PSI Recruitment Scam: ಮಾಜಿ ಪ್ರಧಾನಿ ದೇವೇಗೌಡರ ಭದ್ರತೆಯಲ್ಲಿದ್ದವನ ‘ಪಿಎಸ್‌ಐ’ ಕಳ್ಳಾಟ
* ಪಿಎಸ್‌ಐ ಹಗರಣದಲ್ಲಿ ಹೆಡ್‌ಕಾನ್‌ಸ್ಟೇಬಲ್ ಸಿಐಡಿ ಬಲೆಗೆ
* ಮಾಜಿ ಪ್ರಧಾನಿ ದೇವೇಗೌಡರ ಭದ್ರತೆಯಲ್ಲಿದ್ದ ಯಶ್ವಂತ್
* ಪಿಎಸ್‌ಐ ಆಗಲು ಮಾಜಿ ಪ್ರಧಾನಿ ಭದ್ರತೆಗೆ ಬಂದ?
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಮೇ.12): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ(HD Devegowda) ಭದ್ರತೆಗೆ ನಿಯೋಜಿತನಾಗಿದ್ದ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು, ಈಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದಲ್ಲಿ(PSI Recruitment Scam) ರಾಜ್ಯ ಅಪರಾಧ ತನಿಖಾ ದಳ (CID) ಬಲೆಗೆ ಬಿದ್ದಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ಹೆಡ್ ಕಾನ್‌ಸ್ಟೇಬಲ್ ಯಶವಂತ್ ದೀಪು(Yashwant Deepu) ಬಂಧಿತನಾಗಿದ್ದು(Arrest), ಇನ್ ಸರ್ವೀಸ್ ಕೋಟಾದಡಿ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಬಯಸಿ ಬೆಂಗಳೂರಿನಲ್ಲಿ(Bengaluru) ಪರೀಕ್ಷೆ(Exam) ಬರೆದಿದ್ದ. ತನ್ನ ಕನಸು ಈಡೇರಿಕೆಗೆ ಅಡ್ಡದಾರಿ ತುಳಿದ ಯಶವಂತ್, ಒಎಂಆರ್ ಶೀಟ್(OMR Sheet) ತಿದ್ದಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ .
ಜನವರಿಯಲ್ಲೇ ದೂರು ಬಂದರೂ ಮುಚ್ಚಿಟ್ಟರೇ?
ಇದರೊಂದಿಗೆ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಿದ್ದ ರಾಜಕಾರಣಿಗಳ(Politicians) ರಕ್ಷಣಾ ದಳದ ಎರಡನೇ ವಿಕೆಟ್ ಇದಾಗಿದೆ. ಈ ಮೊದಲು ಕಲಬುರಗಿ ಜಿಲ್ಲೆಯ ಅಫ್ಜಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್‌ನ ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ ಬಂಧಿತನಾಗಿದ್ದ. ಈಗ ಯಶವಂತ್ ಸಿಐಡಿ ಬಲೆಗೆ ಸಿಕ್ಕಿಬಿದ್ದಿದ್ದಾನೆ. ವಿಪರ್ಯಾಸವೆಂದರೆ ಈ ಇಬ್ಬರು ಸಹ ಇನ್ ಸರ್ವೀಸ್ ಕೋಟಾದಡಿಯೇ ಪಿಎಸ್‌ಐ ಹುದ್ದೆ ಪಡೆಯಲು ವಾಮ ಮಾರ್ಗದಲ್ಲಿ ಪ್ರಯತ್ನಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಎಸ್‌ಐ ಆಗಲು ಮಾಜಿ ಪ್ರಧಾನಿ ಭದ್ರತೆಗೆ ಬಂದ?
2008ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡ ಯಶವಂತ್, ಬಳಿ ನಗರದ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದ. ತರುವಾಯ ಸೇವಾ ಹಿರಿತನದ ಆಧಾರದ ಮೇರೆಗೆ ಮುಂಬಡ್ತಿ ಪಡೆದು ಕೆ.ಜೆ.ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲಿನಿಂದಲೂ ಪಿಎಸ್‌ಐ ಆಗುವ ಮಹಾತ್ವಾಕಾಂಕ್ಷೆ ಹೊಂದಿದ್ದ ಯಶವಂತ್, ಇದಕ್ಕಾಗಿ ಎರಡ್ಮೂರು ಬಾರಿ ಪ್ರಯತ್ನ ನಡೆಸಿ ವಿಫಲನಾಗಿದ್ದ.
ಎಸ್‌ಐ ನೇಮಕ ವಿಭಾಗದ ನಾಲ್ವರು ಸಿಐಡಿ ಬೋನಿಗೆ, ಅಕ್ರಮ ಖಚಿತ!
ಕೊನೆಗೆ ಇನ್ ಸರ್ವೀಸ್ ಕೋಟಾದಡಿ ಪಿಎಸ್‌ಐಗೆ ತಯಾರಿ ನಡೆಸಿದ್ದ ಆತ, 545 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರ ಬಿದ್ದ ನಂತರ ಈ ಬಾರಿ ಶತಾಗತಾಯ ಡಬಲ್ ಸ್ಟಾರ್ ಖಾಕಿ ಧರಿಸಲು ನಿಶ್ಚಯಿಸಿದ್ದ. ಇದಕ್ಕಾಗಿಯೇ ಕೆ.ಜಿ.ಹಳ್ಳಿ ಸಂಚಾರ ಠಾಣೆಯಿಂದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ ಭದ್ರತಾ ವಿಭಾಗಕ್ಕೆ ಎರವಲು ಸೇವೆ ಮೇರೆಗೆ ನಿಯೋಜನೆ ಪಡೆದ. ಠಾಣೆಯಲ್ಲಿದ್ದರೆ ಕಾರ್ಯದೊತ್ತಡದಿಂದ ಪಿಎಸ್‌ಐ ಹುದ್ದೆ ತಯಾರಿಗೆ ಅಡ್ಡಿಯಾಗಬಹುದು ಎಂದೂ ಆತ, ಮಾಜಿ ಪ್ರಧಾನ ಮಂತ್ರಿಗಳ ಭದ್ರತೆಗೆ ತೆರಳಿದ್ದ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಕೊನೆ ಅವಕಾಶ:
ಪಿಎಸ್‌ಐ ಆಗಲು ತನಗೆ ಕೊನೆ ಅವಕಾಶವಾಗಿದೆ. ಮುಂದಿನ ಬಾರಿಗೆ ವಯೋಮಿತಿ ಮೀರಬಹುದು ಎಂದು ಭಾವಿಸಿದ ಯಶವಂತ್, ಪಿಎಸ್‌ಐ ಆಗಲು ಪ್ರಭಾವಿ ವ್ಯಕ್ತಿಯೊಬ್ಬರ ಮೂಲಕ ನೇಮಕಾತಿ ಅಕ್ರಮ ಕೂಟದ ಸಂಪರ್ಕಿಸಿದ್ದಾನೆ. ಈ ಹುದ್ದೆ ಪಡೆಯಲು ಸಾಲ ಸೋಲ ಮಾಡಿ ಲಕ್ಷ ಲಕ್ಷ ರು. ಹಣ ಕೊಟ್ಟಿದ್ದ ಎಂದು ಮೂಲಗಳು ಹೇಳಿವೆ.