ನಮ್ಮದು ಬಸವ ಪಥದ ಸರ್ಕಾರ ಎಂದ ಬೊಮ್ಮಾಯಿ

- ನಮಗೆ ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆ ದೊಡ್ಡಪ್ಪ

- ಯಾರೋ ಭವಿಷ್ಯ ಬದಲಿಸ್ತಾರೆ ಎಂಬ ಭ್ರಮೆ ಬೇಡ

- ಬಸವಶ್ರೀ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ

cm basavaraj bommai Says Our government Moves on Basava patha san

ಬೆಂಗಳೂರು (ಮೇ. 8):  ‘ಕಾಯಕದಲ್ಲಿಯೇ ಸ್ವರ್ಗ ಕಾಣುವ ಮತ್ತು ಸೈದ್ಧಾಂತಿಕ, ವೈಜ್ಞಾನಿಕ ಚಿಂತನೆಯ ಸಮ ಸಮಾಜವನ್ನು ಕ್ರಾಂತಿಯೋಗಿ ಬಸವಣ್ಣ ನಿರ್ಮಾಣ ಮಾಡಿದ್ದರು. ಇದೇ ಗುರಿಯೊಂದಿಗೆ ರಾಜ್ಯ ಸರ್ಕಾರವು ಬಸವ ಪಥದಲ್ಲಿಯೇ ಮುನ್ನಡೆಯುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (cm basavaraj bommai) ಹೇಳಿದರು.

ಶನಿವಾರ ಬಸವ ವೇದಿಕೆ (Basava Vedike) ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬಸವ ಜಯಂತಿ (Basava Jayanti) ಮತ್ತು ‘ಬಸವಶ್ರೀ’ ಹಾಗೂ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶವನ್ನು ರೈತರು ಮತ್ತು ಕಾರ್ಮಿಕರು ಕಟ್ಟುತ್ತಿದ್ದಾರೆ. ಕರ್ತವ್ಯಕ್ಕೂ ಕಾಯಕಕ್ಕೂ ವ್ಯತ್ಯಾಸವಿಲ್ಲ. ಕಾಯಕವನ್ನು ನಿಷ್ಠೆಯಿಂದ ಮಾಡಿದರೆ ಅದೇ ಪೂಜೆ ಹಾಗೂ ಸ್ವರ್ಗ ಎನ್ನುವುದು ಬಸವಣ್ಣನ ಚಿಂತನೆಯಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ದುಡ್ಡೇ ದೊಡ್ಡಪ್ಪ ಎಂಬ ನಾಣ್ಣುಡಿಯನ್ನು ‘ದುಡಿಮೆಯೇ ದೊಡ್ಡಪ್ಪ’ ಎಂಬುದಾಗಿ ಸಾಧಿಸಿ ತೋರಿಸುತ್ತಿದೆ’ ಎಂದು ಭಾವುಕರಾಗಿ ನುಡಿದರು.

‘ಬಸವಣ್ಣ ಇಂದಿನ ಎಲ್ಲಾ ಸಮಸ್ಯೆಗಳಿಗೂ ತಮ್ಮ ವಚನದಲ್ಲಿ ಪರಿಹಾರ ನೀಡಿದ್ದಾರೆ. ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ ಎಂದು ಬದುಕಿನ ಅರ್ಥವನ್ನು ಹೇಳಿಕೊಟ್ಟಿದ್ದಾರೆ. ದುಡಿಮೆ ಮಾಡಿ, ಹಂಚಿ ತಿನ್ನಬೇಕು ಎನ್ನುವ ತತ್ವವಿದೆ. ಎಲ್ಲಿಯೂ ಶೇಖರಣೆ ಮಾಡಬೇಕು ಎಂದು ಹೇಳಿಲ್ಲ. ಆಧ್ಯಾತ್ಮಿಕವಲ್ಲದೆ, ಆರ್ಥಿಕ, ಸಾಮಾಜಿಕ, ಚಿಂತನೆಯನ್ನು ಮಾಡಿದ್ದಾರೆ. ಬಸವಣ್ಣ ಅವರು ದೊಡ್ಡ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದು, ಬಹು ದೊಡ್ಡ ಮಾನವತಾವಾದಿ’ ಎಂದರು.

ಆತ್ಮಾವಲೋಕನ ಅಗತ್ಯ: ‘ಬಸವಣ್ಣ ಅವರ ವಚನಗಳ ಆಚರಣೆಯಲ್ಲಿ ನಾವು ಎಷ್ಟುಹಿಂದುಳಿದಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಬಸವಣ್ಣ ಇಂದಿಗೂ ಪ್ರಸ್ತುತ ಎನ್ನುತ್ತೇವೆ. ಅಂದರೆ, ಅಸಮಾನತೆ, ಲಿಂಗಭೇದ, ಮೂಢನಂಬಿಕೆ ವಿರುದ್ಧ ಅವರು ಮಾಡಿದ ಹೋರಾಟ, ಬಸವಣ್ಣನವರು ಮಾಡಿದ್ದ ವೈಚಾರಿಕ ಕ್ರಾಂತಿ ಎಲ್ಲವೂ ಪ್ರಸ್ತುತ. 800 ವರ್ಷಗಳಾದರೂ ನಾವಿನ್ನೂ ಅದೇ ಸ್ಥಾನದಲ್ಲಿ ಇದ್ದೇವೆ ಎಂದರೆ ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ. ಬಸವಣ್ಣನವರ ಅನುಯಾಯಿಗಳು ಈ ಬಗ್ಗೆ ಹೆಚ್ಚಿನ ವಿಚಾರ ಮಾಡಬೇಕಿದೆ. ಬಸವಣ್ಣನವರ ವೈಚಾರಿಕ ಚಿಂತನೆಯನ್ನು ನಾವು ಸಮಾಜದಲ್ಲಿ ಆಚರಣೆಗೆ ತರುವಂಥ ಪ್ರಯತ್ನಗಳ ಕಾರ್ಯಕ್ರಮ ರೂಪಿಸುವ ಕಾಲ ಬಂದಿದೆ’ ಎಂದರು.

‘ಹಲವಾರು ಕಂದಾಚಾರಗಳನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಅದು ಸಮಯದ ವ್ಯರ್ಥವೂ ಹೌದು. ಮಾನಸಿಕ ವೇದನೆಯೂ ಹೌದು. ನಮ್ಮ ಭವಿಷ್ಯ, ಚಿಂತನೆ, ಬದುಕನ್ನು ನಾವು ನಿಯಂತ್ರಣ ಮಾಡಬೇಕು. ಇನ್ನೊಬ್ಬರ ಕೈಗೆ ಕೊಡುವುದು ಸರಿಯಲ್ಲ. ಯಾರೋ ಬಂದು ಭವಿಷ್ಯ ಬದಲಾಯಿಸುತ್ತಾರೆ ಎಂಬ ಭ್ರಮೆ ಇರಬಾರದು. ಇದು ಬಸವಣ್ಣ ಅವರ ಚಿಂತನೆ. ಅವರು ಮಧ್ಯವರ್ತಿಗಳನ್ನು ದೂರ ಮಾಡಿ, ಅತ್ಯಂತ ಕ್ಲಿಷ್ಟವಾದ ಚಿಂತನೆಯನ್ನು ಕನ್ನಡ ಭಾಷೆಯಲ್ಲಿ ಸರಳವಾದ ವಚನಗಳ ಮೂಲಕ ಹೇಳಿದ್ದಾರೆ’ ಎಂದು ತಿಳಿಸಿದರು

ಲೋಕಾ ಬಲಗೊಳಿಸಲು ಚಿಂತನೆ ಎಂದ ಗೋವಿಂದ ಕಾರಜೋಳ

ಕಾರ್ಯಕ್ರಮದಲ್ಲಿ ಸುತ್ತೂರು ವೀರ ಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಚಿವ ವಿ.ಸೋಮಣ್ಣ, ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ, ಷಡಕ್ಷರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಆಡಳಿತ ಬಿಗಿ ನಂತರ ಈಗ ಪಕ್ಷ ಸಂಘಟನೆ!

ಪ್ರಶಸ್ತಿ ಪ್ರದಾನ : ಬಸವ ವೇದಿಕೆ ಕೊಡ ಮಾಡುವ ಬಸವಶ್ರೀ ಪ್ರಶಸ್ತಿಯನ್ನು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿವಿಯ ಕುಲಾಧಿಪತಿ ಡಾ.ಎಚ್‌.ಆರ್‌.ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಬೀದರ್‌ ಜಿಲ್ಲೆಯ ಬಸವಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ವಿತರಿಸಿದರು.


ಕಾಯಕ ನಿಷ್ಠೆಯೇ ಪೂಜೆ, ಸ್ವರ್ಗ
ದೇಶವನ್ನು ರೈತರು ಮತ್ತು ಕಾರ್ಮಿಕರು ಕಟ್ಟುತ್ತಿದ್ದಾರೆ. ಕರ್ತವ್ಯಕ್ಕೂ ಕಾಯಕಕ್ಕೂ ವ್ಯತ್ಯಾಸವಿಲ್ಲ. ಕಾಯಕವನ್ನು ನಿಷ್ಠೆಯಿಂದ ಮಾಡಿದರೆ ಅದೇ ಪೂಜೆ ಹಾಗೂ ಸ್ವರ್ಗ ಎನ್ನುವುದು ಬಸವಣ್ಣನ ಚಿಂತನೆಯಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ದುಡ್ಡೇ ದೊಡ್ಡಪ್ಪ ಎಂಬ ನಾಣ್ಣುಡಿಯನ್ನು ‘ದುಡಿಮೆಯೇ ದೊಡ್ಡಪ್ಪ’ ಎಂಬುದಾಗಿ ಸಾಧಿಸಿ ತೋರಿಸುತ್ತಿದೆ.

- ಬಸವರಾಜ ಬೊಮ್ಮಾಯಿ ಸಿಎಂ

Latest Videos
Follow Us:
Download App:
  • android
  • ios