ಮಾಜಿ ಮುಖ್ಯಮಂತ್ರಿ  ಬೊಮ್ಮಾಯಿ ಅವರು, ಸಿದ್ದರಾಮಯ್ಯ 'ನಾನೇ ಐದು ವರ್ಷ ಮುಖ್ಯಮಂತ್ರಿ' ಎಂದು ಹೇಳಿಕೊಳ್ಳುವ ಸ್ಥಿತಿಯನ್ನು ಲೇವಡಿ ಮಾಡಿದ್ದಾರೆ. ಅವರಲ್ಲಿ 'ರೆಬಿಲಿಯನ್' ಮತ್ತು 'ಕಾಂಪ್ರಮೈಸ್' ಎಂಬ ಹೋರಾಟ ನಡೆಯುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಅವರ ಅಧಿಕಾರದ ಭವಿಷ್ಯ ಗೊತ್ತಾಗಲಿದೆ ಎಂದರು.

ಮೈಸೂರು (ನ.24): ​ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ನಾನೇ ಐದು ವರ್ಷ ಮುಖ್ಯಮಂತ್ರಿ' ಎಂದು ಪ್ರತಿದಿನ ಎದೆ ಬಡಿದುಕೊಂಡು ಹೇಳಿಕೊಳ್ಳುವ ದೈನೇಸಿ ಪರಿಸ್ಥಿತಿ ಬರಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.

ರೆಬಿಲಿಯನ್ ಸಿದ್ದರಾಮಯ್ಯ Vs ಕಾಂಪ್ರಮೈಸ್ ಸಿದ್ದರಾಮಯ್ಯ:

ಸಿದ್ದರಾಮಯ್ಯನವರ ಅಧಿಕಾರದ ಅವಧಿಯ ಕುರಿತು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಗುದ್ದಾಟದ ಬಗ್ಗೆ ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಈಗ ಸಿದ್ದರಾಮಯ್ಯನವರಲ್ಲಿ 'ರೆಬಿಲಿಯನ್ ಸಿದ್ದರಾಮಯ್ಯ' ವರ್ಸಸ್ 'ಕಾಂಪ್ರಮೈಸ್ ಸಿದ್ದರಾಮಯ್ಯ' ಎಂಬ ಹೋರಾಟ ಶುರುವಾಗಿದೆ ಎಂದು ಅಭಿಪ್ರಾಯಪಟ್ಟರು.

​ನಾವು ಕಂಡಿರುವ ಸಿದ್ದರಾಮಯ್ಯ ಯಾವಾಗಲೂ ಗಟ್ಟಿ ಗಡಸುತನದ ರಾಜಕಾರಣಿಯಾಗಿದ್ದು, ಮೂಲತಃ ಅವರು 'ರೆಬಿಲಿಯನ್' ಆಗಿದ್ದರು. ಒಂದು ವೇಳೆ ಈಗಲೂ ಅವರು ಅದೇ ರೆಬಿಲಿಯನ್ ಮನೋಭಾವದಲ್ಲಿದ್ದರೆ, ಯಾವುದೇ ಕಾರಣಕ್ಕೂ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಕಾಂಪ್ರಮೈಸ್ ಸಿದ್ದರಾಮಯ್ಯ ಆಗಿದ್ದರೆ, ಅಧಿಕಾರ ತ್ಯಾಗ ಮಾಡಬಹುದು. ಸಿದ್ದರಾಮಯ್ಯ ಅವರು ತಮ್ಮ ಗಟ್ಟಿತನವನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿದ್ದಾರೆ ಎಂಬುದು ಈ ತಿಂಗಳಿನ ಅಂತ್ಯದಲ್ಲಿ ಗೊತ್ತಾಗಲಿದೆ ಎಂದು ಬೊಮ್ಮಾಯಿ ಭವಿಷ್ಯ ನುಡಿದರು.

ಬಿಜೆಪಿ ವಿರುದ್ಧ ಕಮಿಷನ್ ಆರೋಪ ಸುಳ್ಳೆಂದು ಸಾಬೀತು:

​ಇದೇ ವೇಳೆ, ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ ಕಮಿಷನ್ ಆರೋಪಗಳು ತನಿಖಾ ವರದಿಯಿಂದ ಸುಳ್ಳು ಎಂದು ಸಾಬೀತಾಗಿದೆ. ಆದರೆ, ಈಗ ಅವರದೇ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳಲ್ಲಿ ಎಷ್ಟೆಷ್ಟು ಕಮಿಷನ್ ನಡೆಯುತ್ತಿದೆ ಎಂಬುದು ರಾಜ್ಯದ ಜನರಿಗೆಲ್ಲಾ ಗೊತ್ತಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ದಿನವೇ ಕಾಂಗ್ರೆಸ್ ಮನೆಯಲ್ಲಿ ಬಿರುಕು ಶುರುವಾಗಿದ್ದು, ಈಗ ಆ ಬಿರುಕು ಮತ್ತಷ್ಟು ಹೆಚ್ಚಾಗಿದೆ ಎಂದರು.