ದತ್ತಜಯಂತಿ ಉತ್ಸವದ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ಜಿಲ್ಲಾಡಳಿತವು ಡಿಸೆಂಬರ್ 1 ರಿಂದ 4 ರವರೆಗೆ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು (ನ.19): ದತ್ತಜಯಂತಿ ಉತ್ಸವದ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ ಮತ್ತು ಗಾಳಿಕೆರೆ ಮಾಣಿಕ್ಯಧಾರ ಭಾಗಗಳಿಗೆ ಡಿಸೆಂಬರ್ 1 ರಿಂದ 4 ರವರೆಗೆ ಸತತ 4 ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ:

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಡಿಸೆಂಬರ್ 2, 3 ಮತ್ತು 4 ರಂದು ದತ್ತಪೀಠದಲ್ಲಿ ಭರ್ಜರಿ ದತ್ತಜಯಂತಿ ಸಂಭ್ರಮ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರ ಸುರಕ್ಷತೆ, ಸಂಚಾರ ನಿಯಂತ್ರಣ ಮತ್ತು ಉತ್ಸವದ ಸುಗಮ ನಿರ್ವಹಣೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ತಿಳಿಸಿದ್ದಾರೆ.

ಪ್ರವಾಸಿಗರೇ ಗಮನಿಸಿ:

ಡಿಸೆಂಬರ್ 5 ರ ಬೆಳಗ್ಗೆ 10 ಗಂಟೆಯ ನಂತರವೇ ಈ ಎಲ್ಲಾ ತಾಣಗಳು ಪ್ರವಾಸಿಗರಿಗೆ ಮತ್ತೆ ಮುಕ್ತವಾಗಲಿವೆ.ಈ ಅವಧಿಯಲ್ಲಿ ಯಾವುದೇ ಪ್ರವಾಸಿಗರು ಈ ಭಾಗಕ್ಕೆ ಬರುವ ಪ್ರಯತ್ನ ಮಾಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವೀಕೆಂಡ್ ಅಂತಾ ಪ್ರವಾಸಕ್ಕೆ ಬಂದರೆ ನಿರಾಸೆಯಿಂದ ವಾಪಸ್ ಹೋಗುವುದು ಪಕ್ಕ. ಪ್ರವಾಸಿಗರು ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳುವುದು ಒಳ್ಳೆಯದು.