ಅರಣ್ಯ ಮತ್ತು ಪೊಲೀಸ್‌ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.3 ಮೀಸಲಾತಿ ನೀಡಲಾಗಿದ್ದು, ಉಳಿದ ಇಲಾಖೆಯಲ್ಲಿ ಶೇ.2ರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನ ಪರಿಷತ್ (ಡಿ.12): ಅರಣ್ಯ ಮತ್ತು ಪೊಲೀಸ್‌ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.3 ಮೀಸಲಾತಿ ನೀಡಲಾಗಿದ್ದು, ಉಳಿದ ಇಲಾಖೆಯಲ್ಲಿ ಶೇ.2ರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಾಂಗ್ರೆಸ್ಸಿನ ಐವನ್‌ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಳೆದ 3 ವರ್ಷಗಳಲ್ಲಿ ಒಲಿಂಪಿಕ್ಸ್‌, ಪ್ಯಾರಲಿಂಪಿಕ್ಸ್‌, ಏಷಿಯನ್‌ ಗೇಮ್ಸ್‌, ಪ್ಯಾರಾ ಏಷಿಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ವಿಜೇತ 13 ಕ್ರೀಡಾಪಟುಗಳಿಗೆ ವಿಶೇಷ ನೇಮಕಾತಿ ನಿಯಮದಡಿ ಅವಕಾಶ ಪತ್ರ ನೀಡಲಾಗಿದೆ. ಈ ಪೈಕಿ 10 ಜನರಿಗೆ ವಿವಿಧ ಇಲಾಖೆಗಳಲ್ಲಿ ‘ಬಿ’ ವೃಂದದ ಹುದ್ದೆಗಳಿಗೆ ನೇಮಿಸಿಕೊಳ್ಳಲಾಗಿದೆ’ ಎಂದರು. ಉಳಿದಂತೆ ಕ್ರೀಡಾ ಕೋಟಾ ಅಡಿ 70 ಜನರನ್ನು ಪೊಲೀಸ್‌ ಪೇದೆ, 14 ಪಿಎಸ್‌ಐ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ’ ಎಂದರು.

2028ರ ಒಲಿಂಪಿಕ್ಸ್‌ಗೆ ತಯಾರಿಗೆ ತಲಾ ₹10 ಲಕ್ಷ: ‘ರಾಜ್ಯ ಸರ್ಕಾರ ಕ್ರೀಡಾ ಚಟುವಟಿಕೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳನ್ನು ಗುರುತಿಸಿ 2028ರ ಒಲಿಂಪಿಕ್ಸ್‌ಗೆ ತಯಾರಿಗೆ ವಾರ್ಷಿಕ ತಲಾ 10 ಲಕ್ಷ ರು. ಪ್ರೋತ್ಸಾಹ ಧನ ನೀಡಲಾಗುವುದು. ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ’ ಎಂದರು. ಕಬಡ್ಡಿ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೂ ಸಹ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು

ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಸೇರಿದಂತೆ ವಿವಿಧೆಡೆ ಇತ್ತೀಚೆಗೆ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ರಾಜ್ಯದಲ್ಲಿ ಒಟ್ಟು 2,84,881 ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಪ್ರಸ್ತುತ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಉಚ್ಚಾಟಿತ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಿದ್ದರಾಮಯ್ಯ ಅವರು ಇಲಾಖಾವಾರು ಖಾಲಿ ಹುದ್ದೆಗಳ ವಿವರ ಹಾಗೂ ಭರ್ತಿ ಮಾಡುತ್ತಿರುವ ಹುದ್ದೆಗಳ ವಿವರ ನೀಡಿದ್ದಾರೆ.

ರಾಜ್ಯದಲ್ಲಿ ಒಟ್ಟು 2,84,881 ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆ ಖಾಲಿ ಇವೆ. ಈ ಪೈಕಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ 79,696, ಆರೋಗ್ಯ ಇಲಾಖೆಯಲ್ಲಿ 37,572, ಒಳಾಡಳಿತ ಇಲಾಖೆಯಲ್ಲಿ 28,188, ಉನ್ನತ ಶಿಕ್ಷಣ 13,599, ಪಶುಸಂಗೋಪನೆ 11,020, ಕಂದಾಯ 10,867, ಆರ್ಥಿಕ ಇಲಾಖೆಯಲ್ಲಿ 7668, ಕಾನೂನು ಇಲಾಖೆಯಲ್ಲಿ 7659, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 4792, ಗ್ರಾಮೀಣಾಭಿವೃದ್ಧಿ ಇಲಾಖೆ 10,504, ಪರಿಶಿಷ್ಟ ಜಾತಿಗಳ ಕಲ್ಯಾಣ 9,646, ಪರಿಶಿಷ್ಟ ಪಂಗಡಗಳ ಕಲ್ಯಾಣ 2,435, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಜೀವನೋಪಾಯ 4,010, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 3,391 ಹುದ್ದೆ ಖಾಲಿಯಿವೆ ಎಂದು ಹೇಳಿದ್ದಾರೆ.