*  ಹಗರಣದಲ್ಲಿ ಚಲಾವಣೆಯಾದ 1.16 ಕೋಟಿ ಸಿಐಡಿಯಿಂದ ಜಪ್ತಿ*  ಕೋಟ್ಯಂತರ ರು. ವಹಿವಾಟಿಗೆ ಪುರಾವೆ*  ಭಾರಿ ಹಣ ಪತ್ತೆಯಿಂದ ಅಭ್ಯರ್ಥಿಗಳಿಗೆ ಸಂಕಷ್ಟ 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಮೇ.17): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣದಲ್ಲಿ ಕೋಟಿ ಕೋಟಿ ಹಣದ ವಹಿವಾಟಿಗೆ ಸಂಬಂಧಿಸಿದಂತೆ ರಾಜ್ಯ ಅಪರಾಧ ತನಿಖಾ ದಳವು (CID) ಮಹತ್ವದ ಪುರಾವೆ ಪತ್ತೆ ಹಚ್ಚಿದ್ದು, ಕಲಬುರಗಿ(Kalaburagi) ಜಿಲ್ಲೆ ಆಳಂದ ತಾಲೂಕಿನ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಸೇರಿದಂತೆ ಮೂವರು ಆರೋಪಿಗಳಿಂದ 1.16 ಕೋಟಿ ರು.ಗಳನ್ನು ಸಿಐಡಿ ಜಪ್ತಿ ಮಾಡಿದೆ.

ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ(PSI Recruitment Scam) ಅಭ್ಯರ್ಥಿಗಳಿಗೆ ಬ್ಲೂಟೂತ್‌(Bluetooth) ಪೂರೈಕೆದಾರ ಎನ್ನಲಾದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ, ರವೀಂದ್ರ ಹಾಗೂ ರಾಜು ಸೇರಿದಂತೆ ಇತರರಿಂದ ಈ ದೊಡ್ಡ ಮೊತ್ತವನ್ನು ಸಿಐಡಿ ವಶಪಡಿಸಿಕೊಂಡಿದೆ. ಈ ಹಣ ಜಪ್ತಿ ಸಂಬಂಧ ಕಲಬುರಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಈಗ ಹಣದ ಹರಿವಿನ ಮೂಲ ಶೋಧನೆ ಕಾರ್ಯ ಭರದಿಂದ ಮುಂದುವರೆದಿದೆ ಎಂದು ಸಿಐಡಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಪೊಲೀಸ್‌ ನೇಮಕಾತಿ ವಿಭಾಗದ ಡಿವೈಎಸ್ಪಿ ಬಂಧನ

ಇದರೊಂದಿಗೆ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮದಲ್ಲಿ ಕೋಟ್ಯಂತರ ರು. ವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಪುರಾವೆ ಸಿಕ್ಕಿದಂತಾಗಿದೆ. ಅಲ್ಲದೆ ಹಣ ಪತ್ತೆ ಹಿನ್ನೆಲೆಯಲ್ಲಿ ನೇಮಕಾತಿ ಅಕ್ರಮದ ಆರೋಪಿಗಳಿಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳ ತನಿಖೆ(Investigation) ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

ಝಣ ಝಣ ಕಾಂಚಾಣ:

ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ಆಕಾಂಕ್ಷಿಗಳಿಂದ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ ಹಾಗೂ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ಸೇರಿದಂತೆ ಇತರರು ಲಕ್ಷಾಂತರ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಬಳಿಕ ಕಲಬುರಗಿ ನಗರದ ದಿವ್ಯಾ ಮನೆ ಮೇಲೆ ದಾಳಿ ನಡೆಸಿದಾಗ ಕೇವಲ ಒಂದು ಲಕ್ಷ ರು. ನಗದು ಮಾತ್ರ ಜಪ್ತಿಯಾಗಿತ್ತು.
ಆರಂಭದಲ್ಲಿ ಹಣದ ವ್ಯವಹಾರಕ್ಕೆ ಪುರಾವೆ ಸಿಕ್ಕಿರಲಿಲ್ಲ. ಹೀಗಾಗಿ ನೇಮಕಾತಿ ಅಕ್ರಮ ಜಾಲದಲ್ಲಿ ಕೋಟಿ ಕೋಟಿ ಹಣದ ಹರಿದಾಟ ಪತ್ತೆಹಚ್ಚಲು ಪಟ್ಟು ಬಿಡದೆ ಸಿಐಡಿ ತೀವ್ರ ಶೋಧನೆ ನಡೆಸಿತು. ಕೊನೆಗೆ ತನಿಖಾ ತಂಡದ ಶ್ರಮ ಫಲಪ್ರದವಾಗಿದ್ದು, ಆರೋಪಿಗಳಾದ ಮಂಜುನಾಥ್‌, ರವೀಂದ್ರ ಹಾಗೂ ರಾಜು ಸೇರಿದಂತೆ ಇತರರಿಂದ 1.16 ಕೋಟಿ ರು. ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಮಾಜಿ ಪ್ರಧಾನಿ ದೇವೇಗೌಡರ ಭದ್ರತೆಯಲ್ಲಿದ್ದವನ ‘ಪಿಎಸ್‌ಐ’ ಕಳ್ಳಾಟ

ಭಾರಿ ಹಣ ಪತ್ತೆಯಿಂದ ಅಭ್ಯರ್ಥಿಗಳಿಗೆ ಸಂಕಷ್ಟ

ಈ ಹಣ ಪತ್ತೆ ಹಿನ್ನೆಲೆಯಲ್ಲಿ ನೇಮಕಾತಿ ಅಕ್ರಮದ ಸುಳಿಯಲ್ಲಿ ಸಿಲುಕಿರುವ ಕೆಲ ಅಭ್ಯರ್ಥಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಈ ಹಣವು ಕಪ್ಪು ಅಥವಾ ಬಿಳಿ ಹಣವೇ ಎಂಬುದಕ್ಕೆ ಆರೋಪಿಗಳು ದಾಖಲೆ ಸೂಕ್ತ ದಾಖಲಿಸಬೇಕಿದೆ. ಇಷ್ಟುದೊಡ್ಡ ಮೊತ್ತದ ವ್ಯವಹಾರವು ನಗದು ರೂಪದಲ್ಲೇ ನಡೆಸಿರುವುದಕ್ಕೆ ಕಾರಣ ಸಹ ಹೇಳಬೇಕಿದೆ ಎಂದು ಸಿಐಡಿ ಹೇಳಿದೆ.

ಐಟಿ-ಇ.ಡಿ.ಗೆ ಸಿಐಡಿ ಮಾಹಿತಿ?

ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಸಹ ಬಂಧಿತರಾಗಿದ್ದಾರೆ. ಹೀಗಾಗಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆಗೆ ಸಿಐಡಿ ಶಿಫಾರಸ್ಸು ಮಾಡಬಹುದು. ಆದರೆ ಈ ಹಗರಣದಲ್ಲಿ ಕಪ್ಪು ಹಣ ಚಲಾವಣೆಯಾಗಿದೆ. ಹಾಗೆ ಅಕ್ರಮ ಹಣ ವರ್ಗಾವಣೆ ಶಂಕೆ ಇದೆ. ಮೇಲಾಗಿ ಈ ಹಣವು ಖಾಸಗಿ ವ್ಯಕ್ತಿಗಳ ಬಳಿ ಪತ್ತೆಯಾಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಹಣದ ಕುರಿತು ಐಟಿ ಹಾಗೂ ಇ.ಡಿ.ಗೆ(ED) ಸಿಐಡಿ ಮಾಹಿತಿ ನೀಡಿದೆ ಎನ್ನಲಾಗುತ್ತಿದೆ.