ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಸಾಕ್ಷಿಯಿಂದ ಆರೋಪಿಯಾಗಿರುವ ಚಿನ್ನಯ್ಯ, ತನಗೆ ಜೀವ ಬೆದರಿಕೆ ಇದೆ ಎಂದು ಎಸ್ಐಟಿಗೆ ದೂರು ನೀಡಿದ್ದಾನೆ. ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ಗಿರೀಶ್ ಮಟ್ಟಣ್ಣನವರ್ ಮತ್ತು ಇತರರಿಂದ ಬೆದರಿಕೆ ಕರೆಗಳು ಬರುತ್ತಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾನೆ.
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಸಾಕ್ಷಿ, ದೂರುದಾರನಾಗಿ ಬಂದು ಆರೋಪಿಯಾಗಿರುವ ಚಿನ್ನಯ್ಯ, ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ದೂರು ನೀಡಿದ್ದಾನೆ.
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ತನಗೆ ಜೀವ ಬೆದರಿಕೆ ಹಾಗೂ ಮಾನಸಿಕ ಒತ್ತಡ ಹಾಕಲಾಗುತ್ತಿದೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಆರೋಪಿಸಿದ್ದಾನೆ. ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಸೋಮವಾರ ತನ್ನ ಪತ್ನಿ ರತ್ನಾ ಜತೆ ಆಗಮಿಸಿದ ಚಿನ್ನಯ್ಯ, ‘ನನಗೆ ಮತ್ತು ನನ್ನ ಕುಟುಂಬಕ್ಕೆ ಗಿರೀಶ್ ಮಟ್ಟಣ್ಣನವರ್ ಹಾಗೂ ಇತರರಿಂದ ಜೀವ ಬೆದರಿಕೆ ಇದೆ’ ಎಂದು ದೂರು ನೀಡಿದ್ದಾನೆ.
ಗಿರೀಶ್ ಮಟ್ಟಣ್ಣವರ್, ಯುನೈಟೆಡ್ ಮೀಡಿಯಾದ ಅಭಿಷೇಕ್ ಅವರು ತನ್ನ ಅಳಿಯ ಪುರುಷೋತ್ತಮ ಹಾಗೂ ಕುಟುಂಬದ ಕೆಲವರಿಗೆ ಫೋನ್ ಮಾಡಿ, ಹೈಕೋರ್ಟ್‌ಗೆ ರಿಟ್ ಅರ್ಜಿ ಹಾಕಿರುವ ಬಗ್ಗೆ ವಿಚಾರಿಸುತ್ತಿದ್ದಾರೆ. ಕರೆ ಮಾಡಿ ಮಾಹಿತಿಗಳನ್ನು ಕೇಳುತ್ತಿದ್ದಾರೆ. ಇವರಿಂದ ತಮಗೆ, ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಪೊಲೀಸ್ ರಕ್ಷಣೆ ನೀಡಬೇಕು. ಪ್ರಕರಣದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿನ್ನಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ದೂರಿನ ವಿವರ:
ಜೂ.12ರ ರಾತ್ರಿ 9ರ ಸುಮಾರಿಗೆ ಯುನೈಟೆಡ್ ಮೀಡಿಯಾಗೆ ಸಂಬಂಧಿಸಿದ ಅಭಿಷೇಕ ಎಂಬಾತ ನನ್ನ ಅಳಿಯ ಪುರುಷೋತ್ತಮ್ ಅವರ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್ ಕರೆ ಮಾಡಿ, ನಾನು ಸಲ್ಲಿಸಿರುವ ರಿಟ್ ಅರ್ಜಿ ಕುರಿತು ವಿಚಾರಿಸಿದ್ದಲ್ಲದೆ, ಈ ಅರ್ಜಿಯ ಹಿಂದೆ ಯಾರು ಇದ್ದಾರೆ, ನಿಮಗೆ ಯಾರು ಸಹಾಯ ಮಾಡುತ್ತಿದ್ದಾರೆ, ಈ ಕೆಲಸವನ್ನು ಯಾರ ಪ್ರೇರಣೆಯಿಂದ ಮಾಡುತ್ತಿದ್ದೀರಿ? ಎಂಬುದರ ಕುರಿತು ಪದೇ ಪದೇ ಪ್ರಶ್ನೆಗಳನ್ನು ಕೇಳಿ, ನನ್ನ ಮೊಬೈಲ್ ನಂಬರ್ ಅನ್ನು ಕೇಳಿ, ನನ್ನ ಬಳಿ ಮಾತನಾಡಬೇಕೆಂದು ಹೇಳಿರುತ್ತಾರೆ ಹಾಗೂ ನನ್ನ ಕುಟುಂಬದವರ ಕುರಿತು ಮಾಹಿತಿ ಕಲೆಹಾಕಲು ಪ್ರಯತ್ನಿಸಿದ್ದಾನೆ. ಬೆದರಿಕೆ ಹಾಕುವ ಹಾಗೂ ಮಾನಸಿಕ ಒತ್ತಡ ಹೇರುವ ರೀತಿಯಲ್ಲಿ ಮಾತನಾಡಿದ್ದಾನೆ.
ಅದೇ ದಿನ ರಾತ್ರಿ 9 ಗಂಟೆಗೆ ಗಿರೀಶ್ ಮಟ್ಟಣ್ಣವರ್ ಅವರು ನನ್ನ ಪತ್ನಿಯ ಅಕ್ಕನ ಮಗನಾದ ರವಿ ಅವರ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್ ಕರೆ ಮಾಡಿ, ನನ್ನ ಬಗ್ಗೆ ಹಾಗೂ ನಾನು ರಿಟ್ ಅರ್ಜಿ ಸಲ್ಲಿಸಲು ಕಾರಣವಾದ ಕುರಿತು ಮಾಹಿತಿ ಕಲೆಹಾಕಲು ಪ್ರಯತ್ನಿಸಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಧರ್ಮಸ್ಥಳ ಕೇಸ್ ಸಿಬಿಐಗೆ ಕೊಡಿ: ಎನ್. ರವಿಕುಮಾರ್
ಬೆಂಗಳೂರು: ಧರ್ಮಸ್ಥಳದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಅಂತರರಾಜ್ಯ ಸಂಬಂಧಗಳ ಜೊತೆಗೆ ವಿದೇಶಿ ಕೈಗಳೂ ಇರಬಹುದು ಎಂಬ ಅನುಮಾನ ಜನರಲ್ಲಿ ಗಾಢವಾಗಿದೆ. ಇಂತಹ ಗಂಭೀರ ವಿಚಾರಗಳನ್ನು ರಾಜ್ಯ ಪೊಲೀಸ್ ತನಿಖೆ ಮಾಡಲು ಸಾಧ್ಯವಿಲ್ಲ, ಸಿಬಿಐ ಮಾತ್ರ ಸಂಪೂರ್ಣವಾಗಿ ತನಿಖೆ ನಡೆಸಬಲ್ಲದು ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪಾತ್ರವನ್ನು ತನಿಖೆ ಮಾಡಬೇಕಿದೆ. ಜೊತೆಗೆ ಮುಖವಾಡ ಧರಿಸಿದ ಚಿನ್ನಯ್ಯ ಆರೋಪಿಸಿದ 200 ಕೋಟಿ ರು. ಕಪ್ಪುಹಣದ ಮೂಲವನ್ನು ಪತ್ತೆಹಚ್ಚುವುದು ಅಗತ್ಯ. ಈ ಪ್ರಕರಣದಲ್ಲಿ ಅಂತರರಾಜ್ಯ ಶಕ್ತಿಶಾಲಿ ವ್ಯಕ್ತಿಗಳ ಕೈವಾಡವಿದೆ. ರಾಜ್ಯ ಪೊಲೀಸರು ಪ್ರಭಾವಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಸಾಧ್ಯ. ಹೀಗಾಗಿ ಸಿಬಿಐ ತನಿಖೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧರ್ಮಸ್ಥಳದ ಬಗ್ಗೆ ಕುತಂತ್ರಿಗಳು ಮಾಡಿದ ಅಪವಾದ, ಅಭಿಯಾನ ಮತ್ತು ಗಂಭೀರ ಆರೋಪಗಳು ಲಕ್ಷಾಂತರ ಜನರ ನಂಬಿಕೆಗೆ ಭಾರೀ ಹೊಡೆತ ನೀಡಿವೆ. ಅಪರಾಧಿಗಳನ್ನು ಹಾಗೂ ಕುತಂತ್ರಿಗಳನ್ನು ಕಾನೂನಿನ ಮುಂದೆ ತಂದು ಕಠಿಣವಾಗಿ ಶಿಕ್ಷಿಸಬೇಕು. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಖಾಂತರವೇ ಹಿಂದೂ ಸಮುದಾಯದ ಮನಸ್ಸಿಗೆ ಶಾಂತಿ ನೀಡಲು ಸಾಧ್ಯ ಎಂದು ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


