ಪಾಂಡವಪುರದ ನಿವೃತ್ತ ಶಿಕ್ಷಕ ರಾಮೇಗೌಡ ಅವರು, ತಾವು ಸಾಕುತ್ತಿದ್ದ ವರಲಕ್ಷ್ಮಿ ಎಂಬ ಗರ್ಭಿಣಿ ಹಸುವಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಮನುಷ್ಯರಿಗೆ ಮಾಡುವಂತೆಯೇ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿ ನೂರಾರು ಜನರಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ತಮ್ಮ ಅಪಾರ ಗೋ ಪ್ರೀತಿಯನ್ನು ಮೆರೆದಿದ್ದಾರೆ.

ಪಾಂಡವಪುರ (ಡಿ.17): ತಾಲೂಕಿನ ಚಿಕ್ಕಮರಳಿ ಗೇಟ್‌ನ ಮಡಿಕೆಪಟ್ಟಣ ಗ್ರಾಮದ ನಿವಾಸಿ, ನಿವೃತ್ತ ಶಿಕ್ಷಕ ರಾಮೇಗೌಡ ಎಂಬ ರೈತ ತಾನು ಸಾಕುತ್ತಿದ್ದ ವರಲಕ್ಷ್ಮಿ ಎಂಬ ಹೆಸರಿನ ಹಸುವು ಗರ್ಭಧರಿಸಿ 9 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಹಸುವಿಗೆ ಸೀಮಂತ ಮಾಡಿ ನೂರಾರು ಜನರಿಗೆ ಊಟ ಹಾಕಿಸುವ ಮೂಲಕ ಹಸುವಿನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಗರ್ಭಿಣಿ ಹಸುವಿಗೆ ಸೀಮಂತ

ಹಸುಗಳನ್ನು ಖಸಾಯಿ ಖಾನೆಗೆ ಬಿಡುವುದು, ಕೆಚ್ಚಲು ಕತ್ತರಿಸುವ ಸಮಾಜದ ನಡುವೆ ರೈತನೊಬ್ಬ ಗರ್ಭಿಣಿಯರಿಗೆ ಸೀಮಂತ ಮಾಡುವ ಮಾದರಿಯಲ್ಲಿಯೇ ಹಸುವಿಗೆ ಮಾಡಿದ್ದಾರೆ. ರೈತ ರಾಮೇಗೌಡರು ತನ್ನ ಹಸು 2ನೇ ಬಾರಿ ಗರ್ಭಧರಿಸಿ 9 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿ ತಮ್ಮ ಸಂಬಂಕರು, ಕುಟುಂಬಸ್ಥರು ಎಲ್ಲರಿಗೂ ಮಾಹಿತಿ ನೀಡಿ ಗರ್ಭಿಣಿ ಹೆಣ್ಣು ಮಕ್ಕಳಿಗೆ ಸೀಮಂತ ಮಾಡುವ ಮಾದರಿಯಲ್ಲಿ ಹಣ್ಣು, ತರಕಾರಿ, ವಿವಿಧ ಸಿಹಿ ತಿನಿನ್ನುಗಳ ತಟ್ಟೆತುಂಬಿ, ಹಸುವಿನ ಮೇಲೆ ಹೊಸ ಸೀರೆ, ರವಿಕೆ ಹಾಕಿ ಸೀಮಂತ ಮಾಡಿದ್ದಾರೆ. 100ಕ್ಕೂ ಹೆಚ್ಚುಮಂದಿ ಜನರಿಗೆ ಭರ್ಜರಿ ಊಟ ಹಾಕಿಸಿ ಗೋಪ್ರೇಮಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ನಿವೃತ್ತ ಶಿಕ್ಷಕ ರಾಮೇಗೌಡರ ಗೋ ಪ್ರೇಮ:

ನಿವೃತ್ತ ಶಿಕ್ಷಕನಾಗಿ, ಗೋವುಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ರೈತ ರಾಮೇಗೌಡ ತಾವು ಸಾಕಿರುವ ಎಲ್ಲಾ ಹಸುಗಳನ್ನು ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಮಕ್ಕಳಿಗೆ ಹುಟ್ಟುಹಬ್ಬ ಆಚರಣೆ ಮಾಡುವ ಮಾದರಿಯಲ್ಲಿಯೇ ಹಸುಗಳಿಗೆ ಹುಟ್ಟುಹಬ್ಬ ಮಾಡುವುದು, ಹಬ್ಬಗಳಲ್ಲಿ ಪೂಜೆ ಸಲ್ಲಿಸುವುದು, ಗರ್ಭಧರಿಸಿ ಹಸುಗಳಿಗೆ ಸೀಮಂತ ಮಾಡುವುದು ಹೀಗೆ ವಿಶೇಷವಾದ ರೀತಿಯಲ್ಲಿ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಬರುತ್ತಾ ಬರುತ್ತಿದ್ದು, ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.