Karnataka CM: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು 2028ಕ್ಕೆ ತಾವೇ ಮುಖ್ಯಮಂತ್ರಿಯಾಗಬೇಕೆಂಬ ಆಕಾಂಕ್ಷೆಯನ್ನು ಬೆಳಗಾವಿಯಲ್ಲಿ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ತಮ್ಮ ಹಿರಿತನವನ್ನು ಉಲ್ಲೇಖಿಸಿ, ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಿಲ್ಲ ಎಂದಿದ್ದರೂ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದರು.
ಬೆಳಗಾವಿ (ನ.24): ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ನೇರವಾಗಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ, 'ಯಾರು ಮುಖ್ಯಮಂತ್ರಿಯಾಗಬೇಕು?' ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಮುಖ್ಯಮಂತ್ರಿ ಆಗಬೇಕು. 2028ಕ್ಕೆ ಸಮಯ ಬರಲಿ, ಆಗೋಣ' ಎಂದು ಘೋಷಿಸುವುದರ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ನಾನು, ಅಶೋಕ್ ಇಬ್ಬರೇ ಹಿರಿಯರು:
ಇದೇ ವೇಳೆ ಬಿಜೆಪಿಯಲ್ಲಿ ತಮ್ಮ ಹಿರಿತನದ ಬಗ್ಗೆ ಮಾತನಾಡಿದ ಅವರು, 'ಬಿಜೆಪಿ ಪಕ್ಷದಲ್ಲಿ ನಾನು ಮತ್ತು ಆರ್ ಅಶೋಕ ಇಬ್ಬರೇ ಏಳು ಬಾರಿ ಶಾಸಕರಾಗಿ ಗೆದ್ದು ಬಂದಿರುವ ಹಿರಿಯರು. ಉಳಿದವರು ಎಲ್ಲರೂ ಕಿರಿಯರಿದ್ದಾರೆ. ನಾನು ಸಿಎಂ ಆಗ್ತಿನಿ ಅಂತಾ ಮಾಧ್ಯಮಗಳಿಗೆ ಹೇಳಿದ್ರೆ ಆಗುತ್ತಾ? ಎಂದು ಪ್ರಶ್ನಿಸಿದರು.
ಡಿಕೆಶಿ ಅಷ್ಟೇ ಅಲ್ಲ, ವಿಜಯೇಂದ್ರ ನಾಯಕತ್ವವನ್ನೂ ನಾನು ಒಪ್ಪೋಲ್ಲ:
ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ಕೇಳಿಬರುತ್ತಿರುವ ನಾಯಕತ್ವದ ಕುರಿತು ಸ್ಪಷ್ಟಪಡಿಸಿದ ಜಾರಕಿಹೊಳಿ ಅವರು, ಡಿಕೆಶಿ ಅಷ್ಟೇ ಅಲ್ಲ, ನಾನು ವಿಜಯೇಂದ್ರ ನಾಯಕತ್ವವನ್ನೂ ಒಪ್ಪಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಆದಾಗ್ಯೂ, ಈ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ರಾಜಕೀಯ ಕ್ರಾಂತಿ ಇಲ್ಲ:
ಬಿಜೆಪಿಯಲ್ಲಿ ರಾಜಕೀಯ ಕ್ರಾಂತಿ ಆಗುವುದಿಲ್ಲ, ಪಕ್ಷದ ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ತಾವು ಬದ್ಧವಾಗಿರುತ್ತೇವೆ ಎಂದು ಪುನರುಚ್ಚರಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂಬ ವಿಚಾರದ ಕುರಿತು ಕೇಳಿದಾಗ, 'ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದ ಶಾಸಕ ಎಂದು ಜಾರಕಿಹೊಳಿ ಜಾರಿಕೊಂಡರು.


