'ಗೃಹಜ್ಯೋತಿ' ಯೋಜನೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ಹೊಸ ಮನೆಗೆ ಕಾಯಂ ವಿದ್ಯುತ್ ಸಂಪರ್ಕ ಪಡೆಯಲು ಕಾನೂನಿನ ತೊಡಕು ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ 'ಸ್ವಾಧೀನಾನುಭವ ಪತ್ರ' (OC) ಸಲ್ಲಿಸದ ಕಾರಣ, ಡಿಸೆಂಬರ್‌ನ ಗೃಹಪ್ರವೇಶಕ್ಕೆ ಮುನ್ನ ತಾತ್ಕಾಲಿಕ ಸಂಪರ್ಕಅವಲಂಬಿಸಬೇಕಾಗಿದೆ.

ಮೈಸೂರು (ನ.21): ​ರಾಜ್ಯದ ಜನತೆಗೆ 'ಗೃಹಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ ಒದಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಂತ ಮನೆಗೇ ಇದೀಗ ವಿದ್ಯುತ್ ಸಂಪರ್ಕದ ಬಿಸಿ ತಟ್ಟಿದೆ. ಮೈಸೂರಿನ ಕುವೆಂಪುನಗರದ ಜೋಡಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸಿಎಂ ಅವರ ಹೊಸ ನಿವಾಸಕ್ಕೆ ಕಾಯಂ ವಿದ್ಯುತ್ ಸಂಪರ್ಕ ಪಡೆಯಲು ಕಾನೂನಾತ್ಮಕ ತೊಡಕು ಎದುರಾಗಿದ್ದು, ಸ್ವತಃ ಮುಖ್ಯಮಂತ್ರಿಗಳೇ ನಿಯಮದ ಸುಳಿಯಲ್ಲಿ ಸಿಲುಕುವಂತಾಗಿದೆ.

ಸುಪ್ರೀಂ ಕೋರ್ಟ್‌ನ ಕಠಿಣ ಆದೇಶ ಏನು?

ಹೌದು ​ಈ ಸಮಸ್ಯೆಗೆ ಪ್ರಮುಖ ಕಾರಣ ಸುಪ್ರೀಂ ಕೋರ್ಟ್‌ನ ಕಠಿಣ ಆದೇಶ. ನ್ಯಾಯಾಲಯದ ನಿರ್ದೇಶನದನ್ವಯ, ಹೊಸದಾಗಿ ನಿರ್ಮಿಸುವ ಯಾವುದೇ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸಂಪರ್ಕ ಪಡೆಯಬೇಕಾದರೆ ಸ್ಥಳೀಯ ಸಂಸ್ಥೆಗಳಿಂದ ನೀಡಲ್ಪಡುವ 'ಸ್ವಾಧೀನಾನುಭವ ಪತ್ರ' (Occupancy Certificate OC) ಕಡ್ಡಾಯವಾಗಿದೆ. ಮುಖ್ಯಮಂತ್ರಿಗಳು 120×80 ವಿಸ್ತೀರ್ಣದ ಜಾಗದಲ್ಲಿ ಮೂರು ಅಂತಸ್ತಿನ ಬೃಹತ್ ಮನೆಯನ್ನು ನಿರ್ಮಿಸುತ್ತಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ಎರಡು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯ ಜೊತೆಗೆ ಕಡ್ಡಾಯವಾಗಿ ಸಲ್ಲಿಸಬೇಕಿದ್ದ ಓಸಿ (OC) ಪತ್ರವನ್ನು ಇನ್ನೂ ಸಲ್ಲಿಸದ ಕಾರಣ, ಅಧಿಕಾರಿಗಳು ನಿಯಮದಂತೆ ಕಾಯಂ ಸಂಪರ್ಕ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಡಿಸೆಂಬರ್‌ನಲ್ಲಿ ಗೃಹ ಪ್ರವೇಶಕ್ಕೆ ತಯಾರಿ:

​ಡಿಸೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಲು ಸಿಎಂ ಸಿದ್ದರಾಮಯ್ಯ ಸಕಲ ಸಿದ್ಧತೆ ನಡೆಸಿದ್ದಾರೆ. ಮನೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರೂ, ಓಸಿ ಪ್ರಮಾಣ ಪತ್ರದ ಕೊರತೆಯಿಂದಾಗಿ ಕಾಯಂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಹೀಗಾಗಿ, ಸದ್ಯಕ್ಕೆ ನಿರ್ಮಾಣ ಕಾಮಗಾರಿ ಮತ್ತು ಇತರ ಕೆಲಸಗಳಿಗಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಲಾಗಿದೆ. ರಾಜ್ಯದ ಜನರಿಗೆ ಬೆಳಕು ನೀಡಿದ ನಾಯಕನ ಹೊಸ ಮನೆಗೆ, ಗೃಹಪ್ರವೇಶದ ವೇಳೆಗೆ ಈ ತಾಂತ್ರಿಕ ಅಡಚಣೆ ನಿವಾರಣೆಯಾಗಿ ಕಾಯಂ ವಿದ್ಯುತ್ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.