1987ರಲ್ಲಿ ಶಾಲೆಗೆ ದಾಖಲಾಗಿ 1995ರಲ್ಲಿ ಶಾಲೆ ಬಿಟ್ಟ ಬಗ್ಗೆ ದಾಖಲೆ ದೊರೆತಿದೆ. 1994ರಲ್ಲಿ ಈತನ ಅಕ್ಕ ಉಜಿರೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಮೂಲಕ ಈತನೂ ಧರ್ಮಸ್ಥಳದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.

ಮಂಗಳೂರು (ಆ.24): ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದಾಗಿ ಬುರುಡೆ ಬಿಟ್ಟಿದ್ದ ಚಿನ್ನಯ್ಯನ ತಂದೆ ನಂಜಯ್ಯ ಮೂಲತಃ ತಮಿಳುನಾಡಿನವರು. ಅವರು ಮಂಡ್ಯದ ಚಿಕ್ಕಬಳ್ಳಿ ಗ್ರಾಮಕ್ಕೆ ವಲಸೆ ಬಂದು ನೆಲೆಸಿದ್ದರು. ಚಿನ್ನಯ್ಯ 1980ರಲ್ಲಿ ಜನಿಸಿದ್ದನು. 1987ರಲ್ಲಿ ಶಾಲೆಗೆ ದಾಖಲಾಗಿ 1995ರಲ್ಲಿ ಶಾಲೆ ಬಿಟ್ಟ ಬಗ್ಗೆ ದಾಖಲೆ ದೊರೆತಿದೆ. 1994ರಲ್ಲಿ ಈತನ ಅಕ್ಕ ಉಜಿರೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಮೂಲಕ ಈತನೂ ಧರ್ಮಸ್ಥಳದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇಲ್ಲಿ ಕೆಲಸ ಬಿಟ್ಟ ಬಳಿಕ ತಮಿಳುನಾಡಿಗೆ ತೆರಳಿದ್ದ.

ಎರಡು ವರ್ಷಗಳ ಹಿಂದೆ ಚಿನ್ನಯ್ಯ ತಮಿಳುನಾಡಿನ ಈರೋಡ್ ಬಳಿಯ ಚಿಕ್ಕರಸಿಪಾಳ್ಯ ಬಳಿ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ. ಮೃತ ಸೌಜನ್ಯನ ಅಜ್ಜ ಈತನನ್ನು ಉಜಿರೆಗೆ ಕರೆಸಿ ಅಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಸಿದ್ದರು. ಬಳಿಕ ಧರ್ಮಸ್ಥಳದಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆದರೆ ಆತನ ಮೇಲೆ ಗುರುತರ ಆರೋಪ ಬಂದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಬಳಿಕ ಆತ ತಮಿಳುನಾಡಿಗೆ ತೆರಳಿದ್ದ. ಈಗ ಮತ್ತೆ ಉಜಿರೆಗೆ ಬಂದ ಆತ ಬುರುಡೆ ಟೀಂನೊಂದಿಗೆ ಸಂಪರ್ಕ ಬೆಳೆಸಿದ್ದ. ಹತ್ಯೆಯಾದ ಸೌಜನ್ಯನ ಮಾವನಿಂದ ತಿಮರೋಡಿಗೆ ಚಿನ್ನಯ್ಯ ಪರಿಚಯವಾಗಿ, ಅಲ್ಲಿಂದ ಷಡ್ಯಂತ್ರ ನಡೆಯಿತು. ಹಲವು ಸುಳ್ಳಿನ ಸರಮಾಲೆಗಳನ್ನು ಸೃಷ್ಟಿಸಿ ಈ ಪ್ಲಾನ್‌ನಲ್ಲಿ ಪಾತ್ರಧಾರಿಯಾಗಿ ಕೆಲಸ ಮಾಡಿದ್ದ.

ಚಿನ್ನಯ್ಯ ಬಂಧನಕ್ಕೆ ಮಟ್ಟಣ್ಣವರ್‌ ಸ್ವಾಗತ: ಮುಸುಕುಧಾರಿ ಚಿನ್ನಯ್ಯನ ಬಂಧನವನ್ನು ಸ್ವಾಗತಿಸುತ್ತೇವೆ. ಇದು ಒಳ್ಳೆಯ ಬೆಳವಣಿಗೆ. ಆತನ ನಾರ್ಕೋ ಅನಾಲಿಸಿಸ್‌ ಪರೀಕ್ಷೆ ನಡೆಸಬೇಕು ಎಂದು ಹೋರಾಟಗಾರ ಗಿರೀಶ್ ಮಟ್ಟಣ್ಣವರ್‌ ಎಸ್‌ಐಟಿಯನ್ನು ಆಗ್ರಹಿಸಿದ್ದಾರೆ. ಶನಿವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚಿನ್ನಯ್ಯನ ಬಂಧನ ಮಾಡಿರುವ ಎಸ್ಐಟಿ ಬಗ್ಗೆ ಯಾರೂ ತಪ್ಪು ಅಭಿಪ್ರಾಯ ಹೇಳುವುದು ಬೇಡ. ತನಿಖೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಎಸ್ಐಟಿಗೆ ಸಂಪೂರ್ಣ ಅಧಿಕಾರವಿದೆ. ಅನಾಮಿಕನಿಗೆ ನಾರ್ಕೋ ಅನಾಲಿಸಿಸ್ ಟೆಸ್ಟ್ ಮಾಡಲು ಪ್ರಾರಂಭದಲ್ಲಿ ಬೇಡ ಎಂದು ಹೇಳಲಾಯಿತು. ಆದರೆ ಈಗ ಒಂದು ಹಂತದ ಪ್ರಕ್ರಿಯೆ ಮುಗಿದಿದೆ. ಅನೇಕ ಕಡೆ ಉತ್ಖನನ ಕಾರ್ಯ ಆಗಿದೆ, ಕೆಲವು ಕಡೆ ಎಲುಬು ಕೂಡ ಸಿಕ್ಕಿದೆ. ಹಾಗಾಗಿ ಇನ್ನು ಮುಸುಕುಧಾರಿಯ ನಾರ್ಕೋ ಅನಾಲಿಸಿಸ್ ಟೆಸ್ಟ್ ಮಾಡಿ ಸತ್ಯಾಸತ್ಯತೆ ಹೊರಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಬುರುಡೆ ಕತೆ
ಜೂ.22: ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್‌ ಎಸ್‌.ದೇಶಪಾಂಡೆ ಹೆಸರಿನ ಪತ್ರವೊಂದು ಜಾಲತಾಣದಲ್ಲಿ ವೈರಲ್‌ ಆಗಿತ್ತು. ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಬಗ್ಗೆ ಆರೋಪಿಸಲಾಗಿತ್ತು

ಜು.3: ವಕೀಲರಿಂದ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು. ದೂರಿನ ಬಗ್ಗೆ ದಾಖಲೆ ಸಲ್ಲಿಕೆ

ಜು.4: ದೂರು ಸ್ವೀಕರಿಸಿದ ದ.ಕ. ಜಿಲ್ಲಾ ಪೊಲೀಸರು. ಎಫ್ಐಆರ್‌ ದಾಖಲಿಸಿ ತನಿಖೆ ಆರಂಭ

ಜು.11: ಬೆಳ್ತಂಗಡಿ ಕೋರ್ಟ್‌ಗೆ ತಲೆಬುರುಡೆ ಸಮೇತ ಹಾಜರಾದ ಅನಾಮಿಕ ದೂರುದಾರ. 13 ಸ್ಥಳಗಳಲ್ಲಿ ಅನಾಥ ಶವ ಹೂತಿರುವ ಬಗ್ಗೆ ಕೋರ್ಟ್‌ಗೆ ಮಾಹಿತಿ. ಈ ವೇಳೆ ಸಾಕ್ಷಿ ಸಂರಕ್ಷಣೆಯಡಿ ದೂರುದಾರನ ಪರಿಚಯ ಮರೆಮಾಚಿ ರಕ್ಷಣೆ ನೀಡಲು ಆದೇಶಿಸಿದ ಕೋರ್ಟ್‌

ಜು.20: ತನಿಖಾ ಏಜೆನ್ಸಿಗಳು, ವಕೀಲರ ಒತ್ತಾಯದ ಮೇರೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಜು.28: ಸ್ಥಳ ಮಹಜರು ಆರಂಭ. 13 ಸ್ಥಳಗಳನ್ನು ಗುರುತಿಸಿದ ಎಸ್‌ಐಟಿ

ಜು.29: ಅಸ್ಥಿಗಳ ಪತ್ತೆಗೆ ಕಾರ್ಯಾಚರಣೆ ಆರಂಭ. ಮೊದಲ ಮೂರು ದಿನಗಳಲ್ಲಿ ಉತ್ಖನನ ನಡೆಸಿದರೂ ಯಾವುದೇ ಕುರುಹು ಇಲ್ಲ

ಜು.31: 6ನೇ ಸ್ಥಳದಲ್ಲಿ ಉತ್ಖನನ ನಡೆಸಿದಾಗ ಮಾನವ ತಲೆಬುರುಡೆ ಮತ್ತು ಕೆಲವು ಮೂಳೆಗಳು ಪತ್ತೆ

ಆ.1-13: 13 ಸ್ಥಳಗಳಲ್ಲಿ ಶೋಧ ಪೂರ್ಣ. ಅಸ್ಥಿಪಂಜರ ಪತ್ತೆ ಇಲ್ಲ

ಆ.18: ಕಾರ್ಯಾಚರಣೆ ಬಗ್ಗೆ ಎಲ್ಲೆಡೆ ಟೀಕೆ. ಉತ್ಖನನಕ್ಕೆ ತಡೆ ನೀಡಿದ ರಾಜ್ಯ ಸರ್ಕಾರ

ಆ.22: ಅನಾಮಿಕ ದೂರುದಾರನ ತೀವ್ರ ವಿಚಾರಣೆ ನಡೆಸಿದ ಎಸ್ಐಟಿ ತಂಡ

ಆ.23: ದೂರುದಾರ ಚಿನ್ನಯ್ಯನನ್ನು ನಸುಕಿನಲ್ಲೇ ಬಂಧಿಸಿದ ಎಸ್ಐಟಿ ತಂಡ. 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ.