Asianet Suvarna News Asianet Suvarna News

ಕೋವಿಡ್‌ 2ನೇ ಅಲೆಯಲ್ಲಿ ಸಾವಿನ ಭೀತಿ ಕಡಿಮೆ!

 2ನೇ ಅಲೆಯಲ್ಲಿ ಸೋಂಕಿನ ಹಬ್ಬುವಿಕೆಯ ವೇಗ ಅತ್ಯಂತ ತ್ವರಿತವಾಗಿದ್ದು  ಇದರಲ್ಲಿ ಸಾವಿನ ಆತಂಕವೂ ಹೆಚ್ಚಾಗುತ್ತಿದೆ. ಆದರೂ ಒಂದು ಸಮಾಧಾನದ ಸಂಗತಿ ಇಲ್ಲಿದೆ. 

Death fear in Covid 2nd wave snr
Author
Bengaluru, First Published Apr 3, 2021, 7:39 AM IST

ವರದಿ :  ರಾಕೇಶ್‌ ಎನ್‌.ಎಸ್‌.

ಬೆಂಗಳೂರು (ಏ.03):  ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಆವರಿಸತೊಡಗಿದ್ದರೂ ತುಸು ಆತಂಕ ಕಡಿಮೆ ಮಾಡುವ ಅಂಶವೂ ಇದೆ. ಅದು- 2ನೇ ಅಲೆಯಲ್ಲಿ ಸೋಂಕಿನ ಹಬ್ಬುವಿಕೆಯ ವೇಗ ಅತ್ಯಂತ ತ್ವರಿತವಿದ್ದರೂ ಸಾವಿನ ಸಂಖ್ಯೆ ಮೊದಲಿನಷ್ಟುದಾಖಲಾಗುತ್ತಿಲ್ಲ.

ಹೌದು, ರಾಜ್ಯದಲ್ಲಿ ಮೊದಲ ಅಲೆಯ ತೀವ್ರಗೊಂಡ ಅವಧಿ (ಸೋಂಕಿನ ಪ್ರಕರಣಗಳು ಒಂದು ಸಾವಿರದಿಂದ ನಾಲ್ಕು ಸಾವಿರ ಮುಟ್ಟುವ ಅವಧಿ)ಯಲ್ಲಿ 846 ಮಂದಿ ಮೃತಪಟ್ಟಿದ್ದರು. ಎರಡನೇ ಅಲೆ ವೇಳೆ ಇದೇ ಅವಧಿಯಲ್ಲಿ ಕರೋನಾಗೆ ಬಲಿಯಾದವರ ಸಂಖ್ಯೆ 160.

ರಾಜ್ಯದಲ್ಲಿ ಮೊದಲ ಅಲೆಯ ವೇಳೆ ದೈನಂದಿನ ಸಂಖ್ಯೆ ಮೊದಲ ಬಾರಿಗೆ ಸಾವಿರ ದಾಟಿದ್ದು 2020ರ ಜೂನ್‌ 28ರಂದು. ಅಂದು 1,267 ಪ್ರಕರಣ ವರದಿಯಾಗಿತ್ತು. ಇದಾಗಿ 19 ದಿನಗಳ ನಂತರ ಜುಲೈ 16ರಂದು ದೈನಂದಿನ ಸೋಂಕಿತರ ಪ್ರಮಾಣ 4 ಸಾವಿರದ ಗಡಿ ದಾಟಿತ್ತು. ಅಷ್ಟೇ ಅಲ್ಲದೆ ಜು.16ರಂದು ಮೊದಲ ಬಾರಿ 100ಕ್ಕಿಂತ ಹೆಚ್ಚು ಸಾವು ಮೊದಲ ಬಾರಿ ದಾಖಲಾಗಿತ್ತು. ಈ 19 ದಿನಗಳ ಅವಧಿಯಲ್ಲಿ ಒಟ್ಟು 39,499 ಪ್ರಕರಣ ಬೆಳಕಿಗೆ ಬಂದಿತ್ತು. 846 ಮಂದಿ ಮರಣವನ್ನಪ್ಪಿದ್ದರು.

ಕೊರೋನಾ ತಡೆಗೆ ಈ ಜಿಲ್ಲೆಯಲ್ಲಿ 9 ದಿನಗಳ ಲಾಕ್ ಡೌನ್! .

ರಾಜ್ಯದಲ್ಲಿ ಎರಡನೇ ಅಲೆಯ ತೀವ್ರತೆ ಆರಂಭವಾದ ದಿನವನ್ನು ಮಾ.16 ಎಂದು ಗುರುತಿಸಿದರೆ (ಏಕೆಂದರೆ, ಅಂದು ದೈನಂದಿನ ಸೋಂಕುಗಳ ಸಂಖ್ಯೆ 1 ಸಾವಿರ ಮುಟ್ಟಿತ್ತು) ಅದು ತೀವ್ರತೆ ಪಡೆಯಲು (ಅಂದರೆ ನಾಲ್ಕು ಸಾವಿರ ಸಂಖ್ಯೆಯ ಗಡಿ ಮುಟ್ಟಲು) 16 ದಿನ ತೆಗೆದುಕೊಂಡಿದೆ. ಏಕೆಂದರೆ, ಮಾ.16ರಂದು 1,135 ಪ್ರಕರಣ ಬೆಳಕಿಗೆ ಬಂದಿತ್ತು. ಇದಾಗಿ 16ನೇ ದಿನಕ್ಕೆ ಅಂದರೆ ಮಾಚ್‌ರ್‍ 31ಕ್ಕೆ ದಿನದ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿತ್ತು. ಈ ಅವಧಿಯಲ್ಲಿ 35,800 ಪ್ರಕರಣ ದಾಖಲಾಗಿದ್ದು, 160 ಮಂದಿ ಮೃತರಾಗಿದ್ದಾರೆ. ಅಂದರೆ ಮೊದಲ ಅಲೆಗೆ ಹೋಲಿಸಿದರೆ ಸರಿಸುಮಾರು ಎಂಟನೇ ಒಂದರಷ್ಟುಮಾತ್ರ ಸಾವು ಎರಡನೇ ಅಲೆಯಲ್ಲಿ ವರದಿಯಾಗಿದೆ.

ಮೊದಲ ಅಲೆಯು ಪ್ರಾರಂಭಗೊಂಡಿದ್ದ ಸಂದರ್ಭದಲ್ಲಿ ಶೇ.2.14ರಷ್ಟಿದ್ದ ಮರಣ ದರ ಎರಡನೇ ಅಲೆಯ ಸಂದರ್ಭದಲ್ಲಿ ಶೇ.0.49ಕ್ಕೆ ಇಳಿದಿತ್ತು.

2ನೇ ಅಲೆಯಲ್ಲಿ ಶೀಘ್ರ ಗುಣಮುಖ:  ರಾಜ್ಯದ ಕೋವಿಡ್‌ನ ಮೊದಲ ಪ್ರಕರಣ ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ 2020ರ ಮಾಚ್‌ರ್‍ 8ರಂದು ಧೃಢ ಪಟ್ಟಿತ್ತು. ಆ ಬಳಿಕ ನಿಧಾನವಾಗಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತ ಸಾಗಿ 114 ದಿನಗಳ ಬಳಿಕ ಜೂನ್‌ 30ಕ್ಕೆ 6,282 ಸಕ್ರಿಯ ಪ್ರಕರಣ ರಾಜ್ಯದಲ್ಲಿತ್ತು. ಆ ಬಳಿಕ 15 ದಿನ (ಜುಲೈ 15ಕ್ಕೆ) ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಏರಿ 27,853ಕ್ಕೆ ತಲುಪಿತ್ತು. ಇದೀಗ ಎರಡನೇ ಅಲೆಯಲ್ಲಿ ಮಾಚ್‌ರ್‍ 6ಕ್ಕೆ 6,594 ಇದ್ದ ಸಕ್ರಿಯ ಪ್ರಕರಣ ನಾಲ್ಕು ಪಟ್ಟು ಏರಲು 25 ದಿನಗಳನ್ನು ತೆಗೆದುಕೊಂಡು ಮಾಚ್‌ರ್‍ 31ಕ್ಕೆ 28,248 ಆಗಿದೆ. ಅಂದರೆ, 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚುತ್ತಿದ್ದರೂ ಸಕ್ರಿಯ ಪ್ರಕರಣಗಳು ವಿಪರೀತ ಏರಿಕೆ ಕಾಣುತ್ತಿಲ್ಲ. ಅಂದರೆ ಸೋಂಕಿತರು ಶೀಘ್ರ ಗುಣಮುಖರಾಗುತ್ತಿದ್ದಾರೆ ಎಂದೇ ಅರ್ಥ.

ಮೊದಲ ಅಲೆ ತೀವ್ರವಾಗುವ ಮುಂಚಿತವಾಗಿ ಅಂದರೆ 2020ರ ಜೂನ್‌ 1ರವರೆಗೂ ಪ್ರತಿದಿನದ ಸೋಂಕಿತರ ಪ್ರಮಾಣ 300 ದಾಟಿರಲಿಲ್ಲ. ಜೂನ್‌ 2ರಂದು ಮೊದಲ ಬಾರಿಗೆ 388 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಜೂನ್‌ 28ಕ್ಕೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು, ದಿನದ ಪ್ರಕರಣ ಮೂರಂಕಿಯಿಂದ ನಾಲ್ಕಂಕಿಗೆ ದಾಟಲು 26 ದಿನಗಳನ್ನು ತೆಗೆದುಕೊಂಡಿತ್ತು. ಈ ಸಮಯದಲ್ಲಿ 142 ಮಂದಿ ಮರಣವನ್ನಪ್ಪಿದ್ದರು. ಅದೇ ಎರಡನೇ ಅಲೆಗೆ ಮುಂಚಿತವಾಗಿ ಮಾಚ್‌ರ್‍ 1ರಂದು 349 ಮಂದಿಯಲ್ಲಿ ಸೋಂಕು ಧೃಢಪಟ್ಟಿತ್ತು. ಅಲ್ಲಿಂದ ಕೇವಲ 16 ದಿನದಲ್ಲೇ (ಮಾಚ್‌ರ್‍ 16) ಸಾವಿರದ ಗಡಿ ದಾಟಿದೆ. ಈ ಅವಧಿಯಲ್ಲಿ 66 ಮಂದಿ ಮರಣವನ್ನಪ್ಪಿದ್ದಾರೆ.

ಕೊರೋನಾ ಅಲೆಗೆ ಬೆಂಗಳೂರೇ ಕೇಂದ್ರ!

ರಾಜ್ಯ ರಾಜಧಾನಿ ಬೆಂಗಳೂರು ರಾಜ್ಯದ ಕೊರೋನಾ ಅವಾಂತರದ ಹಾಟ್‌ಸ್ಪಾಟ್‌. ಮೊದಲ ಅಲೆಯ (ಜೂ 28ರಿಂದ ಜು.16) 39,499 ಪ್ರಕರಣದಲ್ಲಿ 22,767 (ಶೇ.57.63) ಪ್ರಕರಣ ಬೆಂಗಳೂರಿನಲ್ಲೇ ವರದಿಯಾಗಿತ್ತು. ಮೃತಪಟ್ಟಿದ್ದ 846 ಮಂದಿಯಲ್ಲಿ 449 ಮಂದಿ (ಶೇ.53) ಬೆಂಗಳೂರಿಗರಾಗಿದ್ದರು. ಇದೀಗ ಎರಡನೇ ಅಲೆಯ ಮಾರ್ಚ್ 16ರಿಂದ ಮಾ.31ರ ಅವಧಿಯಲ್ಲಿನ 35,800 ಪ್ರಕರಣದಲ್ಲಿ 21,651 ಪ್ರಕರಣ (ಶೇ.60.47) ಬೆಂಗಳೂರಲ್ಲಿ ವರದಿಯಾಗಿದೆ. ಮೃತರಾಗಿರುವ 160 ಮಂದಿಯಲ್ಲಿ 94 ಮಂದಿ (ಶೇ.58.75) ಬೆಂಗಳೂರು ನಗರ ವ್ಯಾಪ್ತಿಗೆ ಸೇರಿದವರು. ಹೊಸ ಸೋಂಕಿತರು ಮತ್ತು ಮೃತರ ಪ್ರಮಾಣದಲ್ಲಿ ಮೊದಲ ಅಲೆಗಿಂತಲೂ ಎರಡನೇ ಅಲೆಯಲ್ಲಿ ಬೆಂಗಳೂರಿನ ಪಾಲು ಹೆಚ್ಚಿದೆ.

Follow Us:
Download App:
  • android
  • ios