Asianet Suvarna News Asianet Suvarna News

ರಾಜಕಾಲುವೆ ಒತ್ತುವರಿ ತೆರವಿಗೆ ಡೆಡ್‌ಲೈನ್‌ ನೀಡಿದ ಹೈಕೋರ್ಟ್‌

ರಾಜಕಾಲುವೆ ಒತ್ತುವರಿ ತೆರವಿಗೆ ವಿಳಂಬ ನೀತಿ ಅನುಸರಿಸುತ್ತಿರುವ ಬಿಬಿಎಂಪಿ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಅ.25ರೊಳಗೆ ಬಾಕಿ ಇರುವ ರಾಜಕಾಲುವೆಗಳನ್ನು ತೆರವುಗೊಳಿಸಬೇಕು ಎಂದು ತಾಕೀತು ಮಾಡಿದೆ. 

Karnataka High Court has given a deadline for the removal of encroachment on Rajakaluve gvd
Author
First Published Oct 1, 2022, 6:48 AM IST

ಬೆಂಗಳೂರು (ಅ.01): ರಾಜಕಾಲುವೆ ಒತ್ತುವರಿ ತೆರವಿಗೆ ವಿಳಂಬ ನೀತಿ ಅನುಸರಿಸುತ್ತಿರುವ ಬಿಬಿಎಂಪಿ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಅ.25ರೊಳಗೆ ಬಾಕಿ ಇರುವ ರಾಜಕಾಲುವೆಗಳನ್ನು ತೆರವುಗೊಳಿಸಬೇಕು ಎಂದು ತಾಕೀತು ಮಾಡಿದೆ. ಬೆಂಗಳೂರು ನಗರದಲ್ಲಿ ರಸ್ತೆಗುಂಡಿಗಳ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ಆಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, 2022ರ ಸೆ.19ರವರೆಗೆ 10 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಹೈಕೋರ್ಟ್‌, 602 ಒತ್ತುವರಿ ಬಾಕಿ ಇವೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರೂ ಕೇವಲ 10 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಉಳಿದವುಗಳ ತೆರವಿಗೆ ವಿಳಂಬ ಮಾಡುತ್ತಿದ್ದರೆ ಒತ್ತುವರಿ ತೆರವು ಮಾಡಲು ಸಾಧ್ಯವಾಗುವುದಿಲ್ಲ ಎಂದು ಕಿಡಿಕಾರಿತು.

BBMP Election: ಡಿ.31ರೊಳಗೆ ಪಾಲಿಕೆ ಎಲೆಕ್ಷನ್‌ ನಡೆಸಲು ಹೈಕೋರ್ಟ್‌ ಆದೇಶ

ಅಲ್ಲದೆ, ಬಾಕಿ ಉಳಿದಿರುವ ರಾಜಕಾಲುವೆ ಒತ್ತುವರಿಗಳನ್ನು ಅ.25ರೊಳಗೆ ತೆರವುಗೊಳಿಸಬೇಕು ಎಂದು ರಾಜಕಾಲುವೆ ಮುಖ್ಯ ಎಂಜಿನಿಯರ್‌ಗೆ ನಿರ್ದೇಶಿಸಿರುವ ಹೈಕೋರ್ಟ್‌, ತಪ್ಪಿದರೆ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಇದೇ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿದ್ದ 221 ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಿದ್ದು, ಉಳಿದ ಗುಂಡಿಗಳನ್ನು ಹಂತ ಹಂತವಾಗಿ ಮುಚ್ಚಲಾಗುವುದು. ನಗರದ 227 ರಸ್ತೆಗಳಲ್ಲಿ ಡಾಂಬರಿಕರಣ ಮಾಡುವ ಕಾರ್ಯ ಈಗಾಗಲೇ ಪ್ರಾರಂಭಿಸಲಾಗಿದೆ. ಮಹದೇವಪುರ ವಲಯದ ರಸ್ತೆಗಳಲ್ಲಿ ಈವರೆಗೂ 5 ಕಿ.ಮೀ.ವರೆಗೆ ಡಾಂಬರು ಹಾಕಲಾಗಿದೆ ಎಂದು ವಿವರಿಸಿದರು.

ರಾಜಕಾಲುವೆ ಮೇಲೆ ಇರೋ ಬಿಬಿಎಂಪಿಯ ಕಟ್ಟಡವನ್ನೂ ತೆರವುಗೊಳಿಸಿ: ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಖಾಸಗಿ ಸಂಸ್ಥೆಗಳ ಕಟ್ಟಡಗಳನ್ನು ತೆರವುಗೊಳಿಸುವುದರ ಜತೆಗೆ ರಾಜಕಾಲುವೆಗಳ ಮೇಲೆಯೇ ನಿರ್ಮಿಸಿರುವ ಪಾಲಿಕೆಯ ಕಟ್ಟಡಗಳನ್ನೂ ಸಹ ತೆರವುಗೊಳಿಸಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಕಳೆದ 10-15 ದಿನಗಳಿಂದ ಬೆಂಗಳೂರು ಮಹಾನಗರದಲ್ಲಿ ಉಂಟಾದ ಪ್ರವಾಹದ ಪರಿಸ್ಥಿತಿಗೆ ವಿಶೇಷವಾಗಿ ಮಹದೇವಪುರ ವಲಯ, ಪೂರ್ವ ವಲಯ, ಬೊಮ್ಮನಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ, ವಸತಿ ಸಮುಚ್ಛಯ, ಟೆಕ್‌ಪಾರ್ಕ್ಗಳು , ಐಟಿ-ಬಿಟಿ ಕಂಪನಿಗಳು, ಮಾಲ್‌ಗಳು ನಿರ್ಮಾಣವಾಗಿವೆ. ಅವುಗಳು ಒತ್ತುವರಿ ಮಾಡಿಕೊಂಡ ರಾಜಕಾಲುವೆಗಳಲ್ಲಿ ಹರಿದು ಹೋಗಬೇಕಿದ್ದ ಮಳೆಯ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೇ, ಬಿಬಿಎಂಪಿ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ತನ್ನದೇ ಆದ ಕಟ್ಟಡಗಳೂ ಸಹ ಕಾರಣವಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

BBMP Election: 1 ದಿನ ಮೊದಲೇ ಅಂತಿಮ ಮತದಾರರ ಪಟ್ಟಿ ಬಿಡುಗಡೆ

ಪಾಲಿಕೆಯ ಕೇಂದ್ರ ಕಚೇರಿಗೆ ಕೂಗಳತೆಯ ದೂರದಲ್ಲಿರುವ ಜೆ.ಸಿ.ರಸ್ತೆಯಲ್ಲಿ ಬೃಹತ್‌ ನೀರುಗಾಲುವೆಯನ್ನು ಒತ್ತುವರಿ ಮಾಡಿಕೊಂಡು ರಾಜಕಾಲುವೆ ಮೇಲೆಯೇ ಪಾಲಿಕೆಯು ಕಟ್ಟಡ ಕಳೆದ ಮೂರು ದಶಕಗಳ ಹಿಂದೆ ನಿರ್ಮಿಸಲಾಗಿದೆ. ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದರೂ ಸಹ ಪಾಲಿಕೆಯ ಸಂಬಂಧಪಟ್ಟಅಧಿಕಾರಿಗಳು ಈವರೆಗೂ ಎಚ್ಚೆತ್ತುಕೊಂಡಿಲ್ಲ. ಇನ್ನು, ಈ ಕಟ್ಟಡದ ಎದುರುಗಡೆ ಮತ್ತೊಂದು ಪಾಲಿಕೆಯ ಕಟ್ಟಡದಲ್ಲಿ ಸಿದ್ಧಾರ್ಥ ಪುರುಷರ ವಸತಿ ನಿಲಯ ಕಾರ್ಯ ನಿರ್ವಹಿಸುತ್ತಿದೆ. ಜೆ.ಸಿ.ರಸ್ತೆಗೆ ಸಮಾನಾಂತರ ರಸ್ತೆಯಾಗಿರುವ ಲಾಲ್‌ಬಾಗ್‌ ರಸ್ತೆಯಲ್ಲಿನ ಪಾಸ್‌ಪೋರ್ಟ್‌ ಕಚೇರಿಗೆ ಕೂಗಳತೆಯ ದೂರದಲ್ಲಿ ಇರುವ ಬೃಹತ್‌ ನೀರುಗಾಲುವೆಯ ಮೇಲೆ ನಾಲ್ಕು ಮಹಡಿ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios