ಜೆಡಿಎಸ್ ಮುಖಂಡ ಟಿ ಅಸ್ಗರ್ ಅವರ ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವಿಚಾರವಾಗಿ ಈ ಹಲ್ಲೆ ನಡೆದಿದ್ದು, ಆರೋಪಿಗೆ ಆರ್ಥಿಕ ನೆರವು ನೀಡಿದ ಆರೋಪ.

ದಾವಣಗೆರೆ (ನ.22): ಜೆಡಿಎಸ್ ಮುಖಂಡ ಟಿ ಅಸ್ಗರ್ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗಿದೆ. ಪ್ರಕರಣದ ಪ್ರಮುಖ ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

​ಟಿಪ್ಪು ಜಯಂತಿಯಂದು ಹಲ್ಲೆ:

ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ ಮುಗಿಸಿ ಬರುತ್ತಿದ್ದ ಜೆಡಿಎಸ್ ಮುಖಂಡ ಟಿ ಅಸ್ಗರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅಸ್ಗರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟಿ ಅಸ್ಗರ್ ಹಾಗೂ ಖಾಲೀದ್ ಪೈಲ್ವಾನ್ ಎಂಬುವವರ ನಡುವೆ ಹಣಕಾಸಿನ ವಿಚಾರವಾಗಿ ಹಳೆಯ ವೈಷಮ್ಯವಿತ್ತು. ಇದೇ ಕಾರಣಕ್ಕೆ ಖಾಲೀದ್ ಪೈಲ್ವಾನ್ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾಂಗ್ರೆಸ್ ನಾಯಕಿ ಎಂಟ್ರಿ ಆಗಿದ್ದು ಹೇಗೆ?

ಪ್ರಕರಣದ ಪ್ರಮುಖ ಆರೋಪಿಯಾದ ಖಾಲೀದ್ ಪೈಲ್ವಾನ್ ತಲೆಮರೆಸಿಕೊಂಡಿದ್ದಾಗ, ಆತನಿಗೆ ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ್ ಸಹಾಯ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿಗೆ ಆಶ್ರಯ ಕಲ್ಪಿಸಿದ್ದು ಮಾತ್ರವಲ್ಲದೆ, ಆರ್ಥಿಕ ನೆರವು (ಹಣಕಾಸಿನ ಸಹಾಯ) ನೀಡಿದ್ದಾರೆ ಎಂಬ ಆಧಾರದ ಮೇಲೆ ಪೊಲೀಸರು ಸವಿತಾ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಯಾರು ಈ ಸವಿತಾ ಮಲ್ಲೇಶ್ ನಾಯ್ಕ್?

ಸವಿತಾ ಮಲ್ಲೇಶ್ ನಾಯ್ಕ್ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಚುನಾವಣೆ ಬಳಿಕ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಆರೋಪಿಯ ರಕ್ಷಣೆಗೆ ನಿಂತು ಜೈಲು ಪಾಲಾಗಿದ್ದಾರೆ.