ಧರ್ಮಸ್ಥಳದ 'ಬುರುಡೆ ಪ್ರಕರಣ'ಕ್ಕೆ ಸಂಬಂಧಿಸಿದಂತೆ, ತನಗೆ ಬೆದರಿಕೆ ಹಾಕಿ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಲಾಗಿತ್ತು ಎಂದು 'ಮಾಸ್ಕ್ ಮ್ಯಾನ್' ಚಿನ್ನಯ್ಯ ಹೈಕೋರ್ಟ್‌ಗೆ ತಿಳಿಸಿದ್ದಾನೆ.
- ವಕೀಲರು, ಯೂಟ್ಯೂಬರ್, ತಿಮರೋಡಿ, ಮಟ್ಟಣ್ಣವರ್ ಹೇಳಿದಂತೆ ನಾನು ಕೇಳಿದ್ದೇನೆ: ಮಾಸ್ಕ್‌ಮ್ಯಾನ್
- ಉತ್ಖನನ ಸ್ಥಳ ಸರಿಯಾಗಿ ತೋರಿಸದ್ದಕ್ಕೆ ತಿಮರೋಡಿ, ಮಟ್ಟಣ್ಣವರ್ ನನ್ನ ತಲೆ ಗೋಡೆಗೆ ಜಜ್ಜಿದ್ದರು
- ಪ್ರಕರಣದ ಅಂತಿಮ ತನಿಖಾ ವರದಿಗಾಗಿ ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ಸ್ಫೋಟಕ ಅಂಶ
ಬೆಂಗಳೂರು (ಜೂ.13): ಧರ್ಮಸ್ಥಳ(Dharmasthala) ಗ್ರಾಮದ ‘ಬುರುಡೆ ಪ್ರಕರಣ’ಕ್ಕೆ ಸಂಬಂಧಪಟ್ಟಂತೆ ಬುರುಡೆ ಗ್ಯಾಂಗ್‌ನ ಗಿರೀಶ್ ಮಟ್ಟಣ್ಣವರ್(Girish mattannavar) ಹೇಳಿದಂತೆ ಕ್ಯಾಮೆರಾ ಮುಂದೆ ಹೇಳಬೇಕು ಎಂದು ನನಗೆ ಬೆದರಿಕೆ ಹಾಕಲಾಗಿತ್ತು ಎಂದು ‘ಮಾಸ್ಕ್ ಮ್ಯಾನ್’ ಚಿನ್ನಯ್ಯ(Chinnaiah) ಹೈಕೋರ್ಟ್(High court)ಗೆ ತಿಳಿಸಿದ್ದಾನೆ.
ಅಲ್ಲದೆ, ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ(Dr Veerendra heggade) ಅವರೇ ಅತ್ಯಾ೧ಚಾರ ಮಾಡಿ ಶವಗಳನ್ನು ಹೂಳಿದ್ದಾರೆ ಎಂದು ಹೇಳಿದರೆ ಶಿಕ್ಷೆ ವೀರೇಂದ್ರ ಹೆಗ್ಗಡೆ ಅವರಿಗೆ ಆಗುತ್ತದೆ ಎಂದು ಹೇಳಿ, ನ್ಯಾಯಾಲಯದ ಮುಂದೆ ಅದನ್ನು ಹೇಗೆ ವಿವರಿಸಬೇಕು ಎಂಬ ತರಬೇತಿಯನ್ನೂ ಕೊಟ್ಟಿದ್ದರು ಎಂದು ವಿವರಿಸಿದ್ದಾನೆ. ಪ್ರಕರಣದ ಕುರಿತು ತನಿಖೆ ರಚಿಸಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದಾಗ ವೀರೇಂದ್ರ ಹೆಗ್ಗಡೆ ಅವರು ಜೈಲಿಗೆ ಹೋಗುವ ಸಮಯ ಬಂತು ಎಂದು ಬುರುಡೆ ಗ್ಯಾಂಗ್ ಸದಸ್ಯರು ಸಂಭ್ರಮ ಪಟ್ಟಿದ್ದರೂ ಎಂದೂ ವಿವರಿಸಿದ್ದಾನೆ.
ಬುರುಡೆ ಪ್ರಕರಣದಲ್ಲಿ ಯಾವ್ಯಾವ ವ್ಯಕ್ತಿಗಳು ತನ್ನನ್ನು ಎಲ್ಲೆಲ್ಲಿ ಕರೆದುಕೊಂಡು ಹೋದರು, ಯಾವ ರೀತಿ ಆಮಿಷ ಒಡ್ಡಲಾಯಿತು, ಯಾರೆಲ್ಲ ಬೆದರಿಕೆ ಒಡ್ಡಿದರು, ನ್ಯಾಯಾಂಗ ಅಧಿಕಾರಿಗಳು ಹಾಗೂ ಕೋರ್ಟ್ ಮುಂದೆ ಯಾವ ರೀತಿ ಹೇಳಿಕೆ ನೀಡಬೇಕೆಂದು ನೀಡಿದ ತರಬೇತಿ, ತಲೆ ಬುರುಡೆ ವಿಡಿಯೋ ಮಾಡಿದ ರೀತಿ, ಅವರು ಹೇಳಿದಂತೆ ನಡೆದುಕೊಳ್ಳದ ಕಾರಣ ಮಾಡಿದ ಹಲ್ಲೆ ಸೇರಿದಂತೆ ಹಲವು ಅಂಶಗಳನ್ನು ಚಿನ್ನಯ್ಯ ವಿವರಿಸಿದ್ದಾನೆ.
ಪ್ರಕರಣದ ಅಂತಿಮ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಅತ್ಯಂತ ಶೀಘ್ರವಾಗಿ ಸಲ್ಲಿಸಲು ಹಾಗೂ ಪ್ರಾಥಮಿಕ ವಿಚಾರಣಾ ವರದಿಯಲ್ಲಿ ಹೆಸರಿಸಲಾದ ಪಿತೂರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ಮಹತ್ವದ ಅಂಶಗಳು ಇವೆ.
ಚಿನ್ನಯ್ಯ ಅರ್ಜಿಯಲ್ಲಿ ಏನೇನಿದೆ?:
ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಒಂದು ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಲಾಗಿತ್ತು., ‘ಕುಡ್ಲ ರಾಮ್ ಪೇಜ್’ ಚಾನೆಲ್‌ನ ಅಜಯ್ ಎಂಬ ಯೂಟ್ಯೂಬರ್ ಸುಮಾರು 30 ರಿಂದ 35 ವಿಡಿಯೋಗಳನ್ನು ರೆಕಾರ್ಡ್ ಮಾಡಿದರು. ಗಿರೀಶ್ ಮಟ್ಟಣ್ಣವರ್ ಹೇಳಿಕೊಟ್ಟಂತೆಯೇ ಹೇಳಿಕೆ ನೀಡುವಂತೆ ಬೆದರಿಸಲಾಯಿತು. ಜೀವ ಭಯದಿಂದ ಅವರ ಸೂಚನೆ ಪಾಲಿಸಿದೆ. ಸಮೀರ್ ಎಂ.ಡಿ. ಸಹ ನನ್ನ ವಿಡಿಯೋ ರೆಕಾರ್ಡ್ ಮಾಡಿದ. ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಅವರು ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ಮೊತ್ತದ ಚೆಕ್ ನೀಡುವುದಾಗಿ ಭರವಸೆ ನೀಡಿದರು. ಅದಕ್ಕೆ ಪ್ರತಿಯಾಗಿ, ‘ಡಿಟೆಕ್ಸ್ ಚಂದ್ರು’ ಎಂಬ ಯೂಟ್ಯೂಬ್ ಚಾನೆಲ್‌ನ ಮುಂದೆ ಅವರು ಹೇಳಿಕೊಟ್ಟ ಹೇಳಿಕೆ ನೀಡುವಂತೆ ಹೇಳಿದರು. ಅದರಂತೆ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಯಿತು ಎಂದು ಅರ್ಜಿಯಲ್ಲಿ ಚಿನ್ನಯ್ಯ ತಿಳಿಸಿದ್ದಾನೆ.
ತನ್ನನ್ನು ಮುಲ್ಕಿಯ ಆಶ್ರಮಕ್ಕೆ ಕರೆದುಕೊಂಡು ಹೋದಾಗ ಚಂದ್ರಶೇಖರ ಸ್ವಾಮೀಜಿ ಬೆಂಗಳೂರಿನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರು. ನಾನು ದಾಖಲಿಸಿರುವ ದೂರು ಸ್ವೀಕರಿಸಲು ಮತ್ತು ಮಂಗಳೂರಿನ ಪೊಲೀಸ್ ಅಧೀಕ್ಷಕರ ಮೇಲೆ ಪ್ರಭಾವ ಬೀರುವಂತೆ ಬೆಂಗಳೂರಿನ ಹಿರಿಯ ಅಧಿಕಾರಿಯನ್ನು ಕೋರಿದರು. ನಂತರ, ಗಿರೀಶ್ ಮಟ್ಟಣ್ಣನವರ್, ಜಯಂತ್, ಸಮೀರ್ ಎಂ.ಡಿ. ಮತ್ತು ಯೂಟ್ಯೂಬರ್ ಅಜಯ್ ಅವರು ನನ್ನನ್ನು ಮಂಗಳೂರಿನ ಪೊಲೀಸ್ ಅಧೀಕ್ಷಕರ ಕಚೇರಿಗೆ ಕರೆದೊಯ್ಯುವುದಾಗಿ ತಿಳಿಸಿದರು.
ಇದಾದ ನಂತರ ನನ್ನನ್ನು ಮಂಗಳೂರಿನ ಕೆನರಾ ಕ್ಲಬ್ ಎಂಬ ಲಾಡ್ಜ್‌ನ ಮೊದಲ ಮಹಡಿಯ ಕೋಣೆಯಲ್ಲಿ ಇರಿಸಿದ್ದರು. ಆಗ ಮತ್ತೊಬ್ಬ ವಕೀಲರು ಅಲ್ಲಿಗೆ ಬಂದು ನನ್ನಿಂದ ಐದಾರು ಸಹಿಗಳನ್ನು ಪಡೆದರು. ಇದಾದ ಮೇಲೆ ಗಿರೀಶ್ ಮಟ್ಟಣ್ಣವರ್, ಪ್ರದೀಪ್, ಸಮೀರ್ ಎಂ.ಡಿ. ಮತ್ತು ಅಭಿಷೇಕ್ ನನ್ನನ್ನು ಬೆಂಗಳೂರಿಗೆ ಕರೆದೊಯ್ದರು. ಅಲ್ಲಿ ಹಿರಿಯ ವಕೀಲರೊಬ್ಬರು ಯಾವುದೇ ಮಾಹಿತಿ ಬಹಿರಂಗಪಡಿಸಿದರೆ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನನಗೆ ಎಚ್ಚರಿಸಿದರು ಎಂದಿದ್ದಾನೆ.
ವೀರೇಂದ್ರ ಹೆಗ್ಗಡೆ ಹೆಸರು ಹೇಳಲು ಒತ್ತಡ:
ತದನಂತರ, ಮೂರು ದಿನಗಳ ಕಾಲ ಹಿರಿಯ ವಕೀಲರ ಕಚೇರಿಯಲ್ಲಿ ನನಗೆ ತರಬೇತಿ ನೀಡಲಾಯಿತು. ಕಿರಿಯ ವಕೀಲರೊಬ್ಬರು ಬೋರ್ಡ್ ಮೇಲೆ ಬರೆದು ನ್ಯಾಯಾಂಗ ಅಧಿಕಾರಿಯ ಮುಂದೆ ನೀಡಬೇಕಾದ ಹೇಳಿಕೆಗಳ ಬಗ್ಗೆ ನನಗೆ ಮಾಹಿತಿ ನೀಡಿದರು. ನಂತರ ಹಿರಿಯ ವಕೀಲರು ತಮ್ಮ ಮಾಲೀಕತ್ವದ ಮ್ಯಾರೇಜ್ ಹಾಲ್ ಬಳಿ ಕರೆದೊಯ್ದು, ಗಿರೀಶ್ ಮಟ್ಟಣ್ಣವರ್ ಅವರಿಗೆ ಗುಂಡು ಹೊಡೆದ ರೀತಿಯಲ್ಲಿ ಅಭಿನಯಿಸುವಂತೆ ಹೇಳಿಕೊಟ್ಟು ಆ ರೀತಿ ವರ್ತಿಸುವಂತೆ ಮಾಡಿದರು ಎಂದು ಚಿನ್ನಯ್ಯ ತಿಳಿಸಿದ್ದಾನೆ.
ನಂತರ ಹಿರಿಯ ವಕೀಲರು, ಹೀಗೆ ಬಿಂಬಿಸಿದರೆ ಬೆದರಿಕೆ ಹಾಕಿದ ವ್ಯಕ್ತಿಗೆ ಶಿಕ್ಷೆ ಆಗುತ್ತದೆ, ಅದರಂತೆ ವೀರೇಂದ್ರ ಹೆಗ್ಗಡೆ ಅತ್ಯಾ೧ಚಾರ ಮಾಡಿ ಶವಗಳನ್ನು ಹೂಳಿದ್ದಾರೆ ಎಂದು ನೀನು ಹೇಳಿದರೆ ಶಿಕ್ಷೆ ವೀರೇಂದ್ರ ಹೆಗ್ಗಡೆ ಅವರಿಗೆ ಆಗುತ್ತದೆ ಎಂದು ವಿವರಿಸಿದರು. ಹಿರಿಯ ವಕೀಲರ ಕಾನೂನು ತಂಡದ ಸದಸ್ಯರು, ನ್ಯಾಯಾಲಯದ ಮುಂದೆ ಹೇಗೆ ಹೇಳಿಕೆ ನೀಡಬೇಕೆಂದು ತರಬೇತಿ ನೀಡಿದರು. ಬಳಿಕ ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ನನ್ನನ್ನು ಮಲಗುವ ಕೋಣೆಗೆ ಕರೆದೊಯ್ದು, ಮಂಚದ ಕೆಳಗಿನ ಕಪ್ಪು ಕಿಟ್ ಬ್ಯಾಗ್ ಹೊರಗೆಳೆದು, ಅದರಿಂದ ತಲೆಬುರುಡೆ ತೆಗೆದು, ನನ್ನ ಕೈಯಲ್ಲಿ ಹಿಡಿಸಿದ್ದನ್ನು ಜಯಂತ್ ವಿಡಿಯೋ ರೆಕಾರ್ಡ್ ಮಾಡಿಸಿದರು ಎಂದು ವಿವರಿಸಿದ್ದಾನೆ.
ಹಿರಿಯ ವಕೀಲರ ಸೂಚನೆಯಂತೆಯೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಬೇಕು. ಇಲ್ಲದಿದ್ದರೆ ಕೊಂದು ಅದೇ ಜಾಗದಲ್ಲಿ ಹೂಳುತ್ತೇವೆ ಎಂದು ಇದೇ ವೇಳೆ ಬೆದರಿಕೆ ಹಾಕಿದರು. ಪತ್ನಿ ಮತ್ತು ಮಕ್ಕಳನ್ನೂ ಕೊಲ್ಲುವುದಾಗಿಯೂ ಬೆದರಿಸಿದರು. ಬಳಿಕ, ಹಿರಿಯ ವಕೀಲರು ನನ್ನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದೊಯ್ದರು. ಮೊದಲಿಗೆ ಪೊಲೀಸ್ ಠಾಣೆಗೆ ಹೋಗುತ್ತಿದ್ದೇವೆ ಎಂದು ಹೇಳಿ, ನಂತರ ಧರ್ಮಸ್ಥಳ-ಕಲ್ಲೇರಿ ಮಾರ್ಗದ ಮೂಲಕ ಉಪ್ಪಿನಂಗಡಿ ಕಡೆ ಕರೆದೊಯ್ದರು. ಅಲ್ಲಿ ಒಂದು ಎಸ್ಕಾರ್ಟ್ ವಾಹನ ಬಂತು. ಅದರಲ್ಲಿ ನನ್ನನ್ನು ನ್ಯಾಯಾಂಗ ಅಧಿಕಾರಿಯ ಬಳಿ ಕರೆದೊಯ್ದರು. ಹೀಗೆ ಹೋಗುವಾಗ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಿಂದ ತಂದ ತಲೆಬುರುಡೆಯನ್ನು ತೆಗೆದುಕೊಂಡು ಹೋಗುವಂತೆ ಮಾಡಿದರು. ಅನಂತರ ನ್ಯಾಯಾಂಗ ಅಧಿಕಾರಿಯ ಮುಂದೆ ಹಾಜರಾಗಿ ನನಗೆ ಹೇಳಿಕೊಟ್ಟ ಹೇಳಿಕೆಗಳನ್ನು ನ್ಯಾಯಾಲಯಕ್ಕೆ ಹೇಳಿದೆ. ಹೀಗೆ ಹೇಳಲು ನನಗೆ ಜೀವ ಬೆದರಿಕೆಯೊಡ್ಡಲಾಗಿತ್ತು ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ.
ಬುರುಡೆ ಪಿಎಸ್‌ಐಗೆ ಹಸ್ತಾಂತರ:
ತದನಂತರ ವಕೀಲರು ನನ್ನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಗಿರೀಶ್ ಮಟ್ಟಣ್ಣವರ್ ಒದಗಿಸಿದ ತಲೆಬುರುಡೆಯನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅವರಿಗೆ ಒಪ್ಪಿಸಿದೆವು. ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರು ತಲೆಬುರುಡೆ ಒಬ್ಬ ಯುವತಿಯದ್ದು ಮತ್ತು ಬಂಗಲೆಗುಡ್ಡ ಪ್ರದೇಶದಲ್ಲಿ ಮಣ್ಣು ಅಗೆದಾಗ ದೊರೆತದ್ದು ಎಂದು ಹೇಳುವಂತೆ ನನಗೆ ಸೂಚಿಸಿದರು. ಬಳಿಕ, ನನ್ನನ್ನು ಮಂಗಳೂರಿಗೆ ಕರೆದೊಯ್ದರು. ಮಂಗಳೂರಿನ ಮಲ್ಲಿಕಟ್ಟೆಯ ಒಂದು ಲಾಡ್ಜ್‌ನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಅಧಿಕಾರಿಗಳು ನನ್ನನ್ನು ಪ್ರಶ್ನಿಸಿದರು. ಅಲ್ಲಿ ಹೇಳಿಕೆ ನೀಡಿದ ನಂತರ ಉಜಿರೆ ಕಡೆಗೆ ಹೊರಟೆವು. ಪೊಲೀಸ್ ಠಾಣೆಯಲ್ಲಿ ನಾನು ಸತ್ಯ ಹೇಳಲು ಪ್ರಯತ್ನಿಸಿದ್ದರಿಂದ ಸಿಟ್ಟಾದ ಮಹೇಶ್ ಶೆಟ್ಟಿ ತಿಮರೋಡಿ ಸಿಟ್ಟಿನಿಂದ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಆದರೆ ಗಿರೀಶ್ ಮಟ್ಟಣ್ಣವರ್ ಅವರನ್ನು ತಡೆದು ಶಾಂತಗೊಳಿಸಿ, ನನ್ನನ್ನು ಬೇರೆ ವಾಹನದಲ್ಲಿ ಕಳುಹಿಸಲು ವ್ಯವಸ್ಥೆ ಮಾಡಿದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ತಿಳಿಸಿದ್ದಾನೆ.
ತಮಿಳಲ್ಲಿ ಮಾತಾಡಿದ ಪ್ರಕಾಶ್ ರಾಜ್:
ನಂತರ ಗಿರೀಶ್ ಮಟ್ಟಣ್ಣವರ್ ನನ್ನ ಅಳಿಯ ಮತ್ತು ಭಾವಮೈದುನನ ಮಗನನ್ನು ಕರೆಸಿ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎರಡು ದಿನ ಇರಿಸಿದರು. ನಂತರ ಗಿರೀಶ್ ಮಟ್ಟಣ್ಣವರ್, ಜಯಂತ್, ಸಮೀರ್ ಎಂ.ಡಿ., ಕುಡ್ಲ ರಾಮ್ ಪೇಜ್ ಯೂಟ್ಯೂಬ್ ಚಾನೆಲ್‌ನ ಅಜಯ್ ಅಂಚನ್ ಮತ್ತು ಅಭಿಷೇಕ್ ನನ್ನನ್ನು ಕೇರಳದ ಮಡಾಯಿಕಲ್ ದೇವಸ್ಥಾನಕ್ಕೆ ಮತ್ತು ನಂತರ ಒಂದು ರೆಸಾರ್ಟ್‌ಗೆ ಕರೆದೊಯ್ದರು. ಅಲ್ಲಿ ಎರಡು ದಿನ ತಂಗಿದ್ದೆವು. ಒಂದು ರಾತ್ರಿ ಸುಮಾರು ರಾತ್ರಿ 8 ಗಂಟೆಗೆ, ಗಿರೀಶ್ ಮಟ್ಟಣ್ಣವರ್ ಅವರು ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ನನಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ತಮಿಳಿನಲ್ಲಿ ಮಾತನಾಡಿ, ಗಿರೀಶ್ ಮಟ್ಟಣ್ಣವರ್ ಹೇಳಿಕೊಟ್ಟಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಬೇಕೆಂದು ಮತ್ತು ತಾವು 29ನೇ ತಾರೀಕಿಗೆ ಬಂದು ಅಪ್ಪಿಕೊಳ್ಳುವುದಾಗಿ ಹೇಳಿದರು ಎಂದು ಉಲ್ಲೇಖಿಸಿದ್ದಾನೆ.
ಎಸ್‌ಐಟಿ ರಚನೆಯಾದಾಗ ಸಂಭ್ರಮ:
ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಕೇರಳದಲ್ಲಿ ಹಲವು ಮಹಿಳೆಯರ ಮೇಲೆ ಅತ್ಯಾ೧ಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕೇರಳ ಸರ್ಕಾರದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೋರುವ ಬಗ್ಗೆ ಚರ್ಚಿಸಿದರು. ಕರ್ನಾಟಕ ಸರ್ಕಾರ ಎಸ್‌ಐಟಿ ರಚಿಸಿದ ವಿಷಯ ತಿಳಿದ ಅವರು ಸಂಭ್ರಮಿಸಿ, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸುವ ಸಮಯ ಬಂದಿತು ಎಂದು ಹರ್ಷ ವ್ಯಕ್ತಪಡಿಸಿದರು. 2025ರ ಜು.19ರಂದು ಎಸ್‌ಐಟಿ ರಚನೆ ಮಾಡಿದ ನಂತರ ನನ್ನನ್ನು ಮಂಗಳೂರಿಗೆ ಕರೆಸಿ, ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಮಾಡಿದರು. ಕದ್ರಿಯಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಹಿರಿಯ ವಕೀಲರು ಕರೆ ಮಾಡಿ ನಾನು ನಿರೀಕ್ಷಿಸಿದ ರೀತಿಯಲ್ಲಿ ನೀನು ಹೇಳಿಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾರನೇ ದಿನ ಸರಿಯಾದ ಹೇಳಿಕೆ ನೀಡದಿದ್ದರೆ ಎಸ್‌ಐಟಿ ಅಸ್ಥಿಪಂಜರ ಅವಶೇಷಗಳ ಉತ್ಖನನ ಕೈಗೊಳ್ಳುವುದಿಲ್ಲ ಎಂದೂ ತಿಳಿಸಿದರು ಎಂದು ಅರ್ಜಿಯಲ್ಲಿ ವಿವರಿಸಿದ್ದಾನೆ.
ನಂತರ ಗಿರೀಶ್ ಮಟ್ಟೆಣ್ಣವರ್ ನನಗೆ ರಾತ್ರಿ ಸುಮಾರು 7 ಗಂಟೆಯವರೆಗೆ ನೀಡಬೇಕಾದ ಹೇಳಿಕೆಗಳ ಬಗ್ಗೆ ತರಬೇತಿ ನೀಡಿದರು. ಮಹೇಶ್ ಶೆಟ್ಟಿ ತಿಮರೋಡಿ, ನನಗೆ ದೊಡ್ಡ ಮರಗಳಿರುವ ಬಂಗಲೆಗುಡ್ಡದ ಸ್ಥಳಗಳನ್ನು ಗುರುತಿಸಿ ಅಲ್ಲಿ ಉತ್ಖನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಯೋಜನೆಯ ಬಜೆಟ್ ಸುಮಾರು 200 ಕೋಟಿ ರು. ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ 50 ಲಕ್ಷ ರು. ನೀಡುವುದಾಗಿ ಭರವಸೆ ನೀಡಿದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ಬಹಿರಂಗ ಪಡಿಸಿದ್ದಾನೆ.
ನಂತರ ಸಹಾಯಕ ಆಯುಕ್ತರು (ಎ.ಸಿ.) ಅವರು ಭೂಮಿಯ ಮೇಲ್ಮೈಯಲ್ಲಿ ಕಂಡುಬರುವ ಎಲುಬುಗಳನ್ನು ಗುರುತಿಸಿದರೆ ಯಾವುದೇ ಪ್ರಯೋಜನವಿಲ್ಲ, ನೆಲದಡಿ ಹೂಳಿದ ಅಸ್ಥಿ ಅವಶೇಷಗಳನ್ನು ಗುರುತಿಸಿದರೆ ಮಾತ್ರ ಉಪಯುಕ್ತ ಎಂದು ನನಗೆ ತಿಳಿಸಿದರು. ಒಂದು ಸಂದರ್ಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ, ಸೌಜನ್ಯಾಳ ಸಂಬಂಧಿ ಎಂದು ಹೇಳಲಾದ ಪುರಂದರ ಮತ್ತು ಬಾಬು ಗೌಡ ಬಂದು, ಹದಿಮೂರನೇ ಸ್ಥಳದಲ್ಲಿ ಉತ್ಖನನ ನಡೆಸಬೇಡ ಎಂದು ಸೂಚಿಸಿದರು. ಏಕೆಂದರೆ ಭಾರಿ ಮಳೆಯಿಂದ ಅಲ್ಲಿದ್ದ ಅವಶೇಷಗಳು ಕೊಚ್ಚಿ ಹೋಗಿರಬಹುದು ಎಂದು ತಿಳಿಸಿ ಮುಂದೆ ಇನ್ನೊಂದು ಸ್ಥಳ ತೋರಿಸುವಂತೆ ಸೂಚಿಸಿದರು ಎಂದಿದ್ದಾನೆ.
ಪತ್ನಿ ಕೊಲ್ಲುವ ಬೆದರಿಕೆ ಹಾಕಿದ್ದರು:
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಸಮೀರ್ ಎಂ.ಡಿ., ಕುಡ್ಲ ರಾಮ್ ಪೇಜ್‌ನ ಅಜಯ್ ಅಂಚನ್ ಮತ್ತು ಡಿ-ಟಾಕ್ಸ್‌ನ ದಿನೇಶ್ ಅವರು ತಾವು ಹೇಳಿದ ಜಾಗಗಳನ್ನು ಶವಗಳನ್ನು ಹೂಳಿದ ಸ್ಥಳಗಳೆಂದು ಎಸ್‌ಐಟಿ ಅಧಿಕಾರಿಗಳಿಗೆ ತೋರಿಸುವಂತೆ ನನಗೆ ಪದೇಪದೇ ಸೂಚಿಸಿದರು. ಹಾಗೆ ಮಾಡದಿದ್ದರೆ ತಮ್ಮ ಪತ್ನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಭಯ ಮತ್ತು ಒತ್ತಡಕ್ಕೆ ಒಳಗಾಗಿ ವಿವಿಧ ಸ್ಥಳಗಳನ್ನು ಪೊಲೀಸರಿಗೆ ತೋರಿಸಿದೆ. ಆದರೆ ಅಂತಹ ಸ್ಥಳಗಳಲ್ಲಿ ಯಾವುದೇ ಶವ ಅಥವಾ ಅಸ್ಥಿ ಅವಶೇಷ ಸಿಗಲಿಲ್ಲ ಎಂದು ಚಿನ್ನಯ್ಯ ವಿವರವಾಗಿ ಹೇಳಿಕೊಂಡಿದ್ದಾನೆ.
ಗೋಡೆಗೆ ನನ್ನ ತಲೆ ಚಚ್ಚಿದರು:
ನನ್ನನ್ನು ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ತಿಮರೋಡಿ ನನಗೆ ಅಶ್ಲೀಲ ಭಾಷೆಯಲ್ಲಿ ನಿಂದಿಸಿ, ತಪ್ಪು ಸ್ಥಳ ತೋರಿಸಿದ್ದೇನೆಂದು ಆರೋಪಿಸಿದರು. ಗಿರೀಶ್ ಮಟ್ಟಣ್ಣವರ್ ನನ್ನ ತಲೆಯನ್ನು ಗೋಡೆಗೆ ಚಚ್ಚಿ ಗಾಯಗೊಳಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ನನ್ನ ಬೆನ್ನ ಮೇಲೆ ಮೊಣಕಾಲೂರಿ, ನಾವು ಹೇಳಿದಂತೆ ಕೇಳದಿದ್ದರೆ ಎಲುಬು ಮುರಿಯುತ್ತೇವೆ ಎಂದು ಬೆದರಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿಯನ್ನು ಜೈಲಿಗೆ ಕಳುಹಿಸುತ್ತಾನೆ ಎಂದು ನನ್ನ ಮೇಲೆ ನಂಬಿಕೆ ಇಟ್ಟಿದ್ದರೂ ಅದು ಸಾಧ್ಯವಾಗುತ್ತಿಲ್ಲವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ನನ್ನ ವಿರುದ್ಧ ಜಾತಿ ಹೆಸರು ತೆಗೆದು ನಿಂದನೆ ಮಾಡಿದರು ಎಂದು ತಿಳಿಸಿದ್ದಾನೆ.
ಮರು ದಿನ ನಾವು ಹೇಳಿದ ಸ್ಥಳಗಳನ್ನು ತೋರಿಸುವಂತೆ ನಿರಂತರ ಒತ್ತಡ ಹೇರಿದ ಮತ್ತು ಬಲವಂತ ಮಾಡಿದ್ದಕ್ಕೆ ನಾನು ಅವರು ಸೂಚಿಸಿದ ಸ್ಥಳಗಳ ಬದಲು ಯಾವುದೇ ತಲೆಬುರುಡೆ ಅಥವಾ ಅಸ್ಥಿ ಅವಶೇಷ ಸಿಗದ ಸಮೀಪದ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ತೋರಿಸಿದೆ. ಇದರಿಂದ ಕೆರಳಿದ ತಿಮರೋಡಿ ಚಾಕು ಹಿಡಿದು ನನ್ನ ಕೊಂದು ಅದೇ ಜಾಗದಲ್ಲಿ ಹೂಳಿಬಿಡುವುದಾಗಿ ಬೆದರಿಕೆ ಹಾಕಿದರು. ಇದರಿಂದ ನನಗೆ ತೀವ್ರ ಭಯವಾಯಿತು. ನಾನು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾದೆ ಎಂದು ಹೇಳಿದ್ದಾನೆ.
ತಿಮರೋಡಿ ನನ್ನ ಮೇಲೆ ಹೇರಿದ ಸೂಚನೆಗಳನ್ನು ಪಾಲಿಸಲು ನನಗೆ ಸಾಧ್ಯವಾಗಲಿಲ್ಲ. ಧರ್ಮಸ್ಥಳದ ವಿರುದ್ಧ ಸುಳ್ಳು ಸಾಕ್ಷ್ಯ ನೀಡಲು ಆತ್ಮಸಾಕ್ಷಿ ಅನುಮತಿಸಲಿಲ್ಲ. ನಾನು ಜೀವಂತ ಇದ್ದರೆ ನನ್ನ ಸುಳ್ಳು ಸಾಕ್ಷ್ಯದಿಂದ ಧರ್ಮಸ್ಥಳದ ಧರ್ಮಾಧಿಕಾರಿಯವರಿಗೆ ಹಾನಿ ಆಗಬಹುದೆಂದು ಭಾವಿಸಿ, ಜೀವವನ್ನೇ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಗಿರೀಶ್ ಮಟ್ಟಣ್ಣವರ್ ಮತ್ತು ಅವರ ಸಹಚರರು ನನ್ನ ತಡೆದು, ತಾವು ಬಯಸಿದ ಸುಳ್ಳು ಸಾಕ್ಷ್ಯ ನೀಡಲು ಬೇರೆ ಯಾರೂ ಇಲ್ಲ ಎಂದು ಹೇಳಿ ಹಲ್ಲೆ ಮಾಡಿದರು ಎಂದು ಅರ್ಜಿಯಲ್ಲಿ ಚಿನ್ನಯ್ಯ ಹೇಳಿಕೊಂಡಿದ್ದಾನೆ.
ಇಡೀ ರಾತ್ರಿ ಪರಿಸ್ಥಿತಿಯ ಬಗ್ಗೆ ಆಲೋಚಿಸಿ, ನಾನು ಸಿಕ್ಕಿ ಬಿದ್ದಿರುವೆನು ಮತ್ತು ತಿಮರೋಡಿ ಹಾಗೂ ಮಟ್ಟಣ್ಣವರ್ ಅವರನ್ನು ನಿಯಂತ್ರಿಸುತ್ತಿರುವ ವ್ಯಕ್ತಿಗಳು ನನ್ನನ್ನು ಕೊಲ್ಲಬಹುದು. ಹಾಗಾಗಿ ಸೂಕ್ತ ಅಧಿಕಾರಿಗಳ ಮುಂದೆ ಸತ್ಯ ಬಹಿರಂಗಪಡಿಸಲು ನಿಶ್ಚಯಿಸಿದೆ. ಆ ಮೇಲೆ, ನಾನು ಎಸ್‌ಐಟಿ ಅಧಿಕಾರಿಗಳ ಮುಂದೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಕುಡ್ಲ ರಾಮ್ ಪೇಜ್‌ನ ಅಜಯ್ ಅಂಚನ್, ಸಮೀರ್ ಎಂ.ಡಿ. ಮತ್ತು ಇತರರು ಧರ್ಮಸ್ಥಳದ ವಿರುದ್ಧ ರೂಪಿಸಿದ ಷಡ್ಯಂತ್ರದ ಬಗ್ಗೆ ತಿಳಿಸಿದೆ ಎಂದಿದ್ದಾನೆ.
ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯದ ಮುಂದೆ ಧರ್ಮಸ್ಥಳ ದೇವಸ್ಥಾನ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ರಚಿಸಿದ ಷಡ್ಯಂತ್ರವನ್ನು ಹಾಗೂ ತಮ್ಮನ್ನು ಶೋಷಿಸಿ ದುರ್ಬಳಕೆ ಮಾಡಿಕೊಂಡ ರೀತಿಯನ್ನು ಬಹಿರಂಗಪಡಿಸಿದೆ. ನ್ಯಾಯಾಲಯ ನನ್ನ ವಿರುದ್ಧ ದಾಖಲಾದ ಕ್ರೈಂ ನಂಬರ್ 39/2025 (ಎಫ್ಐಆರ್) ಸಂಬಂಧ ನನ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು ಎಂದು ಚಿನ್ನಯ್ಯ ಅರ್ಜಿಯಲ್ಲಿ ತಿಳಿಸಿದ್ದಾನೆ.
ಗಾಳಿ ಮಾತು ನಂಬಬೇಡಿ
ಧರ್ಮಸ್ಥಳ ಪ್ರಕರಣದ ಕುರಿತು ನನ್ನ ಪಾತ್ರದ ಬಗ್ಗೆ ಚರ್ಚೆ ನಡೆದಿದೆ. ಇದು ಸೂಕ್ಷ್ಮ ವಿಚಾರ. ಅನುಮಾನಕ್ಕೆ ನಾನು ಉತ್ತರಿಸಲೇಬೇಕು. ಈಗ ದೂರದಲ್ಲಿದ್ದೇನೆ. 2 ದಿನದಲ್ಲಿ ಬಂದು ಉತ್ತರಿಸುವೆ. ಅಲ್ಲೀವರೆಗೆ ವದಂತಿ ನಂಬಬೇಡಿ.
- ಪ್ರಕಾಶ್ ರಾಜ್, ನಟ
ಚಿನ್ನಯ್ಯ ಯಾರೆಂದೇ ಗೊತ್ತಿಲ್ಲ
ನನ್ನ ಮೇಲೆ ಆರೋಪ ಮಾಡಿದ ಚಿನ್ನಯ್ಯ ಯಾರೆಂದೇ ನನಗೆ ಗೊತ್ತಿಲ್ಲ. ಎಸ್‌ಐಟಿ ರಚನೆ ಆದಮೇಲೆ ಬಂದ ವ್ಯಕ್ತಿ ಅವನು. ನಾನು ಅವನಿಗೆ ಹಣ ನೀಡಿಲ್ಲ. ಆತ ಆರೋಪ ಸಾಬೀತು ಮಾಡಲಿ. ನಾನೂ ಕಾನೂನು ಹೋರಾಟ ಮಾಡುವೆ,
- ರಮಾ ನಾಗರಾಜ್, ಸೌಜನ್ಯ ಪರ ಹೋರಾಟಗಾರ್ತಿ


