ಆಡಳಿತ ಬಿಗಿ ನಂತರ ಈಗ ಪಕ್ಷ ಸಂಘಟನೆ!

- ಹಳೆ ಮೈಸೂರು ಭಾಗದಲ್ಲಿ ಸಿಎಂ ಕಸರತ್ತು

- ಎಸ್‌ಎಂ ಕೃಷ್ಣ ಭೇಟಿ ಮುಖಂಡರಿಗೆ ಗಾಳ

- ಅಮಿತ್‌ ಶಾ ಸೂಚನೆ ಕಾರ್ಯಗತಕ್ಕೆ ಯತ್ನ

CM Basavaraj Bommai focus on Party organization says Leaders of Opposition parties from south Karnataka to join BJP san

ಬೆಂಗಳೂರು/ಮಂಡ್ಯ (ಮೇ.7): ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ (Home Minister Amith shah) ಸೂಚನೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವ ರಾಜ್ಯದ ಹಳೆ ಮೈಸೂರು ಭಾಗದಲ್ಲಿ (Old Mysore Area) ಅನ್ಯ ಪಕ್ಷಗಳ ಮುಖಂಡರನ್ನು ಸೆಳೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai ) ಹಾಗೂ ಪಕ್ಷದ ರಾಜ್ಯ ನಾಯಕರು ಗಂಭೀರವಾಗಿ ಕಾರ್ಯಪ್ರವೃತ್ತವಾಗಿದ್ದಾರೆ.

ಅದರ ಫಲವಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್‌ (Vartur Prakash), ಮಾಜಿ ಸಚಿವ ಎಸ್‌.ಡಿ.ಜಯರಾಂ ಪುತ್ರ ಅಶೋಕ್‌ ಜಯರಾಂ (Ashok Jayaram), ಮಾಲೂರಿನ ಮಾಜಿ ಶಾಸಕ ಮಂಜುನಾಥ್‌ ಗೌಡ, ಕೇಂದ್ರದ ಮಾಜಿ ಸಚಿವ ದಿ.ಅಂಬರೀಷ್‌ ಅವರ ಆಪ್ತ ಎಸ್‌.ಸಚ್ಚಿದಾನಂದ, ಮಂಡ್ಯದ ಲಕ್ಷ್ಮಿ ಅಶ್ವಿನ್‌ ಗೌಡ ಮತ್ತಿತರರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಈ ಮುಖಂಡರು ಬಿಜೆಪಿಗೆ ಸೇರುವ ಸಂಬಂಧ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿಯ ಮೂಲಗಳು ತಿಳಿಸಿವೆ.

ಎಸ್ಸೆಂಕೆ-ಸಿಎಂ ಭೇಟಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ (SM Krishna) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮೂಲತಃ ಮಂಡ್ಯದವರಾದ ಕೃಷ್ಣ ಅವರು ಹಳೆ ಮೈಸೂರು ಭಾಗದಲ್ಲಿ ಪ್ರಭಾವಿಗಳು. ಹೀಗಾಗಿ, ಈ ಭಾಗದಲ್ಲಿ ಪಕ್ಷ ಸಂಘಟನೆ ಕುರಿತಂತೆ ಬೊಮ್ಮಾಯಿ ಅವರು ಕೃಷ್ಣ ಅವರೊಂದಿಗೆ ಚರ್ಚಿಸಿದರು ಎನ್ನಲಾಗಿದೆ. ಈ ವೇಳೆ ಕಂದಾಯ ಸಚಿವ ಆರ್‌.ಅಶೋಕ್‌  (R Ashok) ಕೂಡ ಉಪಸ್ಥಿತರಿದ್ದರು.

ಕಳೆದ ಏಪ್ರಿಲ್‌ ತಿಂಗಳಲ್ಲಿ ಅಮಿತ್‌ ಶಾ ಅವರು ಬೆಂಗಳೂರಿಗೆ ಆಗಮಿಸಿದ ವೇಳೆ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ಬಗ್ಗೆಯೇ ಹೆಚ್ಚು ಚರ್ಚೆ ನಡೆಸಿದ್ದ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಲಪಡಿಸುವಂತೆ ಸೂಚನೆ ನೀಡಿದ್ದರು.

ಅಶೋಕ್‌ ಜಯರಾಂ ಶೀಘ್ರ ಬಿಜೆಪಿಗೆ: ಅಶೋಕ್‌ ಜಯರಾಂ ಅವರನ್ನು ಜೆಡಿಎಸ್‌ ಪಕ್ಷ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಎರಡು ವಿಧಾನಸಭಾ ಚುನಾವಣೆಯಲ್ಲೂ ಟಿಕೆಟ್‌ ನೀಡದೆ ವಂಚಿಸಿತು. ಮುಂದಿನ ಚುನಾವಣೆಗೂ ಪಕ್ಷದ ಟಿಕೆಟ್‌ ಖಚಿತಪಡಿಸದ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಜಯ ಸಾಧಿಸುವುದರೊಂದಿಗೆ ಶಕ್ತಿ ಪ್ರದರ್ಶಿಸಿರುವ ಅಶೋಕ್‌ ಜಯರಾಂ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆಯುವ ಉತ್ಸಾಹದಲ್ಲಿದ್ದಾರೆ. ಪಕ್ಷ ಸೇರ್ಪಡೆಗೂ ಮುನ್ನವೇ ಅಶೋಕ್‌ ಜಯರಾಂ ಬಿಜೆಪಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಗುರುತಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಸುಮಲತಾ ಆಪ್ತ ಕೇಸರಿ ಪಾಳಯಕ್ಕೆ: ಸಂಸದೆ ಸುಮಲತಾ ಅಂಬರೀಶ್‌ ಆಪ್ತರೆನಿಸಿರುವ ಎಸ್‌.ಸಚ್ಚಿದಾನಂದ ಅವರು ಬಿಜೆಪಿ ಸೇರುವುದು ಖಚಿತವಾಗಿದೆ. ಸುಮಲತಾ ಅಂಬರೀಶ್‌ ವಿದೇಶಕ್ಕೆ ತೆರಳಿರುವುದರಿಂದ ಅಲ್ಲಿಂದ ಬಂದ ನಂತರ ಪಕ್ಷವನ್ನು ಯಾವಾಗ ಸೇರಬೇಕೆಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಎಸ್‌.ಸಚ್ಚಿದಾನಂದ ಅವರ ನಿವಾಸಕ್ಕೆ ಸಚಿವರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೆ.ಸುಧಾಕರ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಶ್ರೀ ಶಂಕರೇಗೌಡ ಚಾರಿಟಬಲ್‌ ಟ್ರಸ್ಟ್‌ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ಶ್ರೀರಂಗಪಟ್ಟಣ ಕ್ಷೇತ್ರದೊಳಗೆ ಯುವ ನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಕೋಲಾರ ಬಿಜೆಪಿಯಲ್ಲಿ ಕೋಲಾಹಲ, MP ಮುನಿಸ್ವಾಮಿ ನಡೆಗೆ ಸಿಡಿದೆದ್ದ ಮೂಲ ಬಿಜೆಪಿಗರು

ಅಂಬರೀಶ್‌ ಇದ್ದ ಸಂದರ್ಭದಿಂದಲೂ ಎಸ್‌.ಸಚ್ಚಿದಾನಂದ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಅಂಬರೀಶ್‌ ನಿಧನದ ಬಳಿಕ ಸುಮಲತಾ ಅಂಬರೀಶ್‌ ಕಾಂಗ್ರೆಸ್‌ ಸೇರದೆ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣಾ ಅಖಾಡ ಪ್ರವೇಶಿಸಿದರು. ಸುಮಲತಾಗೆ ಬೆಂಬಲವಾಗಿ ನಿಂತರೆಂಬ ಕಾರಣಕ್ಕೆ ಕಾಂಗ್ರೆಸ್‌ ಪಕ್ಷದಿಂದ ಸಚ್ಚಿದಾನಂದ ಉಚ್ಚಾಟನೆಗೊಂಡರು. ಅಲ್ಲಿಂದ ಇಲ್ಲಿಯವರೆಗೆ ಸುಮಲತಾ ಬೆಂಬಲಿಗರಾಗಿ ಗುರುತಿಸಿಕೊಂಡು ಬಂದಿದ್ದ ಸಚ್ಚಿದಾನಂದ ಇದೀಗ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ. ಇನ್ನು ಕೋಲಾರದ ವರ್ತೂರು ಪ್ರಕಾಶ್‌ ಅವರು ಬಿಜೆಪಿ ಸೇರ್ಪಡೆಯಾಗುವುದಾಗಿ ಸ್ವತಃ ಘೋಷಿಸಿಕೊಂಡಿದ್ದಾರೆ.

ಮಾಜಿ ಸಚಿವ ಬಿಜೆಪಿ ಸೇಪ೯ಡೆಯ ಬಹಿರಂಗ ಸಭೆಗೆ ಬಂದವರಿಗೆ ಚಿಕನ್-ಮಟನ್ ಬಿರಿಯಾನಿ

ಸತತ 3ನೇ ದಿನವೂ ಸಿಎಂ ಸರಣಿ ಸಭೆ

ಬೆಂಗಳೂರು: ರಾಷ್ಟ್ರೀಯ ಬಿಜೆಪಿ ನಾಯಕ ಅಮಿತ್‌ ಶಾ ಅವರ ಸೂಚನೆಯಂತೆ ಆಡಳಿತಕ್ಕೆ ಚುರುಕು ನೀಡುವ ಹಿನ್ನೆಲೆಯಲ್ಲಿ ಸತತ 3ನೇ ದಿನವಾದ ಶುಕ್ರವಾರವೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕಂದಾಯ, ವಸತಿ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ ಮುಂತಾದ ಇಲಾಖೆಗಳ ಸಭೆ ನಡೆಸಿ ಬಜೆಟ್‌ ಯೋಜನೆಗಳ ಅನುಷ್ಠಾನಕ್ಕೆ ಸೂಚನೆಗಳನ್ನು ನೀಡಿದರು.

ಬಿಜೆಪಿ ಸೇರುವ ಸಂಭಾವ್ಯರು: ವರ್ತೂರು ಪ್ರಕಾಶ್‌, ಅಶೋಕ್‌ ಜಯರಾಂ, ಮಂಜುನಾಥ್‌ ಗೌಡ, ಎಸ್‌.ಸಚ್ಚಿದಾನಂದ, ಲಕ್ಷ್ಮಿ ಅಶ್ವಿನ್‌ ಗೌಡ

Latest Videos
Follow Us:
Download App:
  • android
  • ios