆ ಎಂಬ ಸ್ಥಳದಲ್ಲಿ ಗುರುತಿಸಲಾದ 13 ಸಮಾಧಿಗಳಲ್ಲಿ ಈವರೆಗೆ ಒಬ್ಬ ಗಂಡಸಿನ ಶವದ ಮೂಳೆಗಳು ಮಾತ್ರ ಲಭ್ಯವಾಗಿವೆ ಎಂದು ಹೇಳಲಾಗುತ್ತಿದೆ. ಇದೀಗ ಸಿಕ್ಕಿರುವ ಮೂಳೆಗಳನ್ನು ಎಫ್‌ಎಸ್ಎಲ್ ವರದಿಗೆ ರವಾನಿಸಲಾಗಿದೆ.
ಇಂದೂ ಕೂಡ ಉತ್ಖನನ ಕಾರ್ಯ ಮುಂದುವರಿಕೆ:
ಎಸ್‌ಐಟಿ ತಂಡದ ಅಧಿಕಾರಿಗಳು ಶನಿವಾರವೂ ಕೂಡ ಸಮಾಧಿಗಳನ್ನು ಉತ್ಖನನ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇಂದು 9 ರಿಂದ 13 ಸಮಾಧಿಗಳನ್ನು ಉತ್ಖನನ ಮಾಡಿ ಯಾವುದಾದರೂ ಮನುಷ್ಯರ ಮೂಳೆಗಳು ಸಿಗಲಿವೆಯೇ ಎಂಬ ಶೋಧ ಕಾರ್ಯವನ್ನೂ ಮುಂದುವರೆಸಲಿದ್ದಾರೆ. ಇನ್ನು 9 ರಿಂದ 13ರ ಸಂಖ್ಯೆಯ ಸಮಾಧಿಗಳಲ್ಲಿ ಖಚಿತವಾಗಿ ಮೂಳೆಗಳು ಲಭ್ಯ ಆಗುತ್ತವೆ ಎಂದು ಅನಾಮಿಕ ವ್ಯಕ್ತಿ ಭರವಸೆ ವ್ಯಕ್ತಪಡಿಸಿದ್ದಾನೆ. ಕಾರಣ, ಈ ಸ್ಥಳಗಳಲ್ಲಿ ತಾನು ಹೆಣ ಹೂತಿದ್ದಾಗಿ ಬಲವಾಗಿ ಪೊಲೀಸ್ ಇಲಾಖೆಗೆ ತಿಳಿಸಿದ್ದಾನೆ.
