ಅರಣ್ಯ ಇಲಾಖೆಗೆ ತನಿಖಾ ಅಧಿಕಾರವಿರುವುದರಿಂದ ಸಿಐಡಿಯ ಅರಣ್ಯ ವಿಭಾಗಕ್ಕೆ ಹೆಚ್ಚು ಕೆಲಸವಿಲ್ಲ ಎಂಬ ಕಾರಣ ನೀಡಿ, ಈ ವಿಭಾಗವನ್ನು ಮುಚ್ಚಲು ರಾಜ್ಯ ಪೊಲೀಸ್ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಇದರ ಹಿಂದೆ ಟಿಂಬರ್ ಮಾಫಿಯಾದ ಒತ್ತಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು (ಮೇ.27): ಹಲವು ತಾಂತ್ರಿಕ ಕಾರಣಗಳಿಂದಾಗಿ ಸಿಐಡಿಯ ಅರಣ್ಯ ವಿಭಾಗವನ್ನು ಬಂದ್ ಮಾಡುವ ಕುರಿತು ರಾಜ್ಯಪೊಲೀಸ್ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿರತೆ, ಹುಲಿ, ಹಂದಿ ಸೇರಿ ವನ್ಯಜೀವಿಗಳ ಅಕ್ರಮ ಬೇಟೆ, ಸಾಗಣೆಗೆ ಪ್ರಕರಣ ದಾಖಲಿಸುವ ಹಾಗೂ ತನಿಖೆ ನಡೆಸುವ ಕುರಿತು ಹಲವು ಅಧಿಕಾರಗಳನ್ನು ಅರಣ್ಯ ಇಲಾಖೆಯೇ ಹೊಂದಿರುವುದರಿಂದ ಸಿಐಡಿಯ ಅರಣ್ಯ ವಿಭಾಗದ ಪೊಲೀಸರಿಗೆ ಹೆಚ್ಚಿನ ಕೆಲಸ ಇರುವುದಿಲ್ಲ. ಇದರಿಂದಾಗಿ ಈ ವಿಭಾಗವನ್ನು ಬಂದ್ ಮಾಡುವುದು ಸೂಕ್ತ ಎಂಬ ಅಭಿಪ್ರಾಯಪಟ್ಟು ರಾಜ್ಯ ಪೊಲೀಸರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಸರ್ಕಾರ ಈ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಮೂಲಗಳ ಪ್ರಕಾರ, ಒಂದು ಕೋಮಿನ ಮಾಲೀಕರೇ ಹೆಚ್ಚಿರುವ ನಗರದ ಟಿಂಬರ್ ಮಾಫಿಯಾ ಪೊಲೀಸ್ ಇಲಾಖೆಯ ಮೇಲೆ ಒತ್ತಡ ತಂದು ಈ ಪ್ರಸ್ತಾವನೆ ಸಲ್ಲಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ಟಿಂಬರ್ ವ್ಯಾಪಾರಿಗಳು ಲೈಸೆನ್ಸ್ ಇಲ್ಲದೆ, ವ್ಯವಹಾರ ನಡೆಸುತ್ತಿದ್ದು ಆಗಾಗ ಸಿಐಡಿ ಅರಣ್ಯ ವಿಭಾಗದ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸುವುದರಿಂದ ಅವರ ವ್ಯವಹಾರಕ್ಕೆ ಅಡ್ಡಿಯಾಗಿದೆ ಎನ್ನಲಾಗಿದೆ.

ಆದರೆ, ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾವನೆ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ ಎನ್ನಲಾಗಿದೆ.