Asianet Suvarna News Asianet Suvarna News

ನಕಲಿ ಥೆರಪಿಸ್ಟ್‌ಗಳನ್ನು ನಿಯಂತ್ರಿಸಿ: ಹೈಕೋರ್ಟ್‌

ಟ್ವೀಟರ್‌, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ತಾಲತಾಣಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ನಕಲಿ ಥೆರಪಿಸ್ಟ್‌ಗಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಹೈಕೋರ್ಟ್‌ ಸಲಹೆ ನೀಡಿದೆ. 

Control Fake Therapists says Karnataka High Court gvd
Author
First Published Oct 6, 2022, 8:56 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು (ಅ.06): ಟ್ವೀಟರ್‌, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ತಾಲತಾಣಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ನಕಲಿ ಥೆರಪಿಸ್ಟ್‌ಗಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಹೈಕೋರ್ಟ್‌ ಸಲಹೆ ನೀಡಿದೆ. ಅರ್ಹತೆ ಹೊಂದಿರದಿದ್ದರೂ ವ್ಯಕ್ತಿಯೊಬ್ಬರಿಗೆ ಇನ್‌ಸ್ಟಾಗ್ರಾಂ ಪೇಜ್‌ ಮೂಲಕ ಮಾನಸಿಕ ಒತ್ತಡ ನಿವಾರಣೆಗೆ ಥೆರಪಿ ತರಗತಿ ನಡೆಸಿ 3.15 ಲಕ್ಷ ರು. ಪಡೆದು ವಂಚಿಸಿದ ಆರೋಪ ಸಂಬಂಧ ಮಹಿಳೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸರ್ಕಾರಕ್ಕೆ ಈ ಸಲಹೆ ನೀಡಿದೆ.

3.15 ಲಕ್ಷ ರು.ವಂಚನೆ: ಬೆಂಗಳೂರಿನ ಐಟಿ ಉದ್ಯೋಗಿ ಪಿ.ಜೆ. ಶಂಕರ್‌ ಗಣೇಶ್‌ ಮತ್ತು ಸಂಜನಾ ಫರ್ನಾಂಡಿಸ್‌ ಅಲಿಯಾಸ್‌ ರವೀರಾ, ಡೇಟಿಂಗ್‌ ಆ್ಯಪ್‌ ‘ಟಿಂಡರ್‌’ ಮೂಲಕ ಪರಿಚಯವಾಗಿ ಚಾಟಿಂಗ್‌ ಮಾಡುತ್ತಿದ್ದರು. ಒಂದು ದಿನ ಚಾಟಿಂಗ್‌ ಮಾಡುವ ವೇಳೆ ತಾನೂ ಸಂಪೂರ್ಣವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಶಂಕರ್‌ ತಿಳಿಸಿದ್ದರು. ಈ ವೇಳೆ ತಾನು ‘ವೆಲ್‌ನೆಸ್‌ ಥೆರಪಿಸ್ಟ್‌’ ಆಗಿದ್ದು, ಇನ್‌ಸ್ಟಗ್ರಾಂನ ‘ಪಾಸಿವಿಟಿ-ಫಾರ್‌-360-ಲೈಫ್‌’ ಪೇಜ್‌ನನ್ನು ಪ್ರತಿನಿಧಿಸುತ್ತೇನೆ. ಮಾನಸಿಕ ಒತ್ತಡ ನಿವಾರಣೆಗೆ ತರಗತಿ ನಡೆಸುತ್ತೇನೆ ಎಂದು ಸಂಜನಾ ತಿಳಿಸಿದ್ದರು.

11 ವರ್ಷದ ನಂತರ ಗುರುತು ಪತ್ತೆ ಪರೇಡ್‌ಗೆ ಹೈಕೋರ್ಟ್‌ ಆಕ್ಷೇಪ

ಅದಕ್ಕೆ ಒಪ್ಪಿದ್ದ ಶಂಕರ್‌ ಇನ್‌ಸ್ಟಾಗ್ರಾಂ ಹಲವು ತರಗತಿಗಳಿಗೆ ಹಾಜರಾಗಿ ಒಟ್ಟು 3.15 ಲಕ್ಷ ಹಣ ವರ್ಗಾಯಿಸಿದ್ದರು. ಈ ಮಧ್ಯೆ ಸಂಜನಾ ಅವರನ್ನು ಭೇಟಿ ಮಾಡಲು ಆಸಕ್ತಿ ತೋರಿಸಿದ್ದ ಶಂಕರ್‌, ಅಶ್ಲೀಲ ಸಂದೇಶ ಕಳುಹಿಸಿದ್ದರು. ಹಾಗಾಗಿ ಆತನ ಇನ್‌ಸ್ಟಾಗ್ರಾಂ ಖಾತೆಯನ್ನು ಸಂಜನಾ ಬ್ಲಾಕ್‌ ಮಾಡಿದ್ದರು.

ನಂತರ ಸಂಜನಾ ಅವರ ಥೆರಪಿ ಸತ್ಯಾಸತ್ಯತೆ ಪರಿಶೀಲಿಸಿದಾಗ ಅಕೆ ವಿವಿಧ ಸಾಮಾಜಿಕ ಜಾಣದಲ್ಲಿ ಇದೇ ಮಾದರಿಯ 15 ಪ್ರೊಫೈಲ್‌ ಹೊಂದಿರುವ ಸಂಗತಿ ಶಂಕರ್‌ ಅವರಿಗೆ ಗೊತ್ತಾಯಿತು. ನಂತರ ವಂಚನೆ ಆರೋಪ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಅಡಿಯಲ್ಲಿ ಬೆಂಗಳೂರು ಉತ್ತರ ಸಿಇಎನ್‌ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಸಂಜನಾ ವಿರುದ್ಧ ವಂಚನೆ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣ ರದ್ದುಪಡಿಸುವಂತೆ ಕೋರಿ ಸಂಜನಾ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಆರಂಭದಲ್ಲಿ ತಾನು ಥೆರಪಿಸ್ಟ್‌ ಆಗಿದ್ದು, ತನ್ನ ತಂಡವು ಶಂಕರ್‌ ಅವರ ಯೋಗಕ್ಷೇಮ ನೋಡಿಕೊಳ್ಳಲಿದೆ ಎಂದು ಸಂಜನಾ ಹೇಳಿದ್ದರು. ಆದರೆ, ಯಾವುದೇ ತಂಡ ಮತ್ತು ನಿಗದಿತ ಅರ್ಹತೆಯಿಲ್ಲದೆ ಶಂಕರ್‌ ವೆಲ್‌ನೆಸ್‌ ಥೆರಫಿಗೆ ಒಳಗಾಗುವಂತೆ ಸಂಜನಾ ಮಾಡಿದ್ದಾರೆ. ಆಕೆ ಹಲವು ವೆಬ್‌ ಪೇಜ್‌ ಹೊಂದಿರುವುದು ಮತ್ತು ದೂರುದಾರರಿಗೆ ಆಮಿಷವೊಡ್ಡಲೆಂದೇ ವೆಬ್‌ಪೇಜ್‌ ರೂಪಿಸಿರುವುದು ಎಫ್‌ಐಆರ್‌ನ ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಡೆಡ್‌ಲೈನ್‌ ನೀಡಿದ ಹೈಕೋರ್ಟ್‌

ಈ ನಡುವೆ, ಶಂಕರ್‌ ಅಶ್ಲೀಲ ಸಂದೇಶ ಕಳುಹಿಸಿರುವ ಸಂಬಂಧ ಸಂಜನಾ ದಾಖಲಿಸಿರುವ ಪ್ರಕರಣ ವಿಚಾರಣೆ ಹಂತದಲ್ಲಿದೆ. ಹಾಗಾಗಿ, ಸಂಜನಾ ಆರೋಪ ಮುಕ್ತರಾರಲು ವಿಚಾರಣೆ ಎದುರಿಸಲೇಬೇಕು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಆಕೆಯ ಮೇಲಿನ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

Follow Us:
Download App:
  • android
  • ios