ಮೇಕೆಗೂ ಟಿಕೆಟ್ ಕೊಂಡ ಮಹಿಳೆ: ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಫುಲ್ ಟ್ರೋಲ್!?
ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್, ಶಕ್ತಿ ಯೋಜನೆಯ ಫ್ರೀ ಟಿಕೆಟ್ ತೋರಿಸಿದ್ದೇ ತೋರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಆಹಾರವಾಗಿದ್ದಾರೆ. ಇತ್ತೀಚೆಗೆ ಕುರಿಗಾಹಿ ಮಹಿಳೆಯೊಬ್ಬಳು, ರೈಲಿನಲ್ಲಿ ತಾನು ಹಾಗೂ ತನ್ನ ಕುರಿಯ ಪ್ರಯಾಣಕ್ಕೆ ಟಿಕೆಟ್ ತೆಗೆದುಕೊಂಡಿದ್ದ ವಿಚಾರವನ್ನು ಇಟ್ಟುಕೊಂಡು ಮತ್ತೊಮ್ಮೆ ಲಾವಣ್ಯ ಬಲ್ಲಾಳ್ ಕಾಲೆಳೆದಿದ್ದಾರೆ.
ಬೆಂಗಳೂರು (ಸೆ.13): ಎಲ್ಲರಿಗೂ ಗೊತ್ತಿರಬಹುದು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನ್ನ ಗ್ಯಾರಂಟಿ ಯೋಜನೆಯಲ್ಲಿ ಮೊದಲನೆಯದಾಗಿ ಕೆಎಸ್‌ಆರ್‌ಟಿಸಿ ಸಾಮಾನ್ಯ ಸಾರಿಗೆ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿತ್ತು. ಅದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಬಿಎಂಟಿಸಿ ಬಸ್‌ನಲ್ಲಿ ಫ್ರೀ ಟಿಕೆಟ್ ತೆಗೆದು ಪ್ರಯಾಣ ಮಾಡಿದ್ದಲ್ಲದೆ, 'ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜಾರಿಯಾಗಿರುವ ಮಹಿಳೆಯರಿಗೆ ಉಚಿತ ಬಸ್ ಸೇವೆಯ ನನ್ನ ಶೂನ್ಯ ಬೆಲೆಯ ಟಿಕೆಟ್' ಎಂದು ಬರೆದು ಫ್ರೀ ಟಿಕೆಟ್‌ನ ಚಿತ್ರವನ್ನು ಹಾಕಿದ್ದರು. ಅವರ ಈ ಟ್ವೀಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರವೇನೂ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಸೇವೆ ಘೋಷಣೆ ಮಾಡಿರಬಹುದು. ಆದರೆ, ಪ್ರತಿನಿತ್ಯ ಕಾರ್‌ಗಳಲ್ಲೇ ತಿರುಗಾಡುವ ನೀವುಗಳು ಫ್ರಿ ಟಿಕೆಟ್‌ನಲ್ಲಿ ಪ್ರಯಾಣ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು. ಸರ್ಕಾರದ ಫ್ರೀ ಬಸ್ ಯೋಜನೆಯನ್ನು ಜನರಿಗೆ ತಿಳಿಸುವ ಹಲವು ಮಾರ್ಗಗಳು ಇದ್ದವು. ಅದನ್ನು ಬಿಟ್ಟು ನೀವೇ ಫ್ರೀ ಟಿಕೆಟ್‌ನಲ್ಲಿ ಪ್ರಯಾಣ ಮಾಡಿ ಅದನ್ನು ಹೆಮ್ಮೆಯಿಂದ ಪ್ರಕಟಿಸಿದರೆ, ನಿಜವಾದ ತೆರಿಗೆ ಕಟ್ಟುವ ವ್ಯಕ್ತಿಗೆ ಏನು ಅನಿಸರಬೇಡ ಎನ್ನುವ ಅರ್ಥದ ಟ್ವೀಟ್‌ಗಳು ಬಂದಿದ್ದವು. ಸಾಕಷ್ಟು ಟೀಕೆಗಳು ಬಂದ ಬೆನ್ನಲ್ಲಿಯೇ ಸ್ವತಃ ಲಾವಣ್ಯ ಬಲ್ಲಾಳ್ ಕೂಡ ತಾನು ಮಾಡಿದ್ದೇ ಸರಿ ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದರು.
ಈಗ ಸೋಶಿಯಲ್ ಮೀಡಿಯಾದಲ್ಲಿ 'ಮಿ.ಸಿನ್ಹಾ' ಎನ್ನುವ ವ್ಯಕ್ತಿ ಲಾವಣ್ಯ ಬಲ್ಲಾಳ್ ಅವರ ಟ್ವೀಟ್‌ನ ಚಿತ್ರದೊಂದಿಗೆ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 'ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ. ಒಂದು ಭಾರತದಲ್ಲಿ ಹೆಮ್ಮೆಯ ಭಾರತೀಯ ಮಹಿಳೆಯೊಬ್ಬರು ದೇಶದ ಬೆಳವಣಿಗೆಗೆ ಕೊಡುಗೆ ನೀಡಲು ಆಕೆ ರೈಲಿನಲ್ಲಿ ತನಗೆ ಮಾತ್ರವಲ್ಲ, ತನ್ನೊಂದಿಗೆ ಪ್ರಯಾಣ ಮಾಡುತ್ತಿರುವ ಮೇಕೆಗೂ ಟಿಕೆಟ್ ಖರೀದಿಸುತ್ತಾಳೆ. ಆದರೆ, ಇನ್ನೊಂದು ಭಾರತದಲ್ಲಿ ಶ್ರೀಮಂತ ಕಾಂಗ್ರೆಸ್ ಪಕ್ಷದ ಮಹಿಳೆಯೊಬ್ಬರು ತನ್ನಲ್ಲಿಯೇ ಸಾಕಷ್ಟು ಕಾರುಗಳನ್ನು ಹೊಂದಿದ್ದರೂ, ತನ್ನ ಉಚಿತ ಬಸ್ ಪ್ರಯಾಣದ ಟಿಕೆಟ್ ಅನ್ನು ಹೆಮ್ಮೆಯಿಂದ ತೋರಿಸುತ್ತಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಫ್ರೀ ಟಿಕೆಟ್ ತೋರಿಸಿದ್ದಕ್ಕೆ ಫುಲ್ ಟ್ರೋಲ್, ನೆಟ್ಟಿಗರಿಗೆ ಖಡಕ್ ಉತ್ತರ ನೀಡಿದ ಲಾವಣ್ಯ ಬಲ್ಲಾಳ್!
ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರ ಬಳಿ ಬರುವ ರೈಲ್ವೆಯ ಟಿಕೆಟ್ ಕಲೆಕ್ಟರ್, ನಿಮ್ಮ ಟಿಕೆಟ್ ಎಲ್ಲಿ ಎಂದು ಕೇಳುತ್ತಾರೆ. ಅದಕ್ಕೆ ಆಕೆ ನಾನು ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಾಳೆ. ನಿಮ್ಮದೆಲ್ಲಿ ಎಂದು ಆಕೆಯ ಎದುರಿಗಿದ್ದ ಪುರುಷನಿಗೆ ಪ್ರಶ್ನಿಸುವ ವೇಳೆ ತಮ್ಮಲ್ಲಿದ್ದ ಟಿಕೆಟ್‌ಅನ್ನು ಕಲೆಕ್ಟರ್‌ಗೆ ನೀಡುತ್ತಾರೆ. ಅದನ್ನು ನೋಡಿದ ಅವರು, ನೀವು ನಿಮ್ಮ ಮೇಕೆಗೂ ಟಿಕೆಟ್ ತೆಗೆದುಕೊಂಡಿದ್ದೀರಾ ಎಂದು ಖುಷಿಯಿಂದಲೇ ಕೇಳುತ್ತಾರೆ. ಅದಕ್ಕೆ ಆಕೆ ನಗುತ್ತಲೇ ಹೌದು ಎಂದು ಹೇಳುತ್ತಾಳೆ. ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ಮಟ್ಟದಲ್ಲಿ ವೈರಲ್ ಆಗಿತ್ತು.
ಟ್ವಿಟರ್‌ನಲ್ಲಿ ಹೆಣ್ಮಕ್ಕಳ ಲಿಪ್‌ಸ್ಟಿಕ್ ಫೋಟೋ ವೈರಲ್, ಅಂಥದ್ದೇನಾಯ್ತು!
ಮಿ.ಸಿನ್ಹಾ ಈ ಎರಡೂ ಘಟನೆಗಳನ್ನು ಹೋಲಿಕೆ ಮಾಡಿ ಬರೆದಿರುವ ಟ್ವೀಟ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿಯವರೆಗೂ ಈ ಟ್ವೀಟ್‌ಅನ್ನು 66 ಸಾವಿರ ಮಂದಿ ವೀಕ್ಷಿಸಿದ್ದಾರೆ. 123ಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದರೆ, ಅಂದಾಜು 2 ಸಾವಿರ ಮಂದಿ ಕೋಟ್ ಟ್ವೀಟ್ ಮಾಡಿದ್ದಾರೆ. 'ನಮ್ಮ ಪ್ರತಿದಿನದ ಜೀವನದಲ್ಲಿ ಇದನ್ನೇ ಪಾಲಿಸಬೇಕು. ಎಷ್ಟು ಮುಕ್ತ ಹಾಗೂ ಪ್ರಾಮಾಣಿಕ ವ್ಯಕ್ತಿ ಈಕೆ..' ಎಂದು ವಿಡಿಯೋ ಕುರಿತಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಬಹುತೇಕರು ಲಾವಣ್ಯ ಬಲ್ಲಾಳ್ ಅವರ ಟ್ವಿಟರ್ ಪುಟವನ್ನು ಟ್ಯಾಗ್ ಮಾಡಿ, ನಿಮ್ಮಿಬ್ಬರ ನಡುವೆ ಬಹಳ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಹೆಮ್ಮೆಯ ಭಾರತೀಯ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸವಿದು. ರಾಜಕಾರಣಿಗಳು ಜನರನ್ನು ಉಚಿತಗಳಿಗೆ ಜನರನ್ನು ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.