ಧರ್ಮಸ್ಥಳದಲ್ಲಿ ನಡೆದ ಅನನ್ಯಾ ಭಟ್ ಕಣ್ಮರೆ ಪ್ರಕರಣದ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದಿವೆ. ಸೈಟ್ ನಂ.1 ರಲ್ಲಿ ನಡೆದ ಅಗೆತದ ವೇಳೆ ಕೆಂಪು ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದ್ದು, ತನಿಖೆಗೆ ಹೊಸ ತಿರುವು ನೀಡಿದೆ.
KNOW
ಮಂಗಳೂರು:ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಈಗ ಹೊಸ ಬೆಳವಣಿಗೆಯಾಗಿದೆ. 22 ವರ್ಷಗಳಿಂದ ಕಾಣೆಯಾಗಿರುವ ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಗಳಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪಾಯಿಂಟ್ ನಂಬರ್ .1ರಲ್ಲಿ ಅಗೆತದ ವೇಳೆ ಸುಮಾರು 2.5 ಅಡಿಗಳ ಆಳದಲ್ಲಿ ಕೆಂಪು ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅನನ್ಯಾ ಭಟ್ ಪರ ವಕೀಲರಾದ ಮಂಜುನಾಥ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪತ್ತೆಯಾದ ವಸ್ತುಗಳ ಕುರಿತು ವಿವರ ನೀಡಿದ್ದಾರೆ. “ನಾವು ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಪಾಯಿಂಟ್ ನಂಬರ್ ನಂ.1ರಲ್ಲಿ ಶೋಧಕಾರ್ಯದ ವೇಳೆ 2.5 ಅಡಿಗಳ ಆಳದಲ್ಲಿ ಕೆಂಪು ಬಟ್ಟೆಯೊಂದರ ಜೊತೆಗೆ ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.
ಪತ್ತೆಯಾದ ಎಟಿಎಂ ಕಾರ್ಡ್‌ಗಳಲ್ಲಿ ಒಂದರಲ್ಲಿ ಪುರುಷನ ಹೆಸರು, ಇನ್ನೊಂದರಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಹೆಸರು ಇದೆ ಎಂದು ಉಲ್ಲೇಖಿಸಲಾಗಿದೆ. ಈ ವಸ್ತುಗಳು ತೀವ್ರ ಶಂಕೆ ಮೂಡಿಸಿದ್ದರಿಂದ ತನಿಖಾಧಿಕಾರಿ ಡಿಐಜಿ ಅನುಚೇತ್ ಸ್ಥಳಕ್ಕೆ ಭೇಟಿ ನೀಡಿದ್ದು, ಎಸ್ಐಟಿಯ ಕ್ರಮಗಳು ಶ್ಲಾಘನೀಯವಾಗಿವೆ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಎಸ್ಐಟಿಯ ವೃತ್ತಿಪರ ಕಾರ್ಯವೈಖರಿ ಮತ್ತು ಸಮಗ್ರ ಶೋಧನಾ ಕಾರ್ಯವನ್ನು ವಕೀಲ ಮಂಜುನಾಥ್ ಶ್ಲಾಘಿಸಿದ್ದು, 10 ಅಡಿಗಳ ಆಳವರೆಗೆ ಅಗೆದು ಪ್ರಾಮಾಣಿಕ ಪರಿಶೋಧನೆ ನಡೆಸಿದ ಎಸ್ಐಟಿ ತಂಡದ ನಿರ್ಧಾರವು ಯಾವುದೇ ಸಣ್ಣದಾದರೂ ಸಾಕ್ಷ್ಯವನ್ನೂ ಕಡೆಗಣಿಸದ ಎಚ್ಚರಿಕೆಯನ್ನು ತೋರಿಸಿದೆ ಎಂದರು.
ಈ ಶೋಧ ಕಾರ್ಯವು ಭವಿಷ್ಯದ ತನಿಖೆಗೆ ಹೊಸ ದಿಕ್ಕು ನೀಡುವ ಸಾಧ್ಯತೆ ಇದ್ದು, ಎಸ್ಐಟಿಯ ಶ್ರಮ ಮತ್ತು ಗಂಭೀರತೆ ಹೊಸ ಆಶಾಭಾವನೆ ಉಂಟು ಮಾಡಿದೆ. ಉಳಿದ ಸ್ಥಳಗಳಲ್ಲಿ ನಡೆಸಲಿರುವ ಪರಿಶೀಲನೆಯು ಸಮಗ್ರ ತನಿಖೆಗೆ ಸಹಕಾರಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ವಕೀಲರು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಅನಾಮಿಕ ವ್ಯಕ್ತಿಯ ಹೇಳಿದ ನಾಲ್ಕು ಪಾಯಿಂಟ್‌ಗಳಲ್ಲಿ ಉತ್ಪನನ ಕಾರ್ಯ ನಡೆದಿತ್ತು ಈವರೆಗೆ ಯಾವುದೇ ಕಳೆಬರಹ ಪತ್ತೆಯಾಗಿಲ್ಲ.
ಯಾರು ಅನನ್ಯಾ ಭಟ್?
ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್. ಇತ್ತೀಚೆಗೆ, ಅವರ ತಾಯಿ ಸುಜಾತ ಭಟ್ ಅವರು 22 ವರ್ಷಗಳ ನಂತರ ದಕ್ಷಿಣ ಕನ್ನಡ ಎಸ್ಪಿ ಅವರ ಬಳಿ ದೂರು ನೀಡಿದ್ದರು. ಅನನ್ಯಾ ಭಟ್ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಧರ್ಮಸ್ಥಳ ದೇವಾಲಯಕ್ಕೆ ಹೋಗಿದ್ದಾಗ ಕಾಣೆಯಾಗಿದ್ದರು. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಅನನ್ಯ ಭಟ್ ತಾಯಿ ಸುಜಾತ ಭಟ್ ಅವರು ತಮ್ಮ ವಕೀಲರಾದ ಮಂಜುನಾಥ್.ಎನ್ ಜೊತೆಯಲ್ಲಿ ಜುಲೈ 15 ರಂದು ಬಂದು ಎಸ್ಪಿ ಅವರನ್ನು ಭೇಟಿಯಾಗಿ, ಮಗಳ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ನೀಡಿ ನ್ಯಾಯ ಒದಗಿಸುವಂತೆ ಕೇಳಿದ್ದರು. ಮಗಳ ಅಸ್ಥಿಪಂಜರದ ಕಳೇಬರಹ ಹುಡುಕಿಕೊಡಬೇಕು. ಡಿಎನ್ಎ ಪರೀಕ್ಷೆ ಬಳಿಕ ಕಳೇಬರವನ್ನು ನನಗೆ ನೀಡಬೇಕು ಬಳಿಕ ಹಿಂದೂ ಸಂಪ್ರದಾಯದಂತೆ ಕಾರ್ಯ ಮಾಡಿ ಮಗಳಿಗೆ ಮುಕ್ತಿ ಸಿಗುಬೇಕು. ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಯಾರ ಮೇಲೂ ದೂರು ಕೊಡುವುದಿಲ್ಲ. ನನಗೆ ಬೇರೆ ಏನೂ ಬೇಡ ಎಂದು ಮಾಧ್ಯಮಗಳಿಗೆ ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದರು. ಸುಜಾತ ಭಟ್ ಅವರಿಗೆ ಈಗ 60 ವರ್ಷಗಳಾಗಿದ್ದು, ತನ್ನ ಮಗಳ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ.
