ಚಿಕ್ಕಮಗಳೂರಿನಲ್ಲಿ ನವೆಂಬರ್ 26 ರಿಂದ ನಡೆಯಲಿರುವ ದತ್ತಜಯಂತಿ ಹಿನ್ನೆಲೆಯಲ್ಲಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಡಿಸೆಂಬರ್ 4 ರಂದು 20 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ. ಬಿಗಿ ಬಂದೋಬಸ್ತ್, ಕಟ್ಟುನಿಟ್ಟಿನ ಸೂಚನೆ
ಚಿಕ್ಕಮಗಳೂರು (ನ.23): ಕಾಫಿನಾಡಿನಲ್ಲಿ ಇದೇ ನವೆಂಬರ್ 26 ರಿಂದ ಡಿಸೆಂಬರ್ 4ರವರೆಗೆ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸಲೀಂ ಅವರು ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು, ಬಂದೋಬಸ್ತ್ ಕುರಿತು ಉನ್ನತ ಮಟ್ಟದ ಚರ್ಚೆ ನಡೆಸಿದ್ದಾರೆ. ದತ್ತಜಯಂತಿ ಬಂದೋಬಸ್ತ್ ಪರಿಶೀಲನೆಗಾಗಿ ಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು 2005ರ ನಂತರ ಕಾಫಿನಾಡಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ಸಭೆ:
ಡಿಜಿಪಿ ಸಲೀಂ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಯಲ್ಲಿ ಸುದೀರ್ಘ ಸಭೆ ನಡೆಸಿ, ಭದ್ರತಾ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು. ಈ ಬಾರಿ ಒಟ್ಟು 9 ದಿನಗಳ ಕಾಲ ಚಿಕ್ಕಮಗಳೂರು ಸೂಕ್ಷ್ಮಾತಿ ಸೂಕ್ಷ್ಮ ಜಿಲ್ಲೆಯಾಗಲಿದ್ದು, ವಿಶೇಷವಾಗಿ ಡಿಸೆಂಬರ್ 2, 3 ಮತ್ತು 4 ರಂದು ಪರಿಸ್ಥಿತಿ ಅತೀ ಸೂಕ್ಷ್ಮವಾಗಿರಲಿದೆ. ಈ ಬಾರಿ ವಿಶ್ವಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು ಬಜರಂಗದಳದ ಜೊತೆಗೆ ಶ್ರೀರಾಮಸೇನೆಯೂ ಸೇರ್ಪಡೆಗೊಂಡಿರುವುದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.
ಡಿ.4 ರಂದು 20 ಸಾವಿರ ಭಕ್ತರು ಭೇಟಿ ನೀಡುವ ನಿರೀಕ್ಷೆ:
ಡಿಸೆಂಬರ್ 4ರಂದು ಒಂದೇ ದಿನ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಚಿಕ್ಕಮಗಳೂರು ತಾಲ್ಲೂಕಿನ ದತ್ತಪೀಠಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಭದ್ರತೆ, ಪೊಲೀಸ್ ಸಿಬ್ಬಂದಿಯ ನಿಯೋಜನೆ ಮತ್ತು ಕಣ್ಗಾವಲು ವ್ಯವಸ್ಥೆ ಕುರಿತು ಡಿಜಿಪಿ ಸಲೀಂ ಅವರು ತೀವ್ರ ಚರ್ಚೆ ನಡೆಸಿ, ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ.


