ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಫ್ರೀಜರ್‌ನಂತಾಗಿದ್ದು, ಇಂದೂ ಮಳೆ ಮುಂದುವರಿಯಲಿದೆ. ಕನ್ಯಾಕುಮಾರಿ & ಶ್ರೀಲಂಕಾ ಪ್ರದೇಶದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ.

ಬೆಂಗಳೂರು (ಡಿ.13): ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಮತ್ತೊಮ್ಮೆ ಫ್ರೀಜರ್‌ನಂಥಾಗಿದ್ದು, ಇಂದೂ ಕೂಡ ಇದೇ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಕೂಡ‌ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ಕನ್ಯಾಕುಮಾರಿ & ಶ್ರೀಲಂಕಾ ಪ್ರದೇಶದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆಯಾಗಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಬೆಂಗಳೂರಲ್ಲಿ ಇಂದು ಸಾಧಾರಣ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡು & ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ದ.ಕನ್ನಡ, ಉಡುಪಿ, ಶಿವಮೊಗ್ಗ,ಚಿಕ್ಕಮಗಳೂರು, ಹಾಸನ,ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ,ದಾವಣಗೆರೆ, ತುಮಕೂರು ಚಿಕ್ಕಬಳ್ಳಾಪುರ ಕೋಲಾರ,ರಾಮನಗರ ಜಿಲ್ಲೆಗಳ ಕೆಲ ಭಾಗಗಳಲ್ಲಿ ಸಾಧಾರಣ‌ ಮಳೆಯಾಗುವ ಸಾಧ್ಯತೆ ಇದೆ. ಡಿ.14ರಂದು ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ನಗರದಲ್ಲಿ ಹಲವೆಡೆ ಜಿಟಿ ಜಿಟಿ ಮಳೆ ಕೂಡ ಶುರುವಾಗಿದೆ. ಮಲ್ಲೇಶ್ವರಂ, ಪ್ಯಾಲೇಸ್ ಗುಟ್ಟಹಳ್ಳಿ, ಶಿವಾನಂದ ಸರ್ಕಲ್, ರಾಜಾಜಿನಗರ, ವಸಂತ ನಗರ, ವಿಧಾನಸೌಧ, ಮೆಜಸ್ಟಿಕ್ ಸೇರಿದಂತೆ ಹಲವೆಡೆ ಜಿಟಿ ಜಿಟಿ ಮಳೆ ಶುರುವಾಗಿದೆ.

ದಿಲ್ಲಿಯಲ್ಲೂ ಗೃಹಲಕ್ಷ್ಮೀ: ಆಪ್‌ ಗೆದ್ದರೆ ಮಹಿಳೆಯರಿಗೆ ಮಾಸಿಕ 2100 ರೂಪಾಯಿ ಘೋಷಣೆ!

ಕನ್ಯಾಕುಮಾರಿ ಹಾಗೂ ಶ್ರೀಲಂಕಾದಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಒಳನಾಡು ಕರಾವಳಿ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಗುರುವಾರವೇ ತಿಳಿಸಿತ್ತು. ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮಳಯಾಗಲಿದೆ ಎಂದಿತ್ತು. ಗುರುವಾರ ಮತ್ತು ಶುಕ್ರವಾರ ಹಗುರದಿಂದ ಸಾಧಾರಣ ಮಳೆ ಆಗಲಿದ್ದರೆ, ಶನಿವಾರದಿಂದ ರಾಜ್ಯದಲ್ಲಿ ಮಳೆಯ ಪ್ರಭಾವ ತಗ್ಗಲಿದೆ ಎಂದು ಹವಾಮಾನ ತಜ್ಞ ಸಿ ಎಸ್ ಪಾಟೀಲ್ ತಿಳಿಸಿದ್ದರು.

'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!

ಬೆಂಗಳೂರಿನಲ್ಲಿ ನಿನ್ನೆಯಂತೆ ಇಂದು ಮುಂಜಾನೆಯಿಂದಲೇ ಹನಿ ಹನಿ ಮಳೆ ಶುರುವಾಗಿದೆ. ಮೋಡ ಮುಸುಕಿದ ವಾತಾವರಣದಿಂದ ಸಂಪೂರ್ಣ ಕತ್ತಲು ಆವರಿಸಿದೆ. ಮಧ್ಯಾಹ್ನ ವೇಳೆಗೆ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ ಇಂದು ಮಳೆಯಾಗಬಹುದು ಎನ್ನಲಾಗಿದೆ. ನಗರದ ಕೆಲ ಭಾಗಗಳಲ್ಲಿಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಎಚ್​ಎಎಲ್‌ನಲ್ಲಿ 26.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ 25.9ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಏರ್‌ಪೋರ್ಟ್‌ನಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ಜಿಕೆವಿಕೆಯಲ್ಲಿ 25.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.