ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ ಆರೋಪದಲ್ಲಿ ಬಂಧಿತನಾಗಿರುವ 'ಮಾಸ್ಕ್‌ಮ್ಯಾನ್' ಚಿನ್ನಯ್ಯನ ಸಹೋದರ ಆರ್ಮುಗಂ, ಚಿನ್ನಯ್ಯನ ಕೃತ್ಯದ ಹಿಂದೆ ಬೇರೆಯವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಚಿನ್ನಯ್ಯ ಒಳ್ಳೆಯ ಹುಡುಗ, ಇಂತಹ ಕೆಲಸ ಮಾಡುವವನಲ್ಲ ಎಂದು ಹೇಳಿದ್ದಾರೆ.
ಚಾಮರಾಜನಗರ (ಆ.25): ಧರ್ಮಸ್ಥಳದಲ್ಲಿ ನಡೆದಿದ್ದ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪ ಮಾಡಿದ ಹಾಗೂ ಬುರುಡೆಗಳನ್ನು ತೆಗೆದುಕೊಂಡು ಬಂದ ಪ್ರಕರಣದ ಆರೋಪಿ, 'ಮಾಸ್ಕ್‌ಮ್ಯಾನ್' ಎಂದೇ ಕುಖ್ಯಾತಿ ಪಡೆದಿದ್ದ ಚಿನ್ನಯ್ಯನ ಬಂಧನದ ಬೆನ್ನಲ್ಲೇ, ಆತನ ಸಹೋದರ ಆರ್ಮುಗಂ ಹಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ತಮ್ಮ ಚಿನ್ನಯ್ಯ ಬಹಳ ಒಳ್ಳೆಯ ಹುಡುಗ. ಇಂತಹ ಕೆಲಸ ಮಾಡುವವನಲ್ಲ. ಅವನೇಕೆ ಈ ರೀತಿ ಮಾಡಿದ ಎಂದು ನಮಗೆ ಅರ್ಥವಾಗುತ್ತಿಲ್ಲ. ಚಿನ್ನಯ್ಯನ ಈ ಕೃತ್ಯದ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಎಂದು ಚಿನ್ನಯ್ಯನ ಅಣ್ಣ ಆರ್ಮುಗಂ ಗಂಭೀರ ಆರೋಪ ಮಾಡಿದ್ದಾರೆ.
ತಮಿಳುನಾಡಿನ ಸತ್ಯಮಂಗಲಂ ತಾಲ್ಲೂಕಿನ ಚಿಕ್ಕರಸಂಪಾಳ್ಯ ಗ್ರಾಮದಲ್ಲಿ ನೆಲೆಸಿರುವ ಆರ್ಮುಗಂ, ತಮ್ಮನ ಬಗ್ಗೆ ಮಾತನಾಡುತ್ತ, 'ಚಿನ್ನಯ್ಯ ಸುಮಾರು 7 ವರ್ಷಗಳ ಹಿಂದೆ ಧರ್ಮಸ್ಥಳದಿಂದ ತಮ್ಮ ಊರಿಗೆ ವಾಪಸ್ ಬಂದಿದ್ದನು. ನನಗೆ ಧರ್ಮಸ್ಥಳದಲ್ಲಿ ಇರಲು ಇಷ್ಟವಿಲ್ಲ, ಹಾಗಾಗಿ ಬಂದೆ' ಎಂದು ಚಿನ್ನಯ್ಯ ಹೇಳಿದ್ದನು. ಅಲ್ಲಿಂದ ಬಂದ ನಂತರ ಚಿಕ್ಕರಸಂಪಾಳ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಆದರೆ, ಕಳೆದ 2 ತಿಂಗಳಿನಿಂದ ಚಿನ್ನಯ್ಯ ಕೆಲಸಕ್ಕೆ ಹೋದವನು ಮತ್ತೆ ವಾಪಸ್ ಬಂದಿಲ್ಲ ಎಂದು ಆರ್ಮುಗಂ ಹೇಳಿದ್ದಾರೆ.
ನನ್ನ ತಮ್ಮ ಬಹಳ ಒಳ್ಳೆಯ ಹುಡುಗ
ಆರ್ಮುಗಂ ತಮ್ಮನ ಬಗ್ಗೆ ಭಾವುಕರಾಗಿ ಮಾತನಾಡುತ್ತ, 'ನನ್ನ ತಮ್ಮ ಚಿನ್ನಯ್ಯ ಬಹಳ ಒಳ್ಳೆಯ ಹುಡುಗ. ಇಂತಹ ಕೆಲಸ ಮಾಡುವವನಲ್ಲ. ಅವನೇಕೆ ಈ ರೀತಿ ಮಾಡಿದ ಎಂದು ನಮಗೆ ಅರ್ಥವಾಗುತ್ತಿಲ್ಲ. ಚಿನ್ನಯ್ಯನ ಈ ಕೃತ್ಯದ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. "ಯಾರಿದ್ದಾರೆ ಅನ್ನೋದು ಗೊತ್ತಿಲ್ಲ. ಅವನ ಹಿಂದೆ ಯಾರೋ ಇದ್ದಾರೆ ಅನಿಸುತ್ತೆ. ಯಾರು ಅವನನ್ನು ಈ ಕೆಲಸಕ್ಕೆ ಪ್ರೇರೇಪಿಸಿದ್ದಾರೆ ಅನ್ನೋದು ಚಿನ್ನಯ್ಯನೇ ಹೇಳಬೇಕು" ಎಂದು ಆರ್ಮುಗಂ ಒತ್ತಾಯಿಸಿದ್ದಾರೆ.
ಮತಾಂತರದ ಆರೋಪಕ್ಕೆ ಸ್ಪಷ್ಟನೆ:
ಚಿನ್ನಯ್ಯ ಮತಾಂತರವಾಗಿದ್ದಾನೆ ಎಂಬ ವದಂತಿಗಳ ಬಗ್ಗೆಯೂ ಆರ್ಮುಗಂ ಸ್ಪಷ್ಟನೆ ನೀಡಿದ್ದಾರೆ. 'ನಮ್ಮ ಕುಟುಂಬದವರು ಹಿಂದೂ ದೇವರನ್ನೇ ನಂಬಿಕೊಂಡಿದ್ದೇವೆ. ನನ್ನ ತಮ್ಮ ಕೂಡ ಮತಾಂತರವಾಗಿಲ್ಲ. ಆತ ಇಂತಹ ಕೆಲಸದಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ' ಎಂದು ಆರ್ಮುಗಂ ಹೇಳಿದ್ದಾರೆ.
ಚಿನ್ನಯ್ಯ ವಾಪಸ್ ಬರಬೇಕೆಂದು ಬಯಸಿರುವ ಆರ್ಮುಗಂ, 'ಒಂದು ವೇಳೆ ನನ್ನ ತಮ್ಮ ಮತ್ತೆ ವಾಪಸ್ ಬಂದರೆ, ದೇವರಿಗೆ ಕೈಮುಗಿದು ಬರುತ್ತೇನೆ' ಎಂದು ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡುವಾಗ ಆರ್ಮುಗಂ ಈ ಎಲ್ಲಾ ಹೇಳಿಕೆಗಳನ್ನು ನೀಡಿದ್ದು, ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಚಿನ್ನಯ್ಯನ ಬಂಧನದ ನಂತರ ಮತ್ತಷ್ಟು ತನಿಖೆಗಳು ನಡೆಯಬೇಕಿದ್ದು, ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದು ಬೆಳಕಿಗೆ ಬರಬೇಕಿದೆ.
