Covid Crisis: ರಾಜ್ಯದಲ್ಲಿ 15,000ಕ್ಕಿಂತ ಕೆಳಗಿಳಿದ ಕೋವಿಡ್ ಕೇಸ್..!
* ನಿರಂತರವಾಗಿ ಕುಸಿಯುತ್ತಿರುವ ಪಾಸಿಟಿವಿಟಿ ದರ
* 1.23 ಲಕ್ಷಕ್ಕೆ ಕುಸಿದ ಸಕ್ರಿಯ ಪ್ರಕರಣಗಳ ಸಂಖ್ಯೆ
* ಕಲಬುರಗಿಯಲ್ಲಿ 9 ವರ್ಷದ ಬಾಲಕ ಸಾವು
ಬೆಂಗಳೂರು(ಫೆ.05): ರಾಜ್ಯದಲ್ಲಿ(Karnataka) ಕೋವಿಡ್-19(Covid-19) ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಶುಕ್ರವಾರ 14,950 ಹೊಸ ಪ್ರಕರಣಗಳು ವರದಿಯಾಗಿದೆ. 53 ಮಂದಿ ಮೃತರಾಗಿದ್ದಾರೆ. 40,599 ಮಂದಿ ಚೇತರಿಸಿಕೊಂಡಿದ್ದಾರೆ. ಪಾಸಿಟಿವಿಟಿ ದರ(Positivity Rate) ಕೂಡ ನಿರಂತರವಾಗಿ ಕುಸಿಯುತ್ತಿದೆ. 1.36 ಲಕ್ಷ ಕೋವಿಡ್ ಪರೀಕ್ಷೆ(Covid Test) ನಡೆದಿದ್ದು ಶೇ.10.93ರ ಪಾಸಿಟಿವಿಟಿ ದರ ದಾಖಲಾಗಿದೆ. ಜನವರಿ 12 ರಂದು ಶೇ. 10.96 ಪಾಸಿಟಿವಿಟಿ ದರ ವರದಿಯಾದ ಬಳಿಕ ಮತ್ತೆ ಪಾಸಿಟಿವಿಟಿ ದರ ಶೇ.10ರ ಅಸುಪಾಸಿಗೆ ಬಂದಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 1.23 ಲಕ್ಷಕ್ಕೆ ಕುಸಿದಿದೆ. ಬೆಂಗಳೂರು(Bengaluru) ನಗರದಲ್ಲಿ ಅತಿ ಹೆಚ್ಚು 51,645 ಸಕ್ರಿಯ ಪ್ರಕರಣಗಳಿವೆ. ತುಮಕೂರು 6,223, ಮೈಸೂರು 5,724, ಧಾರವಾಡ ಜಿಲ್ಲೆಯಲ್ಲಿ 4,574 ಸಕ್ರಿಯ ಪ್ರಕರಣಗಳಿವೆ.
Covid Vaccination: ಮಕ್ಕಳ ಲಸಿಕೆಯಲ್ಲಿ ಗದಗ 100% ಸಾಧನೆ: ಡಾ.ಸುಧಾಕರ್ ಮೆಚ್ಚುಗೆ
ಶುಕ್ರವಾರ ಬೆಂಗಳೂರು ನಗರದಲ್ಲಿ 6,039, ಮೈಸೂರು 944, ತುಮಕೂರು 656 ಮತ್ತು ಹಾಸನ ಜಿಲ್ಲೆಯಲ್ಲಿ 560 ಹೊಸ ಪ್ರಕರಣ ಪತ್ತೆಯಾಗಿದೆ. ನೂರಕ್ಕಿಂತ ಕಡಿಮೆ ಪ್ರಕರಣ ಯಾದಗಿರಿ (56), ರಾಮನಗರ (65), ಚಿಕ್ಕಮಗಳೂರು (73) ಮತ್ತು ಗದಗ ಜಿಲ್ಲೆಯಲ್ಲಿ (81) ವರದಿಯಾಗಿದೆ.
ಕಲಬುರಗಿಯಲ್ಲಿ 9 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ(Death). ಬೆಂಗಳೂರು ನಗರದಲ್ಲಿ 15, ಮೈಸೂರು 10, ದಕ್ಷಿಣ ಕನ್ನಡ 4, ಬೆಳಗಾವಿ ಮತ್ತು ಶಿವಮೊಗ್ಗ ತಲಾ 3, ಉಡುಪಿ, ರಾಮನಗರ, ಕೊಪ್ಪಳ, ಕಲಬುರಗಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 2, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಹಾಸನ, ಕೋಲಾರ, ಮಂಡ್ಯ ಮತ್ತು ವಿಜಯಪುರಲ್ಲಿ ತಲಾ ಒಂದು ಸಾವು ಸಂಭವಿಸಿದೆ. ರಾಜ್ಯದಲ್ಲಿ ಒಟ್ಟು 38.75 ಲಕ್ಷ ಮಂದಿಯಲ್ಲಿ ಈವರೆಗೆ ಸೋಂಕು ದೃಢಪಟ್ಟಿದೆ. 37.13 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,250 ಮಂದಿ ಮರಣವನ್ನಪ್ಪಿದ್ದಾರೆ.
ಲಸಿಕೆ ಅಭಿಯಾನ:
ಶುಕ್ರವಾರ 2.29 ಲಕ್ಷ ಮಂದಿ ಕೋವಿಡ್ ಲಸಿಕೆ(Vaccine) ಪಡೆದುಕೊಂಡಿದ್ದಾರೆ. 22,251 ಮಂದಿ ಮೊದಲ, 1.88 ಲಕ್ಷ ಮಂದಿ ಎರಡನೇ ಮತ್ತು 18,590 ಮಂದಿ ಮುನ್ನೆಚ್ಚರಿಕಾ ಡೋಸ್ ಪಡೆದಿದ್ದಾರೆ. ಒಟ್ಟು 9.67 ಕೋಟಿ ಡೋಸ್ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ.
ಕರ್ನಾಟಕ ಸೇರಿ 34 ರಾಜ್ಯಗಳಲ್ಲಿ ಕೋವಿಡ್ ಕೇಸು ಇಳಿಕೆ
ನವದೆಹಲಿ: ಈವರೆಗೆ ದೈನಂದಿನ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದ್ದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ 34 ರಾಜ್ಯಗಳಲ್ಲಿ ಕೊರೋನಾ ವೈರಸ್ಸಿನ (Coronavirus) ತೀವ್ರತೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಅಲ್ಲದೆ ದೈನಂದಿನ ಪಾಸಿಟಿವಿಟಿ ದರವೂ ಕುಸಿತ ಕಂಡಿದೆ. ಆದರೆ ಕೇರಳ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು (Covid Cases) ದಾಖಲಾಗುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Covid Crisis: ಬೆಂಗ್ಳೂರಲ್ಲಿ ವಾರದಲ್ಲಿ 2 ಲಕ್ಷ ಮಂದಿ ಗುಣಮುಖ: 92,000 ಕ್ಕಿಳಿದ ಸಕ್ರಿಯ ಕೇಸ್
ದೇಶದ ಒಟ್ಟಾರೆ ಜಿಲ್ಲೆಗಳ ಪೈಕಿ 268 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಪರಿಣಾಮಕಾರಿ ಲಸಿಕೆ ಅಭಿಯಾನದಿಂದಾಗಿ ಕೋವಿಡ್ಗೆ ಬಲಿಯಾಗುವವರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. 3ನೇ ಅಲೆಯ ವೇಳೆ ಸರಾಸರಿ 44 ವರ್ಷದೊಳಗಿನವರು ಹೆಚ್ಚು ಬಾಧಿತರಾಗಿದ್ದಾರೆ. ಈ ಹಿಂದಿನ 2 ಅಲೆಗಳಲ್ಲಿ 55 ವಯೋಮಾನದವರು ಹೆಚ್ಚು ಬಾಧಿತರಾಗಿದ್ದರು. ಆದಾಗ್ಯೂ, ಕೋವಿಡ್ನಿಂದ ಗುಣಮುಖರಾಗಲು ಹೆಚ್ಚು ಔಷಧ ಬಳಕೆಯಾಗಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ ಎಂದು ಸರ್ಕಾರ ತಿಳಿಸಿದೆ.
ದೇಶದಲ್ಲಿ 1.72 ಲಕ್ಷ ಕೇಸ್, 1008 ಸಾವು: ದೇಶದಲ್ಲಿ ಗುರುವಾರ ಬೆಳಗ್ಗೆ 8ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 1,72 ಲಕ್ಷ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಬುಧವಾರಕ್ಕಿಂತ ಶೇ.6.8ರಷ್ಟುಹೆಚ್ಚು. ಇನ್ನು ಇದೇ ಅವಧಿಯಲ್ಲಿ ಕೇರಳದ ಹಳೆಯ ಸಾವುಗಳೂ ಸೇರಿ 1008 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.18 ಕೋಟಿಗೆ ಏರಿಕೆಯಾಗಿದೆ.