ದಾವಣಗೆರೆಯಲ್ಲಿ, ಕಾಂಗ್ರೆಸ್ ಮುಖಂಡನ ಪುತ್ರನಾದ ರೌಡಿಶೀಟರ್ ಹುಸೇನ್, ತನ್ನನ್ನು ಬಂಧಿಸಲು ಬಂದ ಮಹಿಳಾ ಸಿಪಿಐ ಗಾಯತ್ರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಪೊಲೀಸರ ಮೇಲಿನ ಹಲ್ಲೆ ಮತ್ತು ರಾಜಕೀಯ ಪ್ರಭಾವದ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ,
ದಾವಣಗೆರೆ(ಜ.31): ದಾವಣಗೆರೆಯಲ್ಲಿ ಖಾಕಿ ಪಡೆಯ ಮೇಲೆಯೇ ರೌಡಿಗಳು ಅಟ್ಟಹಾಸ ಮೆರೆದಿರುವ ಆಘಾತಕಾರಿ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡನ ಪುತ್ರನ ದರ್ಪಕ್ಕೆ ಮಹಿಳಾ ಪೊಲೀಸ್ ಅಧಿಕಾರಿಯೇ ನಲುಗಿಹೋಗಿದ್ದು, ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಮುಖಂಡನ ಪುತ್ರನಿಂದ ಸಿಪಿಐ ಮೇಲೆ ಹಲ್ಲೆ
ದಾವಣಗೆರೆಯ ಇಮಾಮ್ ನಗರದ ರೌಡಿಶೀಟರ್ ಹುಸೇನ್ ಎಂಬಾತನನ್ನು ಬಂಧಿಸಲು ತೆರಳಿದ್ದ ಬಡಾವಣೆ ಠಾಣೆಯ ಸಿಪಿಐ ಗಾಯತ್ರಿ ಹಾಗೂ ಸಿಬ್ಬಂದಿ ಮೇಲೆ ಭೀಕರ ಹಲ್ಲೆ ನಡೆದಿದೆ. ಕಾಂಗ್ರೆಸ್ ಮುಖಂಡ ಆಯೂಬ್ ಪೈಲ್ವಾನ್ ಪುತ್ರ ಹುಸೇನ್, ತನ್ನನ್ನು ವಶಕ್ಕೆ ಪಡೆಯಲು ಬಂದ ಮಹಿಳಾ ಅಧಿಕಾರಿಯ ಜೊತೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಸಿಪಿಐ ಗಾಯತ್ರಿ ಅವರ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು, ಅವರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಅನುಚಿತವಾಗಿ ವರ್ತಿಸಿರುವುದು. ಈ ಸರ್ಕಾರದಲ್ಲಿ ಮಹಿಳೆಯರಿ ರಕ್ಷಣೆಯಿಲ್ಲ ಎಂಬ ಆರೋಪಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ.
ಪೇದೆಗಳ ಮೇಲೆಯೇ ಹಲ್ಲೆ ಜಿಲ್ಲಾಸ್ಪತ್ರೆಗೆ ದಾಖಲಾದ ಸಿಬ್ಬಂದಿ
ಕೇವಲ ಮಹಿಳಾ ಅಧಿಕಾರಿಯಲ್ಲದೆ, ಅವರ ಜೊತೆಗಿದ್ದ ಪೊಲೀಸ್ ಪೇದೆಗಳಾದ ಕೆಂಚಪ್ಪ ಮತ್ತು ಹರೀಶ್ ಅವರ ಮೇಲೂ ಹುಸೇನ್ ಮತ್ತು ಆತನ ಗುಂಪು ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರೂ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೌಡಿಗಳನ್ನು ಹಿಡಿಯಲು ಹೋದ ಪೊಲೀಸರೇ ಆಸ್ಪತ್ರೆ ಸೇರುವಂತಾಗಿರುವುದು ದಾವಣಗೆರೆಯ ರೌಡಿಗಳ ಸೊಕ್ಕಿಗೆ ಸಾಕ್ಷಿಯಾಗಿದೆ.
ಜಗಳ ಶುರುವಾಗಿದ್ದು ಹೇಗೆ?
ಎಲ್ಲವೂ ಶುರುವಾಗಿದ್ದು ಸೋಷಿಯಲ್ ಮೀಡಿಯಾದ ಒಂದು ಕಾಮೆಂಟ್‌ನಿಂದ! ಇಮಾಮ್ ನಗರದ ಒಂದೇ ಸಮುದಾಯದ ಇಬ್ಬರು ಯುವಕರ ನಡುವೆ ಕಾಮೆಂಟ್ ವಿಚಾರಕ್ಕೆ ಶುರುವಾದ ಕಿರಿಕ್, ದೂರು-ಪ್ರತಿದೂರು ನೀಡುವ ಹಂತಕ್ಕೆ ತಲುಪಿತ್ತು. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕೋ ಲೀಗಲ್ ಕೇಸ್ (MLC) ಮಾಡಿಸಲು ಬಂದಾಗ ಎರಡೂ ಗುಂಪುಗಳು ಮತ್ತೆ ಹೊಡೆದಾಡಿಕೊಂಡಿವೆ. ಇದನ್ನು ಚದುರಿಸಲು ಹೋದ ಎಎಸ್ಐ ರಾಜಪ್ಪ ಅವರ ಮೇಲೂ ಇದೇ ಹುಸೇನ್ ಹಲ್ಲೆಗೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.
ರಾಜಕೀಯ ಶ್ರೀರಕ್ಷೆಯ ಬಲವೇ? ಕರ್ತವ್ಯ ನಿರತ ಪೊಲೀಸರ ಮೇಲೆಯೇ ಗ್ಯಾಂಗ್ ಹಲ್ಲೆ!
ರೌಡಿಶೀಟರ್ ಹುಸೇನ್ ಒಬ್ಬ ಪ್ರಭಾವಿ ಕಾಂಗ್ರೆಸ್ ಮುಖಂಡನ ಮಗನಾಗಿರುವುದು ಈ ಪ್ರಕರಣಕ್ಕೆ ಈಗ ರಾಜಕೀಯ ಬಣ್ಣವನ್ನೂ ನೀಡಿದೆ. ಎಎಸ್ಐ ಮೇಲೆ ಹಲ್ಲೆಗೆ ಮುಂದಾದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಿಪಿಐ ಗಾಯತ್ರಿ ಮತ್ತು ತಂಡದ ಮೇಲೆ ಯಾವುದೇ ಭಯವಿಲ್ಲದೆ ದಾಳಿ ನಡೆಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


