ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಗುರುತು ಪತ್ತೆ ಪರೇಡ್‌ (ಟಿಐಪಿ) ಕೃತ್ಯ ಸಂಭವಿಸಿದ ಆರಂಭದಲ್ಲೇ ಮಾಡಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಬೆಂಗಳೂರು (ಅ.04): ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಗುರುತು ಪತ್ತೆ ಪರೇಡ್‌ (ಟಿಐಪಿ) ಕೃತ್ಯ ಸಂಭವಿಸಿದ ಆರಂಭದಲ್ಲೇ ಮಾಡಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಕಳ್ಳ ಸಾಗಣೆ ಪ್ರಕರಣ ನಡೆದ 11 ವರ್ಷಗಳ ನಂತರ ಟಿಐಪಿ ನಡೆಸಲು ತನಿಖಾಧಿಕಾರಿಗೆ ಅವಕಾಶ ನೀಡಿದ ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಲಯ ಆದೇಶ ಪ್ರಶ್ನಿಸಿ ಕೆ.ಉಮೇಶ್‌ ಶೆಟ್ಟಿ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಪರಾಧ ಕೃತ್ಯಕ್ಕೆ ಕಾರಣವಾದ ಅಥವಾ ಕೃತ್ಯ ಎಸಗಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಟಿಐಪಿ ನಡೆಸಲಾಗುತ್ತದೆ. ಸಾಧ್ಯವಾದಷ್ಟು ಬೇಗ ಟಿಐಪಿ ಮಾಡಬೇಕಿರುತ್ತದೆ. ಟಿಐಪಿ ವಿಳಂಬವಾದಷ್ಟೂ ಸಾಕ್ಷಿಗಳು ತಮ್ಮ ಜ್ಞಾಪಕ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಡೆಡ್‌ಲೈನ್‌ ನೀಡಿದ ಹೈಕೋರ್ಟ್‌

ಪ್ರಕರಣದ ವಿವರ: ಬಸವೇಶ್ವರನಗರ ಪೊಲೀಸರು 2006ರಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಅಕ್ರಮ ಸಾಗಣೆ (ನಿಯಂತ್ರಣ) ಕಾಯ್ದೆ-1956 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ನಾಲ್ವರಲ್ಲಿ ಪೊನ್ನಪ್ಪನ ಮಗ ಉಮೇಶ್‌ ಶೆಟ್ಟಿ ಎಂಬಾತ ಮೊದಲ ಆರೋಪಿಯಾಗಿದ್ದ. ಜಾಮೀನು ಪಡೆದ ನಂತರ ಆತ ತಲೆ ಮರೆಸಿಕೊಂಡಿದ್ದ. ಆತನ ವಿರುದ್ಧ ವಿಚಾರಣಾ ನ್ಯಾಯಾಲಯ ಜಾಮೀನುರಹಿತ ವಾರಂಟ್‌ ಜಾರಿಗೊಳಿಸಿತ್ತು.

ಇದರಿಂದ ಪೊಲೀಸರು ಅರ್ಜಿದಾರ ಉಮೇಶ್‌ ಶೆಟ್ಟಿ ವಿರುದ್ಧ ಎನ್‌ಬಿಡಬ್ಲ್ಯೂ ಕಾರ್ಯಗತಗೊಳಿಸಲು ಮುಂದಾಗಿದ್ದರು. ಆಗ ಅವರು, ತಾನು ಪೊನ್ನಪ್ಪನ ಮಗ ಉಮೇಶ್‌ ಶೆಟ್ಟಿಯಲ್ಲ. ತಮ್ಮ ತಂದೆಯ ಹೆಸರು ದಿ.ವಿಠಲ ಶೆಟ್ಟಿಹಾಗೂ ವಾರಂಟ್‌ನಲ್ಲಿ ಹೆಸರಿಸಿರುವ ವ್ಯಕ್ತಿ ತಾವಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು. ಇದರಿಂದ ಸತ್ಯಾಸತ್ಯತೆ ಅರಿಯುವುದಕ್ಕಾಗಿ ತನಿಖಾಧಿಕಾರಿಗಳು ಟಿಐಪಿ ನಡೆಸಲು ಅನುಮತಿ ಕೋರಿದ್ದರು. ಆ ಮನವಿ ಪುರಸ್ಕರಿಸಿದ್ದ ಎಸಿಎಂಎಂ ನ್ಯಾಯಾಲಯ, ಟಿಐಪಿ ನಡೆಸಲು ಅನುಮತಿ ನೀಡಿ 2017ರ ಸೆ.7ರಂದು ಆದೇಶಿಸಿತ್ತು. ಈ ಆದೇಶ ರದ್ದುಕೋರಿ ಉಮೇಶ್‌ ಶೆಟ್ಟಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್‌, ಎಸಿಎಂಎಂ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

BBMP Election: ಡಿ.31ರೊಳಗೆ ಪಾಲಿಕೆ ಎಲೆಕ್ಷನ್‌ ನಡೆಸಲು ಹೈಕೋರ್ಟ್‌ ಆದೇಶ

ಕೋರ್ಟ್‌ ಹೇಳಿದ್ದೇನು?: ಈ ಪ್ರಕರಣ ಸಂಬಂಧ ದೂರು ದಾಖಲಾದ 11 ವರ್ಷಗಳ ನಂತರ ತನಿಖಾಧಿಕಾರಿ ಟಿಐಪಿ ನಡೆಸಲು ಅನುಮತಿ ಕೋರಿದ್ದಾರೆ. ಇಷ್ಟುವರ್ಷಗಳ ಬಳಿಕ ಸಾಕ್ಷಿಯ ನೆನಪಿನ ದುರ್ಬಲವಾಗಿರುತ್ತದೆ ಹಾಗೂ ಅಂತಹ ಸಾಕ್ಷಿ ತೋರಿಸುವ ಗುರುತಿನ ಮೇಲೆ ವಿಶ್ವಾಸ ಇಡಲಾಗದು. ಕೃತ್ಯ ನಡೆದ 11 ವರ್ಷಗಳ ಬಳಿಕ ಟಿಐಪಿ ನಡೆಸಿದರೆ, ಯಾವ ಉದ್ದೇಶದಿಂದ ಪರೇಡ್‌ ನಡೆಸಲಾಗುತ್ತದೆಯೋ ಅದು ಸಫಲವಾಗುವ ಸಾಧ್ಯತೆಗಳಿಲ್ಲ ಎಂದು ತಿಳಿಸಿರುವ ಹೈಕೋರ್ಟ್‌, ಇಂತಹ ಸಮಸ್ಯೆ ತಪ್ಪಿಸುವುದಕ್ಕಾಗಿ ಕೃತ್ಯ ಸಂಭವಿಸಿದ ಆರಂಭದಲ್ಲೇ ತನಿಖಾಧಿಕಾರಿಗಳು ಟಿಐಪಿ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.