ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ. ಇವು ಹುಸಿ ಬೆದರಿಕೆಗಳೆಂದು ಶಂಕಿಸಲಾಗಿದ್ದರೂ, ತನಿಖೆ ಮುಂದುವರೆದಿದೆ.

ಬೆಂಗಳೂರು: ದೇಶದ ಅತ್ಯಂತ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಬೆಂಗಳೂರಿನ ಇಸ್ರೋ (ISRO) ಕೇಂದ್ರ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಇಡೀ ಆವರಣದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಚೇರಿಯ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದ್ದು, ಯಾವುದೇ ಕ್ಷಣದಲ್ಲಾದರೂ ಬ್ಲಾಸ್ಟ್ ಮಾಡಲಾಗುವುದು ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಸ್ರೋ ಕೇಂದ್ರದಲ್ಲಿ ಹೈ ಅಲರ್ಟ್

ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಇಸ್ರೋ ಆಡಳಿತ ಮಂಡಳಿಯು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ. ಘಟನಾ ಸ್ಥಳಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ, ಸ್ಥಳೀಯ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಧಾವಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ವಿಜ್ಞಾನಿಗಳನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ಸದ್ಯ ಇಡೀ ಕಚೇರಿ ಆವರಣವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಪ್ರತಿಯೊಂದು ಮೂಲೆ ಮೂಲೆಯಲ್ಲೂ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದ್ದು, ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 1969ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನದ ಸಂಶೋಧನೆ, ಉಪಗ್ರಹಗಳ ಉಡಾವಣೆ ಮತ್ತು ಗ್ರಹಗಳ ಅನ್ವೇಷಣೆಯಲ್ಲಿ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಸ್ರೋ ಸಂಸ್ಥೆಯು ಶೂನ್ಯದಿಂದ ಆರಂಭಿಸಿ ಇಂದು ವಿಶ್ವದ ಬಲಿಷ್ಠ ಬಾಹ್ಯಾಕಾಶ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಬ್ಲಾಸ್ಟ್ ಎಚ್ಚರಿಕೆ: ಕಲಾಪದ ಮಧ್ಯೆಯೇ ಆತಂಕ

ಇತ್ತ ಕಾಫಿನಾಡು ಚಿಕ್ಕಮಗಳೂರಿನ ಹೃದಯಭಾಗದಲ್ಲಿರುವ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್ ಖಾತೆಗೆ ಭೀತಿ ಹುಟ್ಟಿಸುವ ಸಂದೇಶವೊಂದು ಬಂದಿದೆ. "ಮಧ್ಯಾಹ್ನ 1:30 ರಿಂದ 3:30 ರ ಒಳಗಾಗಿ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲಾಗುವುದು" ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಲಯದ ದೈನಂದಿನ ಕಲಾಪಗಳು ನಡೆಯುತ್ತಿದ್ದ ವೇಳೆಯಲ್ಲೇ ಈ ಮಾಹಿತಿ ಲಭ್ಯವಾಗಿದ್ದರಿಂದ ನ್ಯಾಯಾಧೀಶರು, ವಕೀಲರು ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ನೆರವಿನೊಂದಿಗೆ ಕೋರ್ಟ್ ಆವರಣದಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿದೆ.

ಮೈಸೂರು ಸೆಷನ್ಸ್ ಕೋರ್ಟ್‌ಗೆ ಮಧ್ಯರಾತ್ರಿ ಬಂದ ಮೇಲ್ 

ಸಾಂಸ್ಕೃತಿಕ ನಗರಿ ಮೈಸೂರಿನ ಚಾಮರಾಜಪುರಂನಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೂ ಸಹ ಬಾಂಬ್ ಬೆದರಿಕೆ ಬಂದಿದೆ. pavala.malli@atomicmail ಎಂಬ ಇ-ಮೇಲ್ ಐಡಿಯಿಂದ ಬೆಳಗಿನ ಜಾವ 01:59 ಗಂಟೆಗೆ ನ್ಯಾಯಾಲಯದ ಅಧಿಕೃತ ಇ-ಮೇಲ್ pdjmysuru@karnataka.gov.in ಗೆ ಈ ಬೆದರಿಕೆ ಸಂದೇಶ ರವಾನೆಯಾಗಿದೆ. ಕೋರ್ಟ್ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್‌ನಲ್ಲಿ ಬರೆಯಲಾಗಿದೆ.

ಬೆಳಗ್ಗೆ ಕಚೇರಿ ಆರಂಭದ ವೇಳೆ ಈ ಮೇಲ್ ಗಮನಿಸಿದ ನ್ಯಾಯಾಲಯದ ಸಿಬ್ಬಂದಿ ಕೂಡಲೇ ಮೈಸೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಎಸಿಪಿ ಕೆ.ಸಿ. ಪ್ರಕಾಶ್, ಇನ್ಸ್‌ಪೆಕ್ಟರ್ ಬಿ.ಎಸ್. ರವಿಶಂಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ನಗರದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಕೋರ್ಟ್ ಆವರಣದಲ್ಲಿ ಕಣ್ಗಾವಲು ಇಟ್ಟು ತಪಾಸಣೆ ಮುಂದುವರಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆಯೂ ಇದೇ ರೀತಿ ಮೈಸೂರು ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಾರ್ವಜನಿಕರಲ್ಲಿ ಮನವಿ ಮತ್ತು ಪೊಲೀಸ್ ಕ್ರಮ

ರಾಜ್ಯದ ಪ್ರಮುಖ ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸರಣಿ ಇ-ಮೇಲ್ ಬೆದರಿಕೆಗಳು ಬಂದಿರುವುದರಿಂದ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇವು ಹುಸಿ ಬಾಂಬ್ ಬೆದರಿಕೆಗಳು (Hoax Calls) ಇರಬಹುದು ಎಂದು ಶಂಕಿಸಲಾಗಿದ್ದರೂ, ರಕ್ಷಣಾ ದೃಷ್ಟಿಯಿಂದ ಯಾವುದೇ ನಿರ್ಲಕ್ಷ್ಯ ವಹಿಸದೆ ತಪಾಸಣೆ ನಡೆಸಲಾಗುತ್ತಿದೆ.