- ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದ ಕಾಂಗ್ರೆಸ್- ಲೋಕಾಯುಕ್ತ ಸ್ಥಾನಕ್ಕೆ ಎಸಿಬಿಯನ್ನು ತಂದಿತ್ತು- ಮತ್ತೆ ಲೋಕಾಯುಕ್ತಕ್ಕೆ ಶಕ್ತಿ ತುಂಬುವ ಕೆಲಸ ನಡೆದಿದೆ 

ಬಾಗಲಕೋಟೆ (ಮೇ. 7): ರಾಜ್ಯದಲ್ಲಿ ಲೋಕಾಯುಕ್ತವನ್ನು (lokayukta ) ಬಲಪಡಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತೆ ನಡೆಸುತ್ತಿರುವುದಾಗಿ ಸಚಿವ ಗೋವಿಂದ ಕಾರಜೋಳ (govind karjol) ತಿಳಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿಯನ್ನು ಅಸ್ತಿತ್ವಕ್ಕೆ ತಂದು ಹಗರಣಗಳನ್ನೆಲ್ಲ ಮುಚ್ಚಿಹಾಕಲು ಪ್ರಯತ್ನಿಸಿತ್ತು. ಈಗ ಮತ್ತೆ ಲೋಕಾಯುಕ್ತಕ್ಕೆ ಶಕ್ತಿ ತುಂಬಿಸುವ ಕೆಲಸವನ್ನು ಮಾಡಲು ಸರ್ಕಾರ ಯೋಚಿಸುತ್ತಿದ್ದು, ಈ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವ ಕಾರಜೋಳ ತಿಳಿಸಿದರು.

ಲೋಕಾ ದುರ್ಬಲಗೊಳಿಸಿದ್ದಕ್ಕೇ ಭ್ರಷ್ಟತೆ ಹೆಚ್ಚಳ-ಮೊಯ್ಲಿ
ಚಿಕ್ಕಬಳ್ಳಾಪುರ:
ರಾಜ್ಯದಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಬಳಿಕವೇ ಭ್ರಷ್ಟಾಚಾರ (corruption) ತುಂಬಿ ತುಳಕುತ್ತಿದೆ ಎಂದು ಹೇಳುವ ಮೂಲಕ ಲೋಕಾಯುಕ್ತಕ್ಕೆ ಇತಿಶ್ರೀ ಹಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former Chief minister siddaramaiah) ಅವರನ್ನು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ (Veerappa Moily) ಪರೋಕ್ಷವಾಗಿ ಟೀಕಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಲೋಕಾಯುಕ್ತವನ್ನು ಪುನರ್‌ ಸ್ಥಾಪಿಸುವುದಾಗಿ ಭರವಸೆ ನೀಡಿದರು.

ಇದೇವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ಹರಿಹಾಯ್ದ ಅವರು, ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಅವರಿಗೆ ಯಾವ ಮಂತ್ರಿ, ಶಾಸಕರ ಮೇಲೂ ಹತೋಟಿ ಇಲ್ಲ ಎಂದರು. ರಾಜ್ಯದಲ್ಲಿ ಅರಾಜಕತೆ, ಭ್ರಷ್ಟಾಚಾರ ಆಕಾಶಕ್ಕೆ ಮುಟ್ಟಿದೆ. ಕೇಂದ್ರದಲ್ಲಿ ಲೋಕಪಾಲ್‌ ಬರಬೇಕು, ಕರ್ನಾಟಕದಲ್ಲಿ ಕಟ್ಟುನಿಟ್ಟಾದ ಲೋಕಾಯುಕ್ತ ಬರಬೇಕು. ಬಿಜೆಪಿ ಸರ್ಕಾರ ಅನರ್ಹ ಸರ್ಕಾರ. ರಾಜ್ಯದಲ್ಲಿ ಗಣಿ ಅಕ್ರಮಗಳು ಹೆಚ್ಚಾಗಿವೆ ಎಂದರು.

ಪಿಎಸ್‌ಐ ಅಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಡೀ ವ್ಯವಸ್ಥೆಯಲ್ಲಿ ಲಂಚಗುಳಿತನ ತಾರಕಕ್ಕೇರಿದೆ. ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ಭ್ರಷ್ಟಾಚಾರ ನಾನು ಕಂಡಿಲ್ಲ. ನನ್ನ ಅವಧಿಯಲ್ಲಿ 8 ಲಕ್ಷ ಶಿಕ್ಷಕರ ನೇಮಕಾತಿ ನಡೆಯಿತು. ಒಂದು ಇಂಚು ಕೂಡ ಅಕ್ರಮಕ್ಕೆ ಅವಕಾಶ ಕೊಟ್ಟಿರಲಿಲ್ಲ ಎಂದರು. ಇಡೀ ವ್ಯವಸ್ಥೆಯನ್ನು ಕೆಡಿಸಲಾಗಿದೆ. ರಾಜಕಾರಣದಿಂದಲೇ ಈ ವ್ಯವಸ್ಥೆ ಕೆಟ್ಟು ಹೋಗಿದೆ. ಪಿಎಸ್‌ಐ ನೇಮಕಾತಿ ಸೇರಿದಂತೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಿಂದ ಇಡೀ ಎಲ್ಲಾ ನೇಮಕಾತಿಗಳಲ್ಲಿ ಅಕ್ರಮ ಆಗಿದೆ. ಇದಕ್ಕೆ ರಾಜಕಾರಣಿಗಳ ಕೈವಾಡ, ಅಧಿಕಾರಿಗಳ ಕುಮ್ಮಕ್ಕು ಇದೆ ಎಂದರು.

3ನೇ ಬಾರಿಯೂ ವಿಚಾರಣೆಗೆ ಪ್ರಿಯಾಂಕ್‌ ಗೈರು
ಬೆಂಗಳೂರು:
ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮ ‘ಡೀಲ್‌’ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಹಾಗೂ ಅದರ ನೈಜತೆ ಬಗ್ಗೆ ಸಾಕ್ಷ್ಯ ಸಲ್ಲಿಸುವಂತೆ ಸಿಐಡಿ 3ನೇ ಸೂಚನೆಗೂ ಕ್ಯಾರೇ ಎನ್ನದ ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮತ್ತೆ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಎರಡು ದಿನಗಳ ಹಿಂದೆ ಪ್ರಿಯಾಂಕ ಖರ್ಗೆ ಅವರಿಗೆ ನೋಟಿಸ್‌ ನೀಡಿತ್ತು. ಹಾಜರಾಗುವಂತೆ ನೋಟಿಸ್‌ ನೀಡಿತ್ತು. ಆದರೆ ಈ ನೋಟಿಸ್‌ಗೆ ವಕೀಲರ ಮೂಲಕ ಉತ್ತರಿಸಿರುವ ಅವರು, ವಿಚಾರಣೆಗೆ ಮೂರನೇ ಬಾರಿ ಗೈರಾಗಿದ್ದಾರೆ.