ದಾವಣಗೆರೆಯಲ್ಲಿ ಮಹಿಳಾ ಸಿಪಿಐ ಮತ್ತು ಪೇದೆಗಳ ಮೇಲೆ ನಡೆದ ಹಲ್ಲೆ ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ಮಹಿಳಾ ಸಿಪಿಐ ಹಾಗೂ ಪೇದೆಗಳ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದಿದೆ. ಗಾಯಾಳು ಪೊಲೀಸರ ಸ್ಥಿತಿ ಕಂಡು ಕೆರಳಿರುವ ಹರಿಹರ ಶಾಸಕ ಬಿ.ಪಿ. ಹರೀಶ್, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಾಳು ಪೇದೆಗಳ ಆರೋಗ್ಯ ವಿಚಾರಿಸಿದ ಶಾಸಕ:
ದಾವಣಗೆರೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶಾಸಕ ಬಿ.ಪಿ. ಹರೀಶ್, ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪೇದೆಗಳಾದ ಕೆಂಚಪ್ಪ ಮತ್ತು ಹರೀಶ್ ಅವರ ಆರೋಗ್ಯ ವಿಚಾರಿಸಿದರು. ಹಲ್ಲೆಯ ತೀವ್ರತೆಗೆ ಪೇದೆಗಳು ಚಳಿಜ್ವರದಿಂದ ಬಳಲುತ್ತಿರುವುದನ್ನು ಕಂಡು ಶಾಸಕರು ಕಳವಳ ವ್ಯಕ್ತಪಡಿಸಿದರು. 'ಪೊಲೀಸರಿಗೆ ಜ್ವರ ಬಂದಿದೆ ಎಂದರೆ ಆ ರೌಡಿಗಳು ಎಷ್ಟರ ಮಟ್ಟಿಗೆ ಅಟ್ಟಹಾಸ ಮೆರೆದಿರಬೇಕು?' ಎಂದು ಪ್ರಶ್ನಿಸಿದ ಅವರು, ಕರ್ತವ್ಯನಿರತ ಸಿಬ್ಬಂದಿಯ ಈ ಸ್ಥಿತಿಗೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದರು.
ಆಡಳಿತ ಪಕ್ಷದ ಗುಂಡಾಗಿರಿ ವಿರುದ್ಧ ಕಿಡಿ
ಪೊಲೀಸ್ ಇಲಾಖೆಯ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ ಶಾಸಕರು, ನಾವು ಜಿಲ್ಲಾ ಸಚಿವರ ಹಿಂಬಾಲಕರು, ಏನು ಮಾಡಿದರೂ ನಡೆಯುತ್ತದೆ ಎಂಬ ಸೊಕ್ಕು ಆರೋಪಿಗಳಲ್ಲಿದೆ ಎಂದು ನೇರವಾಗಿ ಆರೋಪಿಸಿದರು. ಮಹಿಳಾ ಅಧಿಕಾರಿಯನ್ನು ಎಳೆದಾಡಿ, ದಬ್ಬಿರುವುದು ಅಕ್ಷಮ್ಯ ಅಪರಾಧ. ಸರಿಯಾದ ಶಿಕ್ಷೆ ಆಗದ ಕಾರಣಕ್ಕೇ ಇಂದು ಪೊಲೀಸರ ಮೇಲೆ ಕೈಮಾಡುವ ಧೈರ್ಯ ಇವರಿಗೆ ಬಂದಿದೆ. ಜಿಲ್ಲಾಡಳಿತವು ದುಷ್ಟರು ಮತ್ತು ಭ್ರಷ್ಟರ ಕೈಗೆ ಸಿಲುಕಿದೆ ಎಂದು ಅವರು ಕಿಡಿಕಾರಿದರು.
ಜಿಲ್ಲೆಯಾದ್ಯಂತ ಡ್ರಗ್ಸ್, ಅಕ್ಕಿ ಹಗರಣ ಮತ್ತು ಗ್ಯಾಂಬ್ಲಿಂಗ್ ದಂಧೆ!
ದಾವಣಗೆರೆ ಜಿಲ್ಲೆಯಲ್ಲಿ ಕೇವಲ ಪೊಲೀಸರ ಮೇಲೆ ಹಲ್ಲೆಯಲ್ಲದೆ, ಡ್ರಗ್ಸ್ ಮಾಫಿಯಾ, ಅಕ್ಕಿ ಹಗರಣ ಮತ್ತು ಗ್ಯಾಂಬ್ಲಿಂಗ್ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಶಾಸಕ ಹರೀಶ್ ಮಾಹಿತಿ ನೀಡಿದರು. 'ನಾನೇ ಖುದ್ದಾಗಿ ಮಣ್ಣು ಲೂಟಿ ಮಾಡುವ ಜಾಗಕ್ಕೆ ಪೊಲೀಸರು, ಕೃಷಿ ಅಧಿಕಾರಿಗಳನ್ನು ಕರೆದುಕೊಂಡು ಹೋದರೂ ಕೇಸ್ ದಾಖಲಾಗಲಿಲ್ಲ. ಜಿಪಿಎಸ್ ಫೋಟೋಗಳನ್ನು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಹರಿಹರದ ಕುರುಬರಹಳ್ಳಿಯಲ್ಲಿ ನಡೆಯುತ್ತಿದ್ದ ಗ್ಯಾಂಬ್ಲಿಂಗ್ ಈಗ ದಾವಣಗೆರೆಗೆ ಶಿಫ್ಟ್ ಆಗಿದೆ ಎಂದು ದಂಧೆಕೋರರ ಪಟ್ಟಿಯನ್ನು ಬಿಚ್ಚಿಟ್ಟರು.
ಪೊಲೀಸರ ನೈತಿಕ ಸ್ಥೈರ್ಯಕ್ಕೆ ಧಕ್ಕೆ
ಪೊಲೀಸ್ ಇಲಾಖೆಯ ಮೇಲೆ ಮೇಲಾಧಿಕಾರಿಗಳಿಂದ 'ಆರೋಪಿಯನ್ನು ಹಿಡಿಯಬೇಡಿ' ಎಂಬ ಒತ್ತಡ ಬರುತ್ತಿದೆ ಎಂಬ ಮಾಹಿತಿ ಇದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು. 'ಪೊಲೀಸರಿಗೇ ಈ ಪಾಡಾದರೆ ಜನಸಾಮಾನ್ಯರ ಕಥೆಯೇನು? ಇದು ಖಾಕಿ ಪಡೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಎಂದ ಅವರು, ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಹಲ್ಲೆಕೋರರು ಕಲ್ಲೇಶ್ವರ ಮಿಲ್‌ನಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಇದ್ದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು.


