ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಮೂರನೇ ದಿನದ ಉತ್ಖನನದ ವೇಳೆ 6 ನೇ ಪಾಯಿಂಟ್‌ನಲ್ಲಿ ಮೂಳೆಗಳು ಪತ್ತೆಯಾಗಿವೆ. ಎಸ್‌ಐಟಿ ತಂಡವು ಪತ್ತೆಯಾದ ಮೂಳೆಗಳನ್ನು ಸಂಗ್ರಹಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
ಮಂಗಳೂರು:ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂರನೇ ದಿನ ಮಹತ್ವದ ಬೆಳವಣಿಗೆ ನಡೆದಿದೆ. ಇಂದು ಉತ್ಪನನದ ವೇಳೆ 6 ನೇ ಪಾಯಿಂಟ್ ನಲ್ಲಿ ಅವಶೇಷ ಪತ್ತೆಯಾಗಿದೆ ಎಂದು ಸುವರ್ಣನ್ಯೂಸ್ ಗೆ ಎಸ್‌ಐಟಿ ಮೂಲಗಳು ಮಾಹಿತಿ ನೀಡಿದೆ. ಶೋಧದ ವೇಳೆ ಪತ್ತೆಯಾದ ಮೂಳೆಗಳನ್ನು ಎಸ್‌ಐಟಿ ಸಂಗ್ರಹ ಮಾಡಿದೆ. 6 ನೇ ಪಾಯಿಂಟ್‌ನಲ್ಲಿ ಸಿಕ್ಕ ಅಸ್ಥಿಪಂಜರದ ಮೂಳೆಗಳನ್ನು ನಿಯಮ ಪ್ರಕಾರವಾಗಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಲಾಗುತ್ತದೆ. ಆರನೇ ಸ್ಪಾಟ್ ನಲ್ಲಿ ಒಟ್ಟು 12 ಮೂಳೆಗಳ ಅವಶೇಷಗಳು ಪತ್ತೆಯಾಗಿದೆ. ಜೊತೆಗೆ ಸ್ಥಳದಲ್ಲಿ ಪುರುಷನ ಒಳ ಉಡುಪು ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಅನಾಮಿಕ ವ್ಯಕ್ತಿ ಹೇಳಿದ ಜಾಗದಲ್ಲೇ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿದ್ದು, ಎಸ್‌ಐಟಿ ತನಿಖೆಗೆ ಮಹ್ವತದ ಸುಳಿವು ಸಿಕ್ಕಂತಾಗಿದೆ. ಇದರ ಜೊತೆಗೆ ಅರಣ್ಯ ಮತ್ತು ಕಂದಾಯ ಇಲಾಖೆ ಕೂಡ ಆರನೇ ಜಾಗದಲ್ಲಿ ನಕ್ಷೆ ಪರಿಶೀಲನೆ ನಡೆಸಿದೆ. ಇನ್ನು ಉತ್ಖನನ ನಡೆಸುವ ಸ್ಥಳದಲ್ಲಿ ನೇತ್ರಾವತಿ ನದಿ ನೀರಿನ ಒರತೆ ಇದ್ದ ಕಾರಣ, ಗುಂಡಿಯಲ್ಲಿ ನೀರು ತುಂಬಿತು. ನೀರನ್ನು ಹೊರ ತೆಗೆಯಲು ಪಂಪ್ ಸೆಟ್ ತರಿಸಿದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡರು.
ಗಂಡಸಿನ ಮೂಳೆ ಪತ್ತೆಯಾದ ಬಗ್ಗೆ ಎಸ್ಐಟಿ ಮೂಲಗಳಿಂದ ಸುವರ್ಣ ನ್ಯೂಸ್ ಗೆ ಮಾಹಿತಿ ಲಭ್ಯವಾಗಿದೆ. ಮಾಧ್ಯಮಗಳ ಕ್ಯಾಮರಾ ಕಣ್ಣಿಂದ ತಪ್ಪಿಸಲು ಘಟನಾ ಸ್ಥಳಕ್ಕೆ ಹಸಿರು ಬಣ್ಣದ ಪರದೆ ಹಾಕಿದ ಎಸ್ಐಟಿ ಟೀಂ ಸಂಪೂರ್ಣವಾಗಿ ಬಂದ್ ಮಾಡಿದೆ. ಹಿಟಾಚಿ ಬಳಸಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ಮಣ್ಣಿನಲ್ಲಿ ಮೂಳೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ತಲೆ ಬುರುಡೆಯ ಒಂದು ಅವಶೇಷವೂ ಪತ್ತೆಯಾಗಿದೆ. ಜೊತೆಗೆ ಕೆಲ ಮೂಳೆ ಅವಶೇಷಗಳು ಪತ್ತೆಯಾಗಿದ್ದು, ಎಲ್ಲವನ್ನೂ ಮುಂದಿನ ತನಿಖೆಗಾಗಿ ಸೇಫ್ ಆಗಿ ಇಡಲಾಗಿದೆ.
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ಆರನೇ ಪಾಯಿಂಟ್ ಬಳಿ ಶೋಧ ಕಾರ್ಯ ಮುಕ್ತಾಯವಾಗಿದ್ದು, ಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಪೊಲೀಸರು ಅಗತ್ಯ ಪರಿಕರಗಳನ್ನು ಸ್ಥಳಕ್ಕೆ ತೆಗೆದುಕೊಂಡು ಹೋದರು. ಅಸ್ಥಿಗಳ ಸಂಗ್ರಹಕ್ಕೆ ಬಳಸಲು ಡಬ್ಬಿ ಉಪ್ಪು ಮತ್ತು ಪ್ಲಾಸ್ಟಿಕ್ ಕವರ್‌ಗಳನ್ನು ಪೊಲೀಸರು ಬಳಸಿದ್ದಾರೆ. ಪತ್ತೆಯಾದ ಮೂಳೆಗಳನ್ನು ಎಸ್ಐಟಿ ತಂಡ ಕಾನೂನು ಪ್ರಕ್ರಿಯೆಯ ಮೂಲಕ ಸರಿಯಾಗಿ ಸಂಗ್ರಹಿಸಿ ದಾಖಲಿಸಿಕೊಂಡಿದೆ.
ಈ ಸಂದರ್ಭದಲ್ಲಿ ಎಸಿಪಿ ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಯಿತು. ಸಂಗ್ರಹಿಸಿದ ಅಸ್ಥಿಪಂಜರ, ತಲೆಬುರುಡೆ ಅವಶೇಷಗಳು ಮತ್ತು ಸ್ಥಳದ ದಾಖಲೆಗಳು ಸೇರಿ ಎಲ್ಲ ಮಾಹಿತಿಯನ್ನೂ ಸವಿವರವಾಗಿ ದಾಖಲಿಸಲಾಗಿತ್ತು. ಮಹಜರು ಪ್ರಕ್ರಿಯೆಯ ಬಳಿಕ, ಶೋಧ ನಡೆಸಿದ ಗುಂಡಿಯನ್ನು ಸಂಪೂರ್ಣ ಹುಡುಕಾಟದ ಬಳಿಕ ಹಿಟಾಚಿ ಯಂತ್ರದ ಸಹಾಯದಿಂದ ಮುಚ್ಚುವ ಕಾರ್ಯ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಇಂದಿನ ಬೆಳವಣಿಗೆಯು ಮತ್ತೊಂದು ಪ್ರಮುಖ ಹಂತವಾಗಿದೆ.
ಇಂದು ಮೂರನೇ ದಿನಕ್ಕೆ ಶೋಧ ಕಾರ್ಯ ನಡೆಯುತ್ತಿದ್ದು, ಹಿಟಾಚಿಯಲ್ಲಿ ಇಂದು ಕಾರ್ಯಾಚರಣೆ ನಡೆಸಲಾಗಿತ್ತು. ಈ ಹಿಂದೆ ಮಾನವ ಶ್ರಮವನ್ನು ಬಳಸಿಕೊಳ್ಳಲಾಗಿತ್ತು. 6 ಪಾಯಿಂಟ್ ಇಲ್ಲಿವರೆಗೆ ಮುಗಿದಿದ್ದು, ಮಿಕ್ಕಂತೆ ಇನ್ನೂ ಅನಾಮಿಕ ಗುರುತಿಸಿರುವ 7 ಪಾಯಿಂಟ್‌ಗಳನ್ನು ಅಗೆಯಲು ಬಾಕಿ ಇದೆ. 9 ಪಾಯಿಂಟ್ ನಂತರ ಖಂಡಿತ ಮೂಳೆಗಳು ಸಿಗಲಿದೆ ಎಂದು ಅನಾಮಿಕ ದೃಢ ನಿಶ್ಚಯದಿಂದ ಹೇಳಿರುವುದು ವರದಿಯಾಗಿತ್ತು. ನಿನ್ನ ಅಗೆದ 5 ಪಾಯಿಂಟ್‌ಗಳು ನದಿಗೆ ಸಮೀಪದಲ್ಲಿದ್ದು, ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 6 ನೇ ಪಾಯಿಂಟ್ ನಂತರದ ಸ್ಥಳಗಳು ನದಿಯಿಂದ ದೂರ ಇದೆ ಎನ್ನಲಾಗಿದೆ. ಇನ್ನೆಷ್ಟು ಕಳೇಬರಹ ಸಿಗಲಿದೆ ಎಂಬುದು ಸದ್ಯದ ಪ್ರಶ್ನೆ ಜೊತೆಗೆ ರಾಜ್ಯದ ಜನತೆಯ ಕುತೂಹಲ ಹೆಚ್ಚಿಸಿರುವುದಂತೂ ಸುಳ್ಳಲ್ಲ.
