Asianet Suvarna News Asianet Suvarna News

ED Investigation: ACB ದಾಳಿಗೆ ಒಳಗಾದವರ ಅಕ್ರಮಗಳ ವಿವರ ಸಲ್ಲಿಕೆ : ಇಲ್ಲಿದೆ ಡಿಟೇಲ್ಸ್!

*5 ‘ಕುಬೇರ’ ಅಧಿಕಾರಿಗಳಿಗೆ ಇ.ಡಿ. ಉರುಳು?
*ಅಕ್ರಮ ಆದಾಯ ಆರೋಪಿ ಅಧಿಕಾರಿಗಳಿಗೆ ಸಂಕಷ್ಟ
*ಎಸಿಬಿ ದಾಳಿಗೆ ಒಳಗಾದವರ ‘ಅಕ್ರಮಗಳ ವಿವರ’ ಸಲ್ಲಿಕೆ
*ಇದನ್ನು ಆಧರಿಸಿ ತನಿಖೆಗೆ ಇ.ಡಿ. ಸಿದ್ಧತೆ

details of the irregularities of the Corrupt officers in Karnataka was submitted to ED mnj
Author
Bengaluru, First Published Dec 4, 2021, 6:32 AM IST
  • Facebook
  • Twitter
  • Whatsapp

ಬೆಂಗಳೂರು(ಡಿ. 04): ಇತ್ತೀಚಿಗೆ ಭ್ರಷ್ಟಾಚಾರ ನಿಗ್ರಹ ದಳದ (ACB Karnataka Anti Corruption Bureau) ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಸಂಪತ್ತು ಬೆಳಕಿಗೆ ಬಂದಿದ್ದ ಐವರು ‘ಕುಬೇರ’ ಸರ್ಕಾರಿ ಅಧಿಕಾರಿಗಳಿಗೆ (Goernment Employee) ಈಗ ಜಾರಿ ನಿರ್ದೇಶನಾಲಯದ (Enforcement Directorate) ತನಿಖೆ ಸಂಕಷ್ಟಎದುರಾಗಿದೆ. ಇವರ ವಿರುದ್ಧದ ಪ್ರಕರಣಗಳ ವಿವರ ಹಾಗೂ ಜಪ್ತಿಯಾದ ದಾಖಲೆಗಳನ್ನು ಇ.ಡಿ.ಗೆ ಎಸಿಬಿ ಸಲ್ಲಿಸಿದ್ದು, ಇದನ್ನು ಆಧರಿಸಿ ಇ.ಡಿ. ಪ್ರತ್ಯೇಕ ತನಿಖೆ ಆರಂಭಿಸುವ ಸಿದ್ಧತೆ ಶುರು ಮಾಡಿದೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್‌ ಎಸ್‌.ಎಂ.ಬಿರಾದಾರ್‌, ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ, ಸಕಾಲ ಮಿಷನ್‌ ಆಡಳಿತಾಧಿಕಾರಿ ಎಲ್‌.ಸಿ.ನಾಗರಾಜ್‌, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ಮಾರ್ಟ್‌ ಸಿಟಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಸ್‌.ಲಿಂಗೇಗೌಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್‌.ಎನ್‌.ವಾಸುದೇವ್‌ ಅವರಿಗೆ ಇ.ಡಿ. ಬಿಸಿ ತಟ್ಟಿದೆ.

ಸಂಕಷ್ಟಹೇಗೆ?

ಈ ಐವರು ಅಧಿಕಾರಿಗಳ ವಿರುದ್ಧ ತಾನು ದಾಖಲಿಸಿರುವ ಎಫ್‌ಐಆರ್‌ (FIR) ಪ್ರತಿಗಳು ಹಾಗೂ ಅವರ ಆದಾಯ ಮೀರಿ ಆಸ್ತಿ ಸಂಪಾದನೆ ಸಂಬಂಧ ದಾಳಿ ಸಂದರ್ಭ ಜಪ್ತಿಯಾದ ದಾಖಲೆಗಳು ಸೇರಿದಂತೆ ಕೆಲ ಮಾಹಿತಿ ಒಳಗೊಂಡ ವರದಿಯನ್ನು ಇಡಿಗೆ ಎಸಿಬಿ ಸಲ್ಲಿಸಿದೆ. ಈ ವರದಿ ಆಧರಿಸಿ ಇ.ಡಿ. ಅಧಿಕಾರಿಗಳ ತಂಡವು, ಎರಡು ದಿನಗಳ ಹಿಂದೆ ನಗರದ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಗೆ ತೆರಳಿ ಪ್ರಕರಣದ ಕುರಿತು ಚರ್ಚಿಸಿ ಹೆಚ್ಚಿನ ವಿವರ ಪಡೆದಿದ್ದಾರೆ. ಈಗ ಕಳಂಕಿತ ಅಧಿಕಾರಿಗಳ ಮೇಲೆ ಅಕ್ರಮ ಹಣ ವರ್ಗಾವಣೆ (Money laundering) ಆರೋಪದಡಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡು ಇಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ACB Raid: 28 ಮನೆಗಳು , 16 ಸೈಟ್‌ಗಳು, 31.20 ಕೋಟಿ ಮೌಲ್ಯದ ಆಸ್ತಿ, ನಿವೃತ್ತ ಅಧಿಕಾರಿ ಅರೆಸ್ಟ್‌

ನ.24 ರಂದು ಅಕ್ರಮ ಆಸ್ತಿ ಸಂಪಾದನೆ ಶಂಕೆ ಮೇರೆಗೆ ರಾಜ್ಯದ 15 ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಅಧಿಕಾರಿಗಳ ಮನೆಯಲ್ಲಿ ಕೆಜಿ ಗಟ್ಟಲೇ ಚಿನ್ನ, ಅಗಣಿತ ನಿವೇಶನಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಸಂಪಾದನೆ ಬೆಳಕಿಗೆ ಬಂದಿತ್ತು. ಈ 15 ಮಂದಿ ಪೈಕಿ ಪ್ರಾಥಮಿಕ ಹಂತದಲ್ಲಿ ಐವರು ಅಧಿಕಾರಿಗಳ ವಿರುದ್ಧ ಇಡಿ ತನಿಖೆಗೆ ಶಿಫಾರಸು ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಇನ್ನುಳಿದವರು ಬಗ್ಗೆ ಕೂಡಾ ಇಡಿಗೆ ಮಾಹಿತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐವರ ಬಳಿ ಹಣ ಜಪ್ತಿಯೇ ಉರುಳು:

15 ಮಂದಿ ಪೈಕಿ ಐವರು ಅಧಿಕಾರಿಗಳ ಮನೆಯಲ್ಲೇ ಲಕ್ಷ ಲಕ್ಷ ಹಣ ಜಪ್ತಿಯಾಗಿದ್ದು ಅವರಿಗೆ ಇಡಿ ಉರುಳು ಸುತ್ತಿಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ. ತನ್ನ ಮನೆಯ ಡ್ರೈನೇಜ್‌ ಪೈಪ್‌ನಲ್ಲಿ ಹಣ ಅವಿತಿಟ್ಟು ಸಂಚಲನ ಮೂಡಿಸಿದ್ದ ಪಿಡಬ್ಲ್ಯುಡಿ (PWD) ಇಲಾಖೆ ಬಿರಾದಾರ್‌ ಅವರಿಗೆ ಸೇರಿದ 36 ಎಕರೆ ಕೃಷಿ ಜಮೀನು, ಎರಡು ವಾಸದ ಮನೆಗಳು, ಮೂರು ಕಾರುಗಳು ಹಾಗೂ .54.50 ಲಕ್ಷ ನಗದು ಜಪ್ತಿಯಾಗಿತ್ತು.

ಗದಗದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಮನೆಯಲ್ಲಿ 9.4 ಕೆ.ಜಿ ಚಿನ್ನ, ಎರಡು ಮನೆಗಳು, 8 ಎಕರೆ ಜಮೀನು, 3 ಕೆ.ಜಿ.ಬೆಳ್ಳಿ, ಎರಡು ಕಾರುಗಳು ಹಾಗೂ .15.4 ಲಕ್ಷ ಹಣ ಜಪ್ತಿಯಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ ಕೆ.ಎಸ್‌.ಲಿಂಗೇಗೌಡ ಅವರ ಬಳಿ ಮೂರು ನಿವೇಶನಗಳು, 10 ಲಕ್ಷ ನಗದು, 1 ಕೆ.ಜಿ ಬೆಳ್ಳಿ ಹಾಗೂ ಮನೆ ಪತ್ತೆಯಾಗಿತ್ತು.

ACB Raid: ಅಕ್ರಮವಾಗಿ 28 ಮನೆ, 16 ಸೈಟ್‌ ಗಳಿಸಿದ್ದ ಭ್ರಷ್ಟ ಅಧಿಕಾರಿ ಬಂಧನ

ಸಕಾಲ ಮಿಷನ್‌ ಆಡಳಿತಾಧಿಕಾರಿ ಎಲ್‌.ಸಿ.ನಾಗರಾಜ್‌ ಅವರ ಬಳಿ ಎರಡು ವಾಸದ ಮನೆಗಳು, 43 ಲಕ್ಷ ನಗದು, 1.76 ಕೆ.ಜಿ ಬಂಗಾರ, 7 ಕೆ.ಜಿ.ಬೆಳ್ಳಿ ಹಾಗೂ ವಾಹನಗಳು ಸಿಕ್ಕಿದ್ದವು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ವಾಸುದೇವ್‌ ಬಳಿ .15 ಲಕ್ಷ ನಗದು, 850 ಚಿನ್ನ ಹಾಗೂ ಬೆಂಗಳೂರು ಸುತ್ತಮುತ್ತ 28 ಮನೆಗಳು ಹಾಗೂ 16 ನಿವೇಶನಗಳು ಸೇರಿದಂತೆ ಅಕ್ರಮವಾಗಿ .31.20 ಕೋಟಿ ಮೌಲ್ಯದ ಆಸ್ತಿ ಸಂಪಾದನೆಯ ದಾಖಲೆಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಏನಿದು ಪ್ರಕರಣ?

*ನ.24ರಂದು 15 ಅಧಿಕಾರಿಗಳ ಮೇಲೆ 2 ದಿನ 500ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ದಾಳಿ

*ನೂರಾರು ಎಕರೆ ಜಮೀನು, 40ಕ್ಕೂ ಹೆಚ್ಚು ಸೈಟ್‌, 15 ಕೆಜಿ ಚಿನ್ನ, 1.5 ಕೋಟಿ ನಗದು ಪತ್ತೆ

*ನಿವೃತ್ತ ಅಧಿಕಾರಿಯೊಬ್ಬರ ಬಳಿಯಂತೂ ಅವರ ಆದಾಯಕ್ಕಿಂತ ಶೇ.800ಕ್ಕೂ ಹೆಚ್ಚು ಆಸ್ತಿ ಪತ್ತೆ

*ಒಂದು ಅಂದಾಜಿನ ಪ್ರಕಾರ 70 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಅಕ್ರಮ ಸಂಪತ್ತು ಪತ್ತೆ

*ಇದರ ಎಫ್‌ಐಆರ್‌, ದಾಖಲೆಗಳು ಇ.ಡಿ.ಗೆ ಸಲ್ಲಿಕೆ. ಅಕ್ರಮ ಹಣ ವರ್ಗ ಆರೋಪದಡಿ ತನಿಖೆ?

Corruption in BDA : ಭ್ರಷ್ಟರಿಗೆ ಶುರುವಾಗಿದೆ ನಡುವ : 10 ವರ್ಷಗಳ ಕೇಸ್ ತನಿಖೆ

ಯಾರಾರ‍ಯರ ಮೇಲೆ ಕಣ್ಣು?

1. ಶಾಂತಗೌಡ ಬಿರಾದಾರ್‌, ಪಿಡಬ್ಲ್ಯುಡಿ ಎಂಜಿನಿಯರ್‌, ಜೇವರ್ಗಿ

2. ಟಿ.ಎಸ್‌.ರುದ್ರೇಶಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಗದಗ

3. ಎಲ್‌.ಸಿ.ನಾಗರಾಜ್‌, ಸಕಾಲ ಮಿಷನ್‌ ಅಧಿಕಾರಿ, ಬೆಂಗಳೂರು

4. ಕೆ.ಎಸ್‌.ಲಿಂಗೇಗೌಡ, ಸ್ಮಾರ್ಟ್‌ಸಿಟಿ ಎಂಜಿನಿಯರ್‌, ಮಂಗಳೂರು

5. ವಾಸುದೇವ್‌, ನಿರ್ಮಿತಿ ಮಾಜಿ ಯೋಜನಾ ನಿರ್ದೇಶಕ, ಬೆಂ.ಗ್ರಾ.

- ಗಿರೀಶ್‌ ಮಾದೇನಹಳ್ಳಿ, ಕನ್ನಡಪ್ರಭ ವಾರ್ತೆ ಬೆಂಗಳೂರು.

Follow Us:
Download App:
  • android
  • ios