Renukaswamy Case: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಎಸ್ಐ ನಟೇಶ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿದ್ದ ಪ್ರಮುಖ ಸಾಕ್ಷಿದಾರ ಸಂದೀಪ್ ನೀಡಿರುವ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು (ಜು.02): ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಮೂವರು ಅಭಿಮಾನಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಬೆಳವಣಿಗೆ ಈಗಾಗಲೇ ಚರ್ಚೆಯಲ್ಲಿರುವ ಪ್ರಕರಣಕ್ಕೆ ಮತ್ತೊಂದು ಕಾನೂನು ಆಯಾಮವನ್ನು ಸೇರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಎಸ್ಐ ನಟೇಶ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿದ್ದ ಪ್ರಮುಖ ಸಾಕ್ಷಿದಾರ ಸಂದೀಪ್ ನೀಡಿರುವ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿ ಏನಿದೆ ಗೊತ್ತಾ?

ದೂರಿನ ಪ್ರಕಾರ, ನ್ಯಾಯಾಲಯದ ಆದೇಶದಂತೆ ವಿಚಾರಣೆಗೆ ಹಾಜರಾಗುವಂತೆ ಸಂದೀಪ್ ಅವರಿಗೆ ಕರೆ ಮಾಡಲಾಗಿತ್ತು. ಇದೇ ವೇಳೆ, ಜೂನ್ 25, 2026ರಂದು ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೋವಿಪಾಳ್ಯದ ನಿವಾಸಿ ಆಕರ್ಷ್ ಎಂಬಾತ 9164853121 ಸಂಖ್ಯೆಯಿಂದ ಹಲವು ಬಾರಿ ಕರೆ ಮಾಡಿ ಮಾತನಾಡಲು ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಕೆಲಸದಲ್ಲಿದ್ದ ಕಾರಣ ಆರಂಭದಲ್ಲಿ ಭೇಟಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರೂ, ಪದೇ ಪದೇ ಕರೆ ಬರುತ್ತಿದ್ದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಂದೀಪ್ ಕರೆ ಸ್ವೀಕರಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಬಳಿಕ ಸಮೀಪದ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಬರಲು ಹೇಳಿದ್ದರಿಂದ, ಸಂದೀಪ್ ತಮ್ಮ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಅಲ್ಲಿ ನಿಂತಿದ್ದ ಬಿಳಿ ಬಣ್ಣದ ಹ್ಯುಂಡೈ ವರ್ನಾ ಕಾರಿನ ಬಳಿ ಕರೆದೊಯ್ಯಲ್ಪಟ್ಟ ಸಂದೀಪ್ ಅವರನ್ನು ಕಾರಿನ ಹಿಂಬದಿ ಆಸನದಲ್ಲಿ ಕೂರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾರಿನಲ್ಲಿ ಚಾಲಕನ ಜೊತೆಗೆ ಮತ್ತೊಬ್ಬ ವ್ಯಕ್ತಿ ಹಾಗೂ ಹಿಂಬದಿ ಆಸನದಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದರು ಎಂದು ಹೇಳಲಾಗಿದೆ. ಈ ವೇಳೆ, ನ್ಯಾಯಾಲಯಕ್ಕೆ ಹೋದಿರಾ, ಏನಾಯಿತು ಎಂದು ಕೇಳಿದ ವ್ಯಕ್ತಿಗೆ, ಎರಡು ದಿನ ಕೋರ್ಟ್‌ಗೆ ಹೋಗಿದ್ದರೂ ತಮ್ಮ ವಿಚಾರಣೆ ನಡೆದಿಲ್ಲ ಎಂದು ಸಂದೀಪ್ ಉತ್ತರಿಸಿದ್ದಾರೆ ಎನ್ನಲಾಗಿದೆ.

ನಂತರ ಮತ್ತೊಬ್ಬ ವ್ಯಕ್ತಿಯನ್ನು ಕಾರಿನೊಳಗೆ ಕರೆಸಿಕೊಂಡು, "ನಮ್ಮ ವಕೀಲರು ನಿಮ್ಮೊಂದಿಗೆ ಮಾತನಾಡಬೇಕು" ಎಂದು ಹೇಳಿ ಮೊಬೈಲ್ ಮೂಲಕ ಕರೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೊದಲಿಗೆ ಸಾಮಾನ್ಯ ಕರೆ ಮಾಡಲಾಗಿದ್ದರೂ, ಎದುರಿನ ವ್ಯಕ್ತಿಯ ಸೂಚನೆಯಂತೆ ಬಳಿಕ ವಾಟ್ಸ್ಆ್ಯಪ್ ಕರೆ ಮಾಡಲಾಗಿದ್ದು, ಆ ಕರೆಯಲ್ಲಿ ನಾಲ್ಕು ಸಂಖ್ಯೆಗಳು ಸಂಪರ್ಕದಲ್ಲಿದ್ದವು ಎಂದು ಸಂದೀಪ್ ತಿಳಿಸಿದ್ದಾರೆ.

ಆ ಕರೆಯಲ್ಲಿ ಮಾತನಾಡಿದ ವ್ಯಕ್ತಿ, "ನೀವು ಸಾಕ್ಷಿ ಹೇಳುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ನ್ಯಾಯಾಲಯದಲ್ಲಿ ರಾಘವೇಂದ್ರ, ಅನುಕುಮಾರ್ ಹಾಗೂ ಜಗದೀಶ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿ" ಎಂದು ಸೂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, 2024ರ ಜುಲೈ 12ರಂದು ಕಾಮಾಕ್ಷಿಪಾಳ್ಯ ಪೊಲೀಸರು ಬಾರ್‌ಗೆ ಬಂದು ಸಿಸಿಟಿವಿ ದೃಶ್ಯಗಳನ್ನು ಡಿವಿಆರ್‌ನಿಂದ ಕಾಪಿ ಮಾಡಿಕೊಂಡು ಹೋಗಿದ್ದು, ಬಳಿಕ ಯಾವುದೋ ದಾಖಲೆಗಳಿಗೆ ತಮ್ಮ ಸಹಿ ಪಡೆದರು ಎಂದು ಮಾತ್ರ ನ್ಯಾಯಾಲಯದಲ್ಲಿ ಹೇಳುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಇದಕ್ಕೆ ಪ್ರತಿಯಾಗಿ, "ಪೊಲೀಸರು ಯಾವುದೇ ಹೇಳಿಕೆ ಕಳಿಸಿಲ್ಲ. ನಡೆದಿರುವ ಘಟನೆಯನ್ನಷ್ಟೇ ವಿವರಿಸಲು ಹೇಳಿದ್ದಾರೆ" ಎಂದು ತಾವು ಉತ್ತರಿಸಿದ್ದಾಗಿ ಸಂದೀಪ್ ತಿಳಿಸಿದ್ದಾರೆ. ಆದರೂ, "ನಾನು ಹೇಳಿದಂತೆ ಸಹಾಯ ಮಾಡಿ, ನಿಮಗೆ ಬೇಕಾದ ವ್ಯವಸ್ಥೆ ಮಾಡುತ್ತೇನೆ" ಎಂದು ಕರೆ ಮಾಡಿದ್ದ ವ್ಯಕ್ತಿ ಹೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯಿಂದ ತಮಗೆ ಜೀವಭಯ ಉಂಟಾಗಿದ್ದು, ಮುಂದಿನ ದಿನಗಳಲ್ಲಿಯೂ ಸಾಕ್ಷಿದಾರರಿಗೆ ಬೆದರಿಕೆ ಎದುರಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿವೆ.