ವಿಜಯಪುರದಲ್ಲಿ ಹತ್ಯೆಯಾದ ಭೀಮನಗೌಡ ಬಿರಾದಾರ್ ಅವರ ಪುತ್ರನನ್ನು, ಹತ್ಯೆಯ ಆರೋಪಿಯೇ ಅಪಹರಿಸಲು ಯತ್ನಿಸಿದ್ದಾನೆ. ಬನ್ನಿ ಕೊಡುವ ನೆಪದಲ್ಲಿ ಮನೆಗೆ ಬಂದ ಆರೋಪಿ ಸುನೀಲ್, 'ನಿನ್ನಪ್ಪನಂತೆ ನಿನ್ನನ್ನೂ ಕೊಲ್ಲುತ್ತೇವೆ' ಎಂದು ಬೆದರಿಸಿ ಅಪಹರಣಕ್ಕೆ ಯತ್ನಿಸಿದ್ದು, ಕುಟುಂಬಸ್ಥರು ಮಗುವನ್ನು ರಕ್ಷಿಸಿದ್ದಾರೆ.

ವಿಜಯಪುರ (ಅ.2): ವಿಜಯಪುರ ಜಿಲ್ಲೆಯ ದೇವರನಿಂಬರಗಿ ಗ್ರಾಮದಲ್ಲಿ ಕಳೆದ ಸಪ್ಟೆಂಬರ್ 3 ರಂದು ಭೀಮಾತೀರದ ಭೀಮನಗೌಡ ಬಿರಾದಾರ್ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಸುನೀಲ್ ಎಂಬಾತ ಭೀಮನಗೌಡ ಅವರ ಪುತ್ರನನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಗ್ರಾಮದ ಹೊರವಲಯದ ತೋಟದಲ್ಲಿರುವ ಭೀಮನಗೌಡ ಅವರ ನಿವಾಸದಲ್ಲಿ ನಡೆದಿದೆ.

ಬನ್ನಿ ಕೊಡುವ ನೆಪದಲ್ಲಿ ಅಪಹರಣ ಯತ್ನ

ಸುನೀಲ್ ಎಂಬ ಯುವಕ, ಬನ್ನಿ ವಿನಿಮಯ ಮಾಡುವ ನೆಪದಲ್ಲಿ ಭೀಮನಗೌಡ ಅವರ ಮನೆಗೆ ಬಂದಿದ್ದಾನೆ. ಹಂತಕನ ಹಿನ್ನೆಲೆ ತಿಳಿಯದ ಕುಟುಂಬಸ್ಥರು, ಬನ್ನಿ ವಿನಿಮಯ ಮಾಡಿದ್ದಾರೆ. ಈ ವೇಳೆ ಭೀಮನಗೌಡ ಅವರ ಅಪ್ರಾಪ್ತ ಪುತ್ರನನ್ನು ಅಪಹರಣ ಮಾಡಲು ಯತ್ನಿಸಿದ ಸುನೀಲ್, 'ನಿನ್ನ ಅಪ್ಪನನ್ನು ನಾವೇ ಮರ್ಡರ್ ಮಾಡಿದ್ದೇವೆ, ಈಗ ನಿನ್ನನ್ನೂ ಮರ್ಡರ್ ಮಾಡುತ್ತೇವೆ' ಎಂದು ಬೆದರಿಕೆಯ ಧಾಟಿಯಲ್ಲಿ ಮಾತನಾಡಿದ್ದಾನೆ. ಆದರೆ ಭೀಮನಗೌಡ ಅವರ ಕುಟುಂಬದವರು ತಕ್ಷಣ ಎಚ್ಚೆತ್ತುಕೊಂಡು ಪುತ್ರನನ್ನ ಅಪಹರಣಕಾರನಿಂದ ರಕ್ಷಿಸಿದ್ದಾರೆ. ಘಟನೆಯ ಬಳಿಕ ಸುನೀಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: Vijayapura: ಕಲ್ಲುಗುಂಡಿನಂತಿದ್ದ ಯುವಕ ಕಾರ್‌ಗೆ ಸಿಕ್ಕು ಮುದ್ದೆಯಾಗಿದ್ದ, ಭೀಮಾತೀರದಲ್ಲಿ ಸಂಚಲನ ಮೂಡಿಸಿದ ಆಕ್ಸಿಡೆಂಟ್‌-ಮರ್ಡರ್

ಗ್ರಾಮಸ್ಥರಿಂದ ಪ್ರತಿಭಟನೆ:

ಈ ಘಟನೆಯನ್ನು ಖಂಡಿಸಿ ದೇವರನಿಂಬರಗಿ ಗ್ರಾಮಸ್ಥರು ಚಡಚಣ ಕ್ರಾಸ್ ಬಳಿ ಆಕ್ರೋಶದಿಂದ ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯ ಮೇಲೆ ಟೈರ್‌ಗಳನ್ನಿಟ್ಟು ಬೆಂಕಿ ಹಚ್ಚಿ, ಭೀಮನಗೌಡ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ:

ಘಟನೆಯ ಬಗ್ಗೆ ಮಾಹಿತಿ ಪಡೆದ ಚಡಚಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಸುನೀಲ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಈ ಹಿಂದೆ ಭೀಮನಗೌಡ ಅವರ ಹತ್ಯೆ ಪ್ರಕರಣದಲ್ಲಿ ಪ್ರಮುಖ ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.

ಇದನ್ನೂ ಓದಿ: ಹಾಡಹಗಲಲ್ಲೇ ಗುಂಡು ಹಾರಿಸಿದ ಕಿರಾತಕರು..! ಆ 2 ಗ್ಯಾಂಗ್‌ಗಳ ನಡುವಿನ ವೈಷಮ್ಯ ಎಂಥದ್ದು ಗೊತ್ತಾ..?

ಗ್ರಾಮಸ್ಥರು ಭೀಮನಗೌಡ ಅವರ ಕುಟುಂಬಕ್ಕೆ ತಕ್ಷಣದ ರಕ್ಷಣೆಯ ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಚಡಚಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆ ಮುಂದುವರಿದಿದೆ.