ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿ ಬಂದಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಸಚಿವರು ರಾಜೀನಾಮೆ ನೀಡದಂತೆ ಒತ್ತಾಯಿಸಿದರೂ, ಸಿಎಂ ಸಿದ್ದರಾಮಯ್ಯ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ.
ಬೆಂಗಳೂರು (ಮೇ.27): ಕರ್ನಾಟಕ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ರಾಜಕೀಯ ನಾಟಕೀಯ ಬೆಳವಣಿಗೆಗಳು ಜರುಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಹೆಚ್ಚೂ ಕಡಿಮೆ ಅಧಿಕೃತವಾಗಿದೆ. ಇದರ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರು ಮಾಧ್ಯಮಗಳ ಮುಂದೆ ನಿಂತು, "ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೆಹಲಿಯಲ್ಲಿ ತಿಳಿಸಿ ಬಂದಿದ್ದಾರೆ" ಎಂದು ಸ್ಫೋಟಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ದೇಶಪಾಂಡೆ ಬಿಚ್ಚಿಟ್ಟ ಮಹಾ ರಹಸ್ಯ: "ನಾವು ರಾಜೀನಾಮೆ ಕೊಡಬೇಡಿ ಅಂದ್ವಿ!"
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಯ ನಂತರ ಅತ್ಯಂತ ಗಂಭೀರವಾಗಿ ಮಾತನಾಡಿದ ಹಿರಿಯ ನಾಯಕ ಆರ್.ವಿ. ದೇಶಪಾಂಡೆ, ಮೊದಲ ಬಾರಿಗೆ ಅಧಿಕೃತವಾಗಿ ಸಿಎಂ ಅವರ ನಿರ್ಧಾರವನ್ನು ಹೊರಹಾಕಿದರು. ಮುಖ್ಯಮಂತ್ರಿಯವರು ದೆಹಲಿಯಿಂದ ಬಂದ ಮೇಲೆ ನಮ್ಮನ್ನು ಭೇಟಿಯಾದಾಗ, 'ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ' ಅಂತ ಹೇಳಿ ಬಂದಿದ್ದಾರೆ. ನಾಳೆಯೇ (ಗುರುವಾರ) ರಾಜೀನಾಮೆ ಕೊಡ್ತೀವಿ ಅಂತ ಸಿಎಂ ನಮಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ನಾವುಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಅಂತ ಬಲವಂತವಾಗಿ ಹೇಳಿದ್ದೇವೆ" ಎಂದು ದೇಶಪಾಂಡೆ ತಿಳಿಸಿದ್ದಾರೆ. ಇದುವರೆಗೆ ಕೇವಲ ಊಹಾಪೋಹವಾಗಿದ್ದ ರಾಜೀನಾಮೆ ಸುದ್ದಿಗೆ ದೇಶಪಾಂಡೆ ಅವರ ಈ ಹೇಳಿಕೆ ಈಗ ಅಧಿಕೃತ ಮುದ್ರೆ ಒತ್ತಿದಂತಾಗಿದೆ.
ಸಿಎಂ ಸಿದ್ದರಾಮಯ್ಯ ಮೌನ: ಆತಂಕ ಹಂಚಿಕೊಂಡ ಕಾನೂನು ಸಚಿವ ಎಚ್.ಕೆ. ಪಾಟೀಲ್
ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ರಾಜ್ಯ ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು ಮಾಧ್ಯಮಗಳ ಎದುರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಆದರೆ, ಸಿದ್ದರಾಮಯ್ಯ ಅವರ ನಿಗೂಢ ಮೌನ ಸಚಿವರನ್ನೂ ಕಂಗಾಲು ಮಾಡಿದೆ.
ಕಳೆದ ಕೆಲವು ಗಂಟೆಗಳಿಂದ ಮಾಧ್ಯಮಗಳಲ್ಲಿ ಸಿಎಂ ರಾಜೀನಾಮೆ ಕುರಿತು ಬರುತ್ತಿರುವ ಸುದ್ದಿಗಳನ್ನು ನೋಡಿ ನಮಗೂ ಸಹಜವಾಗಿಯೇ ತೀವ್ರ ಕಳವಳ ಮತ್ತು ಆತಂಕ ಉಂಟಾಯಿತು. ಇದೇ ಹಿನ್ನೆಲೆಯಲ್ಲಿ ನಾವು ಇವತ್ತು ನೇರವಾಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಬಂದಿದ್ದೆವು ಎಂದಿದ್ದಾರೆ.
"ನಾವು ಸಿಎಂ ಅವರನ್ನು ಭೇಟಿ ಮಾಡಿ ನಮ್ಮ ಮನದಲ್ಲಿದ್ದ ಆತಂಕ, ಕಳವಳ ಹಾಗೂ ನಮ್ಮ ಕಳಕಳಿಯ ಮನವಿಯನ್ನು ಅವರ ಮುಂದೆ ಸುದೀರ್ಘವಾಗಿ ಇಟ್ಟಿದ್ದೇವೆ. ರಾಜೀನಾಮೆ ನೀಡದಂತೆ ಒತ್ತಾಯಿಸಿದ್ದೇವೆ. ಆದರೆ, ನಮ್ಮ ಇಷ್ಟೂ ಮಾತುಗಳನ್ನು ಕೇಳಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಸೈಲೆಂಟ್ ಆಗಿದ್ದರು. ಅವರು ನಮ್ಮ ಮುಂದೆ ಒಂದು ಮಾತನ್ನೂ ಆಡದೆ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ" ಎಂದು ಎಚ್.ಕೆ. ಪಾಟೀಲ್ ಆತಂಕ ವ್ಯಕ್ತಪಡಿಸಿದರು.
ರಾಜೀನಾಮೆ ಕ್ಷಣಗಣನೆ ಆರಂಭ
ಆರ್.ವಿ. ದೇಶಪಾಂಡೆ ಅವರ ಸ್ಪಷ್ಟ ಉಲ್ಲೇಖ ಮತ್ತು ಎಚ್.ಕೆ. ಪಾಟೀಲ್ ಅವರು ವಿವರಿಸಿದ ಸಿಎಂ ಅವರ ಮೌನವನ್ನು ಗಮನಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ತೀರ್ಮಾನಕ್ಕೆ ಸಂಪೂರ್ಣವಾಗಿ ತಲೆಬಾಗಿದ್ದಾರೆ ಮತ್ತು ನಾಳೆ ಜಂಟಿ ಸುದ್ದಿಗೋಷ್ಠಿಯ ಬಳಿಕ ರಾಜೀನಾಮೆ ರಾಜಭವನ ತಲುಪುವುದು ಖಚಿತ ಎಂಬುದು ಸಾಬೀತಾಗಿದೆ.


