ಮಂಗಳೂರು: ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದ ಕಾಂಗ್ರೆಸ್ ನಾಯಕರು..!
* ಮಂಗಳೂರಲ್ಲಿ ನಡೆದ ಹಿಂದುಳಿದ ವರ್ಗಗಳ ಪದಗ್ರಹಣ ಸಮಾರಂಭ
* ಕೋವಿಡ್ ನಿಯಮ ಉಲ್ಲಂಘಿಸಿದ ಕಾಂಗ್ರೆಸ್
* ಕಾರ್ಯಕ್ರಮದಲ್ಲಿ ಹರಿಪ್ರಸಾದ್, ಐವನ್ ಡಿಸೋಜಾ, ಮೊಯಿದ್ದೀನ್ ಬಾವಾ ಸೇರಿ ಹಲವರು ಭಾಗಿ
ಮಂಗಳೂರು(ಆ.01): ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ರಾಜಕೀಯ ಸಮಾರಂಭ ನಡೆಸದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ, ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿದ ಕಾಂಗ್ರೆಸ್ ಪಕ್ಷ ಭರ್ಜರಿ ರಾಜಕೀಯ ಸಮಾರಂಭವೊಂದನ್ನ ಮಾಡುವ ಮೂಲಕ ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿದೆ.
ರಾಜಕೀಯ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದರೂ ಕ್ಯಾರೇ ಅನ್ನದೇ ಇಂದು(ಭಾನುವಾರ) ಮಂಗಳೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಪದಗ್ರಹಣ ಸಮಾರಂಭ ನಡೆದಿದೆ. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಸೇರಿದ್ದಾರೆ.
ಮಂಗಳೂರು-ಕಾಸರಗೋಡು ಬಸ್ ಸಂಚಾರ ಸ್ಥಗಿತ: ದ.ಕ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ
ಈ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಕೆ.ಹರಿಪ್ರಸಾದ್, ಐವನ್ ಡಿಸೋಜಾ, ಮೊಯಿದ್ದೀನ್ ಬಾವಾ ಸೇರಿ ಹಲವರು ಭಾಗಿಯಾಗಿದ್ದಾರೆ. ವೇದಿಕೆಯಲ್ಲೇ ಸಾಮಾಜಿಕ ಅಂತರವಿಲ್ಲದೇ ಹತ್ತಾರು ನಾಯಕರು ಸೇರಿದ್ದಾರೆ. ಸರಿಯಾಗಿ ಮಾಸ್ಕ್ ಕೂಡ ಧರಿಸದೇ ಕಾಂಗ್ರೆಸ್ ಕಚೇರಿಯಲ್ಲಿ ಜನಜಾತ್ರೆಯೇ ನಡೆದಿದೆ.
ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರಾಜಕೀಯ ಕಾರ್ಯಕ್ರಮಗಳನ್ನ ನಿಷೇಧಿಸಿದ್ದಾರೆ. ಆದರೆ ಡಿಸಿ ಆದೇಶ ಉಲ್ಲಂಘಿಸಿ ಕೈ ನಾಯಕರು ಅದ್ಧೂರಿಯಾಗಿ ಸಮಾವೇಶವನ್ನ ನಡೆಸಿದ್ದಾರೆ.