ಕೇರಳ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ಬೆಂಗ್ಳೂರಿಗಿಂತ ಹೆಚ್ಚು ಕೇಸ್‌..!

* ಸಕ್ರಿಯ ಸೋಂಕಿತರ ಸಂಖ್ಯೆ 24 ಸಾವಿರಕ್ಕೆ ಏರಿಕೆ 
* ರಾಜ್ಯದಲ್ಲಿ ಭಾನುವಾರ 1.02 ಲಕ್ಷ ಮಂದಿ ಕೋವಿಡ್‌ ಲಸಿಕೆ 
* ಬೆಂಗಳೂರು ನಗರದಲ್ಲಿ 409 ಮಂದಿಯಲ್ಲಿ ಸೋಂಕು ವರದಿ

Corona Cases More Than Bengaluru in Dakshina Kannada grg

ಬೆಂಗಳೂರು(ಆ.02): 3ನೇ ಅಲೆಯ ಭೀತಿ ನಡುವೆಯೇ ರಾಜ್ಯದಲ್ಲಿ ಕೊರೋನಾ ಏರುಗತಿ ಮುಂದುವರಿದಿದೆ. ಭಾನುವಾರ 1875 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 1502 ಮಂದಿ ಮಾತ್ರ ಗುಣವಾಗಿದ್ದಾರೆ. ಈ ನಡುವೆ, ಈವರೆಗೆ ಕೋವಿಡ್‌ನಲ್ಲಿ ನಂ.1 ಸ್ಥಾನ ಹೊಂದಿದ್ದ ಬೆಂಗಳೂರನ್ನು ದಕ್ಷಿಣ ಕನ್ನಡವು ದೈನಂದಿನ ಕೇಸಿನಲ್ಲಿ ಹಿಂದಿಕ್ಕಿದೆ. ಇನ್ನು ರಾಜ್ಯದಲ್ಲಿ 25 ಮಂದಿ ಮೃತರಾಗಿದ್ದಾರೆ. ಗುಣಮುಖರ ಸಂಖ್ಯೆ ಇಳಿಕೆ ಕಾರಣ ಸಕ್ರಿಯ ಸೋಂಕಿತರ ಸಂಖ್ಯೆ 24 ಸಾವಿರಕ್ಕೆ ಏರಿದೆ.

ಸಾಮಾನ್ಯವಾಗಿ ಈವರೆಗೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಮಂದಿಯಲ್ಲಿ ಸೋಂಕಿನ ಪ್ರಕರಣ ಕಂಡು ಬರುತ್ತಿತ್ತು, ಆದರೆ ಕೇರಳದಲ್ಲಿ ಕೋವಿಡ್‌ ಸೋಂಕಿನ ಅಬ್ಬರ ಮುಂದುವರಿಯುತ್ತಿದ್ದಂತೆ ಆ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಸೋಂಕು ಪತ್ತೆಯಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 410 ಮಂದಿಯಲ್ಲಿ ಕೋವಿಡ್‌ ಇರುವುದು ದೃಢ ಪಟ್ಟಿದ್ದರೆ ಬೆಂಗಳೂರು ನಗರದಲ್ಲಿ 409 ಮಂದಿಯಲ್ಲಿ ಸೋಂಕು ವರದಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 162, ಮೈಸೂರು 146, ಹಾಸನ ಜಿಲ್ಲೆಯಲ್ಲಿ 108 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಬಾಗಲಕೋಟೆಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. 8 ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ಬಂದಿದೆ. 16 ಜಿಲ್ಲೆಯಲ್ಲಿ ಎರಡಂಕಿಯಲ್ಲಿ ದೈನಂದಿನ ಪ್ರಕರಣಗಳಿವೆ. 1.55 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು, ರಾಜ್ಯದ ಪಾಸಿಟಿವಿಟಿ ದರ ಶೇ. 1.20 ಇದೆ. ಬೆಂಗಳೂರು ನಗರದಲ್ಲಿ 8, ದಕ್ಷಿಣ ಕನ್ನಡದಲ್ಲಿ 6, ಹಾಸನ 3, ಉತ್ತರ ಕನ್ನಡ ಮತ್ತು ಕೋಲಾರ ಜಿಲ್ಲೆಯಲ್ಲಿ ತಲಾ ಇಬ್ಬರು ಮರಣವನ್ನಪ್ಪಿದ್ದಾರೆ. 21 ಜಿಲ್ಲೆಯಲ್ಲಿ ಕೋವಿಡ್‌ ಸಾವು ವರದಿಯಾಗಿಲ್ಲ. ಮರಣ ದರ ಶೇ. 1.33 ದಾಖಲಾಗಿದೆ.

ಮಂಗಳೂರು: ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದ ಕಾಂಗ್ರೆಸ್‌ ನಾಯಕರು..!

ಗುಣಮುಖರ ಸಂಖ್ಯೆ ಇಳಿಕೆ:

ಈ ಮಧ್ಯೆ ಗುಣಮುಖರಾಗುವವರಿಗಿಂತ ಹೆಚ್ಚು ಮಂದಿ ಸೋಂಕಿತರಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,144ಕ್ಕೆ ಏರಿದೆ. ರಾಜ್ಯದಲ್ಲಿ ಈವರೆಗೆ 29 ಲಕ್ಷ ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು 28.46 ಲಕ್ಷ ಮಂದಿ ಗುಣಹೊಂದಿದ್ದಾರೆ. 36,587 ಮಂದಿ ಮರಣವನ್ನಪ್ಪಿದ್ದಾರೆ. ಈವರೆಗೆ 3.88 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

1 ಲಕ್ಷ ಮಂದಿಗೆ ಲಸಿಕೆ:

ರಾಜ್ಯದಲ್ಲಿ ಭಾನುವಾರ 1.02 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 67,325 ಮಂದಿ ಮೊದಲ ಡೋಸ್‌ ಮತ್ತು 34,795 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 3.06 ಕೋಟಿ ಡೋಸ್‌ ಲಸಿಕೆ ರಾಜ್ಯದಲ್ಲಿ ವಿತರಣೆಯಾಗಿದೆ. 2.40 ಕೋಟಿ ಮೊದಲ ಡೋಸ್‌ ಪಡೆದಿದ್ದು 65.71 ಲಕ್ಷ ಮಂದಿ ಎರಡೂ ಡೋಸ್‌ ಪಡೆದಿದ್ದು ಇವರ ಲಸೀಕಾಕರಣ ಪ್ರಕ್ರಿಯೆ ಪೂರ್ಣಗೊಂಡಿದೆ.

ಭಾನುವಾರ ಆರೋಗ್ಯ ಕಾರ್ಯಕರ್ತರು 109 ಮಂದಿ, ಮುಂಚೂಣಿ ಕಾರ್ಯಕರ್ತರು 735 ಮಂದಿ, 18 ರಿಂದ 44 ವರ್ಷದೊಳಗಿನ 54,040 ಮಂದಿ, 45 ವರ್ಷ ಮೇಲ್ಪಟ್ಟ 12,441 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು 492 ಮಂದಿ, ಮುಂಚೂಣಿ ಕಾರ್ಯಕರ್ತರು 1,809 ಮಂದಿ, 18 ರಿಂದ 44 ವರ್ಷದೊಳಗಿನ 12,441 ಮಂದಿ, 45 ವರ್ಷ ಮೇಲ್ಪಟ್ಟ 19,861 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ.
 

Latest Videos
Follow Us:
Download App:
  • android
  • ios