ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಭವನದ ಭೇಟಿಗೆ ಸಮಯ ಕೋರಿದ್ದು, ಶೀಘ್ರದಲ್ಲೇ ರಾಜೀನಾಮೆ ನೀಡುವ ನಿರೀಕ್ಷೆಯಿದೆ. ರಾಜೀನಾಮೆಗೂ ಮುನ್ನ, ಅವರು ನಿರ್ಣಾಯಕ ಜಾತಿಗಣತಿ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಲಿದ್ದು, ಇದು ಮಹತ್ವದ ರಾಜಕೀಯ ನಡೆಯೆಂದು ಪರಿಗಣಿಸಲಾಗಿದೆ.
ಬೆಂಗಳೂರು (ಮೇ.27): ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಈಗ ಕೇವಲ ಕೆಲವೇ ಗಂಟೆಗಳ ಅಧಿಕೃತ ಪ್ರಕ್ರಿಯೆಯಾಗಿ ಬಾಕಿ ಉಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಇದೀಗ ಅಧಿಕೃತವಾಗಿ ಲೋಕಭವನದ (ರಾಜಭವನ) ಭೇಟಿಗೆ ಸಮಯ ಕೋರಿ ಮಾಹಿತಿ ರವಾನೆಯಾಗಿದೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದ ಮಹಾ ಪಲ್ಲಟಕ್ಕೆ ಅಂತಿಮ ಮುದ್ರೆ ಒತ್ತಿದೆ.

ಲೋಕಭವನದ ಸಮಯ ಕೇಳಿದ ಸಿಎಂ: ನಿಖರ ಸಮಯ ಸಸ್ಪೆನ್ಸ್!
ಮುಖ್ಯಮಂತ್ರಿಗಳ ಸಚಿವಾಲಯದಿಂದ ಲೋಕಭವನಕ್ಕೆ ಈಗಾಗಲೇ ಅಧಿಕೃತ ಸಂದೇಶ ರವಾನೆಯಾಗಿದ್ದು, ನಾಳೆ (ಗುರುವಾರ) ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಅವರು ಲೋಕಭವನಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಭೇಟಿಯ ನಿಖರವಾದ ಸಮಯವನ್ನು ಸಿಎಂ ಕಚೇರಿ ಇನ್ನು ಬಹಿರಂಗಪಡಿಸದೆ ನಿಗೂಢವಾಗಿಟ್ಟಿದೆ. ನಾಳೆ ಬೆಳಗ್ಗೆ ಕರೆಯಲಾಗಿರುವ ಜಂಟಿ ಸುದ್ದಿಗೋಷ್ಠಿಯ ಬೆನ್ನಲ್ಲೇ ಮಧ್ಯಾಹ್ನ ಲೋಕಭವನಕ್ಕೆ ತೆರಳಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಬಲವಾಗಿ ಚರ್ಚೆಯಾಗುತ್ತಿದೆ. ಈ ನಡುವೆ ಸಿಎಂ ನಿವಾಸಕ್ಕೆ ಸಚಿವ ಚಲುವರಾಯಸ್ವಾಮಿ ಅವರು ತುರ್ತು ಆಗಮನ ಮಾಡಿದ್ದು, ಸಮಾಲೋಚನೆ ನಡೆಸುತ್ತಿದ್ದಾರೆ.
ಹೋಗುವ ಮುನ್ನ ‘ಜಾತಿಗಣತಿ ಅಸ್ತ್ರ’ ಪ್ರಯೋಗಿಸಲಿರುವ ಸಿದ್ದರಾಮಯ್ಯ!
ತಮ್ಮ ರಾಜೀನಾಮೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕ ಎನಿಸಿರುವ ‘ಜಾತಿಗಣತಿ ವರದಿ’ಯನ್ನು ಅಧಿಕೃತವಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಆಗಮಿಸಲಿದ್ದು, ಹಿಂದುಳಿದ ವರ್ಗಗಳ ಆಯೋಗದಿಂದ ವರದಿಯನ್ನು ಪಡೆದುಕೊಳ್ಳಲಿದ್ದಾರೆ. ತನ್ಮೂಲಕ ತಮ್ಮ ಆಡಳಿತದ ಕೊನೆಯ ಕ್ಷಣದಲ್ಲೂ ಸಾಮಾಜಿಕ ನ್ಯಾಯದ ಪರಮೋಚ್ಚ ಅಸ್ತ್ರವನ್ನು ಪ್ರಯೋಗಿಸಿ ರಾಷ್ಟ್ರ ರಾಜಕಾರಣಕ್ಕೆ ಹೆಜ್ಜೆ ಇಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ರಾಜಕೀಯ ಬದಲಾವಣೆಗೂ ವರದಿಗೂ ಸಂಬಂಧವಿಲ್ಲ: ಆಯೋಗದ ಅಧ್ಯಕ್ಷರ ಸ್ಪಷ್ಟನೆ
ಈ ಕುರಿತು ಮಾಹಿತಿ ನೀಡಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ್, ಸಿಎಂ ಭೇಟಿಗೆ ಕಾಲಾವಕಾಶ ಸಿಕ್ಕಿರುವುದನ್ನು ಖಚಿತಪಡಿಸಿದ್ದಾರೆ. "ನಾವು ವರದಿ ಸಲ್ಲಿಸಲು ಸರ್ಕಾರಕ್ಕೆ ಅನುಮತಿ ಕೇಳಿದ್ದೆವು. ಸರ್ಕಾರ ನಮಗೆ ಇವತ್ತು ಸಮಯ ನಿಗದಿ ಮಾಡಿದೆ. ಹಾಗಾಗಿ ಇಂದು ಸಂಜೆ 5 ಗಂಟೆಗೆ ವರದಿಯನ್ನು ಸಲ್ಲಿಸಲಿದ್ದೇವೆ. ಸಿಎಂ ಅವಕಾಶ ಕೊಟ್ಟರೆ ಅವರಿಗೆ ನೀಡಲಿದ್ದೇವೆ, ಇಲ್ಲವಾದರೆ ಸರ್ಕಾರಕ್ಕೆ ಹಸ್ತಾಂತರಿಸಲಿದ್ದೇವೆ. ಈ ವರದಿ ಒಂದು ತಿಂಗಳ ಹಿಂದೆಯೇ ಸಿದ್ಧವಾಗಿತ್ತು. ಆದರೆ ಆಯೋಗದ ಸದಸ್ಯರು ಲಭ್ಯವಿಲ್ಲದ ಕಾರಣ ಸಲ್ಲಿಕೆ ಕೊಂಚ ತಡವಾಯಿತು."
"ಇವತ್ತು ರಾಜ್ಯ ರಾಜಕಾರಣದಲ್ಲಿ ಆಕಸ್ಮಿಕವಾಗಿ ದೊಡ್ಡ ಬದಲಾವಣೆಗಳು ಆಗುತ್ತಿವೆ. ಆದರೆ, ನಾವು ವರದಿ ಸಲ್ಲಿಸುತ್ತಿರುವುದಕ್ಕೂ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬದಲಾವಣೆಗಳಿಗೂ ಯಾವುದೇ ಸಂಬಂಧವಿಲ್ಲ" ಎಂದು ಮಧುಸೂದನ್ ಆರ್. ನಾಯ್ಕ್ ಸ್ಪಷ್ಟಪಡಿಸಿದ್ದಾರೆ.


