ಕಂಬಳ ಕ್ರೀಡೆಯನ್ನ‌ ಅತ್ಯಂತ ಸಂತೋಷದಿಂದ‌ ಉದ್ಘಾಟನೆ ಮಾಡಿದ್ದೇನೆ. ಇದು ನಾನು ಎರಡನೇ ಬಾರಿ ಉದ್ಘಾಟನೆ ಮಾಡ್ತಿರೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ನ.25): ಕಂಬಳ ಕ್ರೀಡೆಯನ್ನ‌ ಅತ್ಯಂತ ಸಂತೋಷದಿಂದ‌ ಉದ್ಘಾಟನೆ ಮಾಡಿದ್ದೇನೆ. ಇದು ನಾನು ಎರಡನೇ ಬಾರಿ ಉದ್ಘಾಟನೆ ಮಾಡ್ತಿರೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕಂಬಳ ಉದ್ಘಾಟನೆ ಮಾಡಿದ ಬಳಿಕ, ಇಲ್ಲಿ ಯಾರೂ ಭಾಷಣ ಕೇಳೊಕೆ ಬಂದಿರೋರಲ್ಲ, ಕಂಬಳ ಕ್ರೀಡೆಯನ್ನ ನೋಡೋಕೆ ಬಂದಿರೋರು ಎನ್ನುತ್ತಲೇ ಮಾತು ಆರಂಭಿಸಿದ ಸಿಎಂ ಸಿದ್ದರಾಮಯ್ಯ, ಅಶೋಕ್ ರೈ, ಗುರು ಕಿರಣ್ ನನ್ನ ಬೇಟಿ ಆಗೋಕೆ‌ ಬಂದಾಗ , ಇಷ್ಟೊಂದು ಜನ‌ ಕಂಬಳ ವೀಕ್ಷಣೆ ಬರ್ತಾರೆ ಅಂತಾ ಅನ್ಕೊಂಡಿಲ್ಲ. ಅದಕ್ಕಾಗಿ ಅವರಿಗೆ ಈ ಕ್ರೀಡೆ ಉಡುಪಿ ಮಂಗಳೂರಿನಲ್ಲಿ ನಡೀ ಬೇಕು ಅಂತಾ ಹೇಳಿದ್ದೆ. ಆದರೆ ಕಂಬಳ ಸಮಿತಿಯವರು ಹೇಳಿದ್ರು ಲಕ್ಷಾಂತರ ಕರಾವಳಿ ಮಂದಿ ಬೆಂಗಳೂರಿನಲ್ಲಿ‌ ನೆಲೆಸಿದ್ದಾರೆ. ಬೆಂಗಳೂರಿನ ಕಂಬಳಕ್ಕೆ ರಾಜ್ಯದ ಮೂಲೆಯಿಂದ‌ ಜನ‌ ಬರ್ತಾರೆ ಅಂದಿದ್ರು. ಆಗ ನಾನೂ ಬರ್ತೇನೆ ಅಂದಿದ್ದೆ. ಬಹಳಷ್ಟು ಜನ ಕ್ರೀಡೆಯನ್ನ ನೋಡೋಕೆ ಬಂದಿದ್ದಾರೆ. ಇವತ್ತು ಬಹಳ ಆಶ್ಚರ್ಯ ಆಯ್ತು ಎಂದು ಸಂತೋಷ ವ್ಯಕ್ತಪಡಿಸಿದರು.

ರಾಜ್ಯ ರಾಜಧಾನಿಯಲ್ಲೂ ಕರಾವಳಿಯ ಕ್ರೀಡೆಯ ಕಂಪು..! ಪುನೀತ್-ರಾಜ್ ಹೆಸರಲ್ಲಿ ನಡೆಯುತ್ತೆ ಅದ್ಧೂರಿ ಕಂಬಳ..!

ಕಂಬಳ ಕರಾವಳಿ ಜನರ ಬಹಳ ಪುರಾತನವಾದ ಕಲೆ, ಜಾನಪದ ಕಲೆ ಇದು. ಅಶೋಕ್ ರೈ ನೇತೃತ್ವದಲ್ಲಿ ಕರಾವಳಿ ಜಾನಪದ ಕ್ರೀಡೆ ಸಿಲಿಕಾನ್ ಸಿಟಿಯಲ್ಲಿ ಪರಿಚಯವಾಗಿದೆ. ಎರಡು ಕರೆಯಲ್ಲಿ ಕಂಬಳ ಅದ್ಧೂರಿಯಾಗಿ ನಡೀತಾ ಇದೆ. ಕರಾವಳಿಯ ಬಹಳಷ್ಟು ಜನ ಈ ಕಲೆಯನ್ನ ಮೈಗೂಡಿಸಿಕೊಂಡಿದ್ದಾರೆ. ಅದಕ್ಕೆ ಇನ್ನಷ್ಟು ಮಂದಿ ಪ್ರೋತ್ಸಾಹ ನೀಡುತ್ತಾರೆ. ತಮಿಳುನಾಡಿನ ಜಲ್ಲಿಕಟ್ಟು ಕೋಣಗಳಿಗೆ ಹೆದರಿಸೋ ಕಲೆ, ಇಲ್ಲಿ ಕೋಣಗಳಿಗೆ ನೊಗ ಕಟ್ಟಿ ಓಡಿಸೋ ಕಲೆ. ಕೋಣ ಸಾಕೋದು ಕಷ್ಟಕರವಾದ ಕೆಲಸ. ಏಕೆಂದರೆ ಕೋಣಗಳನ್ನು ಸಾಕೋಕೆ ತಿಂಗಳಿಗೆ 15 ಲಕ್ಷ ಖರ್ಚು ಬರುತ್ತೆ. ಹಾಗಾದ್ರೆ ನೀವೆಲ್ಲಾ ಶ್ರೀಮಂತ್ರು ಅಂದಾಗ್ಹಾಯ್ತು ಎಂದು ಸಿಎಂ ಸಿದ್ದರಾಮಯ್ಯನವರು ನಸುನಕ್ಕರು.

ಬೆಂಗಳೂರು ಕಂಬಳದಲ್ಲಿ ಅಪ್ಪು ಸ್ಮೃತಿ: ಕಂಬಳ ಸಮಿತಿಯ ನಿರ್ಧಾರಕ್ಕೆ ಪುನೀತ್ ಅಭಿಮಾನಿಗಳು ಫುಲ್‌ ಖುಷಿ..!

ಇದೇ ವೇಳೆ ತುಳು ಭಾಷೆ ಬಗ್ಗೆ ಪ್ರಸ್ತಾಪ ಮಾಡಿದ ಸಿಎಂ ಸಿದ್ದರಾಮಯ್ಯನವರು, ಕರಾವಳಿ ಜನರು ಜಗತ್ತಿನ ಯಾವುದೇ ಮೂಲೆಯಲ್ಲಿ ಸಿಕ್ಕರೂ ಅವರು ತುಳುವಿನಲ್ಲೆ ಮಾತು ಪ್ರಾರಂಭಿಸುತ್ತಾರೆ, ತುಳುವೇ ಮಾತನಾಡುತ್ತಾರೆ. ನಾನು ಈ ಬಗ್ಗೆ ಕನ್ನಡ ಸಂಸ್ಕೃತಿ ಸಚಿವರ ಜೊತೆ ಮಾತಾಡಿ ಇದನ್ನು ರಾಜ್ಯದ ಎರಡನೇ ಭಾಷೆಯಾಗಿ ಮಾಡುತ್ತೇನೆ. ಹಿಂದಿನ ಮಿನಿಸ್ಟರ್ ನಿಮ್ಮ ಭಾಗದವರೇ ಆದರೂ ಅದನ್ನು ಮಾಡಲಿಲ್ಲ. ಆದರೆ ನಾವು ಮಾಡುತ್ತೇವೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯನವರು ಮಾಜಿ ಸಚಿವ ಸುನಿಲ್ ಕುಮಾರ್‌ಗೆ ಟಾಂಗ್ ನೀಡಿದರು.