‘ಬಿಎಲ್‌ಒಗಳು ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಿ ಗಣತಿ ನಮೂನೆ ಭರ್ತಿ ಮಾಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ, ನಮ್ಮವರು ಕಾನೂನು ಬದ್ಧವಾಗಿ ಅಂಥವ ನಮೂನೆ ಸಮುದಾಯ ಭವನ, ದೇವಸ್ಥಾನ ಮತ್ತು ಮಸೀದಿಗಳಲ್ಲಿ ಕುಳಿತು ಭರ್ತಿ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ -ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
- ಅದಕ್ಕೆಂದೇ ಮಸೀದಿ, ದೇಗುಲದಲ್ಲಿ ಫಾರಂ ಭರ್ತಿ
ಕೆಪಿಸಿಸಿ ಅಧ್ಯಕ್ಷರು ಹೇಳಿದ್ದೇನು?
- ಕೊಳಗೇರಿ ಭೇಟಿಗೆ ಬಿಎಲ್‌ಒಗಳಿಂದ ಹಿಂದೇಟು
- ಹೀಗಾಗಿ ನಮೂನೆ ಭರ್ತಿಗೆ ನಮ್ಮವರಿಂದ ನೆರವು
- ಇದರಿಂದ ಎಸ್‌ಐಆರ್ ಪ್ರಕ್ರಿಯೆಗೆ ಅನುಕೂಲ
- ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ತುಂಬಬಹುದು
- ಚುನಾವಣಾ ಆಯೋಗದ ಪ್ರಕಾರ ಇದು ನಿಯಮಬದ್ಧ
- ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಮರ್ಥನೆ
ಬೆಂಗಳೂರು (ಜು.7): ‘ಬಿಎಲ್‌ಒಗಳು(BLOs) ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಿ ಗಣತಿ ನಮೂನೆ ಭರ್ತಿ ಮಾಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ, ನಮ್ಮವರು ಕಾನೂನು ಬದ್ಧವಾಗಿ ಅಂಥವರ ಗಣತಿ ನಮೂನೆಯನ್ನು ಸಮುದಾಯ ಭವನ, ದೇವಸ್ಥಾನ ಮತ್ತು ಮಸೀದಿಗಳಲ್ಲಿ ಕುಳಿತು ಭರ್ತಿ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಎಸ್‌ಐಆರ್ ಸುಗಮವಾಗಿ ನಡೆಯಲು ಪೂರಕವಾದ ಹೆಜ್ಜೆ ಇದು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್(BK Hariprasad) ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ನಾವು ಸಂವಿಧಾನ ಕಾಪಾಡಿಕೊಳ್ಳಬೇಕು. ಚುನಾವಣಾ ಆಯೋಗದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಗಣತಿ ನಮೂನೆ ಅರ್ಜಿ ತುಂಬಬಹುದು. ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಬಿಜೆಪಿ ಬಿಎಲ್ಎಗಳು ಬಿಎಲ್ಓಗಳ ಜೊತೆ ಹೋಗಿ ನೀವು ಬಿಜೆಪಿಯವರಿಗೆ ಮತ ಹಾಕಬೇಕು ಎಂದು ಹೇಳುತ್ತಿದ್ದಾರೆ. ಸದಾಶಿವ ನಗರದಲ್ಲಿ ಬಲವಂತವಾಗಿ ಸೇರಿಸಲಾಗುತ್ತಿದೆ. ಜಯನಗರದಲ್ಲಿ ಧಮಕಿ ಹಾಕಲಾಗುತ್ತಿದೆ. ಇದರ ಬಗ್ಗೆ ಯಾಕೆ ಪ್ರತಿಪಕ್ಷಗಳು ಮಾತನಾಡುವುದಿಲ್ಲ?’ ಎಂದು ಕಿಡಿಕಾರಿದರು.
B50 ಲಕ್ಷ ಜನರನ್ನು ಕೈಬಿಡಲು ಮುಂದಾಗಿದ್ದಾರೆ
ರಾಜ್ಯದಲ್ಲಿ 5.65ಕೋಟಿ ಮತದಾರರ ಮ್ಯಾಪಿಂಗ್ ಆಗಿದ್ದು, 50 ಲಕ್ಷ ಜನರನ್ನು ಕೈಬಿಡಲು ಮುಂದಾಗಿದ್ದಾರೆ. ರಾಮನಗರದ ಮಸೀದಿಯಲ್ಲಿ ಕಾಂಗ್ರೆಸ್ ನಾಯಕರ ಮನೆಯಲ್ಲಿ ಗಣತಿ ನಮೂನೆ ತುಂಬಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ 1 ಲಕ್ಷ ಮತಗಳ ಅಂತರದಲ್ಲಿ ಗೆದ್ದಾಗ ರಾಮನಗರದಲ್ಲಿ ಬಾಂಗ್ಲಾದೇಶದವರು ಇರಲಿಲ್ಲವೇ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಎಚ್ಡಿಕೆ ಬಿಜೆಪಿಯ ಹರಕೆಯ ಕುರಿ-ಹರಿ: ಬಿಜೆ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಮಹಾನ್ ನಾಯಕ ಪ್ರಹ್ಲಾದ್ ಜೋಶಿ ಅವರು ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಶಿವಸೇನೆ, ಅಕಾಲಿ ದಳ, ಟಿಎಂಸಿ, ಜೆಡಿಯು ಸೇರಿ ಎಲ್ಲಾ ಪಕ್ಷಗಳನ್ನು ವಿಭಜಿಸಿ ಬೇಳೆ ಬೇಯಿಸಿಕೊಂಡಿರುವ ಬಿಜೆಪಿ ಈಗ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಕುಮಾರಸ್ವಾಮಿ ಹಿಂದೆ ಜೋಶಿ ಅವರ ಬಗ್ಗೆ ಏನು ಹೇಳಿಕೆ ನೀಡಿದ್ದರು ಎಂಬುದು ಗೊತ್ತಿದೆ. ಈಗ ಕುಮಾರಸ್ವಾಮಿ ಅವರು ಯಾಕೆ ಅವರ ದಾಳವಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.


