ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವದಂತಿಯ ಹಿನ್ನೆಲೆಯಲ್ಲಿ, ಅವರ ಕಚೇರಿ ಸಿಬ್ಬಂದಿ ಭಾವೋದ್ವೇಗದಿಂದ ಕಣ್ಣೀರಿಟ್ಟು ರಾಜೀನಾಮೆ ನೀಡದಂತೆ ಮನವಿ ಮಾಡಿದರು. ಇದೇ ವೇಳೆ, ಹಿರಿಯ ಸಚಿವರು ಸಹ ರಾಜೀನಾಮೆ ನಿರ್ಧಾರವನ್ನು ತಡೆಹಿಡಿದು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಡ ಹೇರುತ್ತಿದ್ದಾರೆ.

ಬೆಂಗಳೂರು (ಮೇ.27): ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಅಧಿಕೃತಗೊಳ್ಳುತ್ತಿದ್ದಂತೆ, ಇಷ್ಟು ದಿನಗಳ ಕಾಲ ರಾಜಕೀಯ ವಲಯದಲ್ಲಿದ್ದ ಆತಂಕ ಈಗ ಸಿಎಂ ಕಚೇರಿಯ ನೌಕರರಲ್ಲಿ ಭಾವುಕತೆಗೆ ಕಾರಣವಾಗಿದೆ. ಇಂದು ಸಂಜೆ ಜಾತಿಗಣತಿ ವರದಿ ಸ್ವೀಕರಿಸಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ಸಿಬ್ಬಂದಿ ಕಣ್ಣೀರು ಹಾಕಿದ ಘಟನೆ ಜರುಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ರಾಜೀನಾಮೆ ನೀಡಬೇಡಿ ಸರ್ ಪ್ಲೀಸ್' ಕಣ್ಣೀರಿಟ್ಟ ಸಿಬ್ಬಂದಿಗೆ ಸಿಎಂ ಕೈಸನ್ನೆ ಸಮಾಧಾನ!

ಇಂದು ಸಂಜೆ ನಿಗದಿಯಂತೆ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿಗಣತಿ ವರದಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಆಗಮಿಸಿದರು. ಸಿಎಂ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಮುಖ್ಯಮಂತ್ರಿ ಕಚೇರಿಯ ನೌಕರರು ಹಾಗೂ ಪ್ರಮುಖವಾಗಿ ಗುತ್ತಿಗೆ (Contract) ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಿದ್ದರಾಮಯ್ಯ ಅವರನ್ನು ನೋಡಿ ತಡೆಯಲಾರದೆ ಕಣ್ಣೀರು ಹಾಕಲು ಆರಂಭಿಸಿದರು.

"ಸರ್, ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ನೀಡಬೇಡಿ ಸರ್ ಪ್ಲೀಸ್..." ಎಂದು ಸಿಬ್ಬಂದಿ ಕಣ್ಣೀರಿಡುತ್ತಾ ಮುಖ್ಯಮಂತ್ರಿಗಳ ಮುಂದೆ ಕೈಮುಗಿದು ಬೇಡಿಕೊಂಡರು. ಸಿಬ್ಬಂದಿಯ ಈ ಭಾವುಕತೆಯನ್ನು ಕಂಡು ಕೊಂಚ ಭಾವುಕರಾದ ಸಿಎಂ ಸಿದ್ದರಾಮಯ್ಯ, ತಕ್ಷಣವೇ ತಮ್ಮ ವಿಶಿಷ್ಟ ಶೈಲಿಯ ಕೈಸನ್ನೆಯ ಮೂಲಕವೇ ಸಮಾಧಾನಪಡಿಸಿ, ಧೈರ್ಯ ತುಂಬಿ ಮುಂದೆ ಸಾಗಿದರು. ಸಿಎಂ ಕಚೇರಿ ಇತಿಹಾಸದಲ್ಲಿ ಇಂತಹದ್ದೊಂದು ಭಾವುಕ ನಡೆ ಕಂಡುಬಂದಿರುವುದು ಇದೇ ಮೊದಲು ಎನ್ನಲಾಗಿದೆ.

'ನಾಳೆ ರಾಜೀನಾಮೆ ಕೊಡಬೇಡಿ': ಸಚಿವರ ಒತ್ತಡ

ಇನ್ನೊಂದೆಡೆ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರವನ್ನು ತಡೆಯಲು ಸಚಿವರು ಹಾಗೂ ಶಾಸಕರು ಕೊನೆಕ್ಷಣದ ಭೀಕರ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಸಚಿವರ ವಲಯ ಈಗ ಸಿಎಂ ಮೇಲೆ ತೀವ್ರ ಒತ್ತಡ ಹೇರಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ಒಡನಾಡಿಗಳಾಗಿರುವ ಸಚಿವ ಬೈರತಿ ಸುರೇಶ್ ಮತ್ತು ಹಿರಿಯ ಸಚಿವ ಕೆ.ಜೆ. ಜಾರ್ಜ್ ಅವರು ‘ಕಾವೇರಿ’ ನಿವಾಸಕ್ಕೆ ಧಾವಿಸಿ, ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಸಿಎಂ ಮನವೊಲಿಸಲು ಇಬ್ಬರೂ ಸಚಿವರು ಅಂತಿಮ ಹಂತದ ರಣತಂತ್ರ ಹೂಡಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲೇ ತೀರ್ಮಾನವಾಗಲಿ: "ನೀವು ಹೈಕಮಾಂಡ್ ಮಾತಿಗೆ ಮಣಿದು ನಾಳೆಯೇ (ಗುರುವಾರ) ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು. ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಕರೆಯೋಣ. ಶಾಸಕರ ಅಭಿಪ್ರಾಯ ಏನಿದೆ ಎಂಬುದು ಆ ಸಭೆಯಲ್ಲೇ ತೀರ್ಮಾನವಾಗಲಿ. ಅಲ್ಲಿಯವರೆಗೂ ಯಾವುದೇ ಅವಸರದ ನಿರ್ಧಾರ ಬೇಡ" ಎಂದು ಸಚಿವರು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಬಲವಾದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

"ರಾಜೀನಾಮೆ ಕೊಟ್ಟು ಹೋಗ್ತಾ ಇದ್ದೀರಿ ನಮ್ಮದೇನು?"| Siddaramaiah Resignation Politics | Suvarna Party Rounds